ಸಿದ್ದಾಪುರ, ಏ. ೨೯: ಹಾರುವ ದೊಡ್ಡಳಿಲನ್ನು ಬೇಟೆಯಾಡಿ ಸಾಯಿಸಿ ಮಾಂಸ ಮಾಡಿದ ಆರೋಪಿಯೋರ್ವರನ್ನು ಬಂಧಿಸುವಲ್ಲಿ ವೀರಾಜಪೇಟೆ ವಲಯ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ತಾಲೂಕಿನ ಪಾಲಂಗಾಲ ಗ್ರಾಮ ವ್ಯಾಪ್ತಿಯ ಅರಣ್ಯದಲ್ಲಿ ಹಾರುವ ದೊಡ್ಡಳಿಲನ್ನು ಬೇಟೆ ಮಾಡಿ ಸಾಯಿಸಿ ಮಾಂಸ ಮಾಡಿದ ಪಾಲಂಗಾಲ ಗ್ರಾಮದ ಕೆ. ಗಣೇಶ್ ಎಂಬವರ ಲೈನ್ಮನೆಯಲ್ಲಿ ವಾಸವಿರುವ ಅಯ್ಯಂಗೇರಿ ಗ್ರಾಮದ ನಿವಾಸಿ ಕೆ.ಎನ್. ಸುನಿಲ್ ಎಂಬಾತನನ್ನು ಬಂಧಿಸುವಲ್ಲಿ ಅರಣ್ಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈತನೊಂದಿಗೆ ಇದ್ದ ಆರೋಪಿಗಳಾದ ತೋರ ಗ್ರಾಮದ ಮುದ್ದು ಸೋಮಯ್ಯ
(ಮೊದಲ ಪುಟದಿಂದ) ಹಾಗೂ ಪಾಲಂಗಾಲ ಗ್ರಾಮದ ಕೆ. ಮೇದಪ್ಪ (ಹರೀಶ್) ಎಂಬಿಬ್ಬರು ತಲೆಮರೆಸಿ ಕೊಂಡಿದ್ದಾರೆ. ದೊಡ್ಡಳಿಲನ್ನು ಬೇಟೆಯಾಡಿ ಸಾಯಿಸಿದ ಖಚಿತ ಸುಳಿವಿನ ಮೇರೆಗೆ ವೀರಾಜಪೇಟೆ ವಲಯ ಅರಣ್ಯಾಧಿಕಾರಿಗಳು ಲೈನ್ಮನೆಯ ಮೇಲೆ ದಾಳಿ ನಡೆಸಿದರು.
ಈ ಸಂದರ್ಭ ಬೇಟೆಗೆ ಬಳಸಿದ್ದ ಕೋವಿ, ಕತ್ತಿ ಹಾಗೂ ಮಾಂಸವನ್ನು ಅರಣ್ಯಾಧಿಕಾರಿಗಳು ವಶಪಡಿಸಿ ಕೊಂಡು ಪ್ರಕರಣ ದಾಖಲಿಸಿ ಕೊಂಡರು. ವೀರಾಜಪೇಟೆ ಡಿಸಿಎಫ್ ಚಕ್ರಪಾಣಿ ಮಾರ್ಗದರ್ಶನದಲ್ಲಿ ಎಸಿಎಫ್ ಎ.ಜೆ. ರೋಶಿಣಿ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಉಪವಲಯ ಅರಣ್ಯಾಧಿಕಾರಿಗಳಾದ ಆನಂದ, ಸಂಜೀತ್, ಸೋಮಯ್ಯ, ಮೋನಿಷಾ, ಎಂ.ಎಸ್. ಶ್ರೀಶೈಲಾ, ಸಚಿನ್, ಅರಣ್ಯ ರಕ್ಷಕರಾದ ಮಾಲತೇಶ್ ಬಡಿಗೇರ್, ಯು.ಯು. ಸೋಮಯ್ಯ, ನಾಗರಾಜು, ಹುಸೇನ್, ಚಂದ್ರಶೇಖರ್, ಸಿಬ್ಬಂದಿಗಳಾದ ಪೊನ್ನಪ್ಪ, ಸಚಿನ್, ಪ್ರಕಾಶ್, ಮೊಣ್ಣಪ್ಪ ಹಾಗೂ ಚಾಲಕ ಅಶೋಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
- ವಾಸು