ಸುಂಟಿಕೊಪ್ಪ, ಏ. ೨೮: ಮನೆಯಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಕಾಫಿ ಬೆಳೆಗಾರ ವೃದ್ಧೆಯೋರ್ವಳ ಮನೆಗೆ ಮೂವರು ಅಪರಿಚಿತ ವ್ಯಕ್ತಿಗಳು ಮಾಸ್ಕ್ ಧರಿಸಿಕೊಂಡು ಏಕಾಏಕಿ ನುಗ್ಗಿ ವೃದ್ಧೆಯ ಬಾಯಿಗೆ ಸೀರೆ ಸೆರೆಗು ತುರುಕಿ ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ನಗದನ್ನು ಅಪಹರಿಸಿದ ಘಟನೆ ತಾ. ೨೭ರ ಸಂಜೆ ಸುಮಾರು ೭.೩೦ ಗಂಟೆಗೆ ನಡೆದಿದೆ.
ಸುಂಟಿಕೊಪ್ಪ ಸಮೀಪದ ಹಾರ್ಬೈಲ್ ಗ್ರಾಮದ ದಿವಂಗತ ಕುಂಞಣ್ಣ ರೈ ಅವರ ಪತ್ನಿ ಸರೋಜಿನಿ (೬೭) ಅವರು ತಮ್ಮ ೪ ಎಕರೆ ಕಾಫಿ ತೋಟ ನೋಡಿಕೊಂಡು ಜೀವನ ನಡೆಸುತ್ತಿದ್ದರು. ಇವರ ಮಗ ಗುತ್ತಿಗೆದಾರ ಪುರುಷೋತ್ತಮ ರೈ ಕುಶಾಲನಗರದಲ್ಲಿ ವಾಸವಾಗಿದ್ದು, ಆಗಿಂದಾಗ್ಗೆ ತಾಯಿಯ ಮನೆಗೆ ಬಂದು ಹೋಗುತ್ತಿದ್ದರು. ಸರೋಜಿನಿ ಅವರ ಹಿರಿಯ ಮಗ ನಿಧನರಾಗಿದ್ದಾರೆ.
ದರೋಡೆಕೋರರ ಸಂಚು: ಒಂಟಿ ಮಹಿಳೆ ಮನೆಯಲ್ಲಿರುವುದನ್ನು ಗಮನಿಸಿದ ದರೋಡೆಕೋರರು ತಾ. ೨೭ ರಂದು ಸಂಜೆ ೭.೩೦ಕ್ಕೆ ಮುಹೂರ್ತ ನಿಗಧಿಗೊಳಿಸಿದರು. ಸರೋಜಿನಿಯವರು ಮನೆಯ ಹಿಂಭಾಗದಲ್ಲಿ
(ಮೊದಲ ಪುಟದಿಂದ) ಬಟ್ಟೆಯನ್ನು ಒಣಗಿಸಿ ಹಾಕಿದ್ದು, ಅದನ್ನು ತೆಗೆದುಕೊಂಡು ಮನೆ ಒಳಗೆ ಪ್ರವೇಶಿಸಿದ ಮೂವರು ಸರೋಜಿನಿ ಅವರನ್ನು ಹಿಡಿದು ಎಳೆದೊಯ್ದು ಒಬ್ಬಾತ ಅವರ ಸೀರೆಯ ಸೆರಗನ್ನು ಬಾಯಿಗೆ ತುರುಕಿ ಮತ್ತೊಬ್ಬ ಅವರ ೨ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡನು. ಮತ್ತೊಬ್ಬ ವೃದ್ಧೆಯ ಕುತ್ತಿಗೆ ಹಿಸುಕಿ ಪ್ರಜ್ಞೆ ತಪ್ಪಿಸಿದ್ದನು ಎನ್ನಲಾಗಿದೆ. ನಂತರ ಸೆಲ್ಫ್ ಬೀಗವನ್ನು ಮುರಿದು ೩೨ ಗ್ರಾಂ. ಚಿನ್ನದ ಸರ, ೧೨ ಗ್ರಾಂ. ಚಿನ್ನದ ೪ ಬಳೆ, ೨ ಗ್ರಾಂ.ನ ೧ ಉಂಗುರ, ಸರೋಜಿನಿ ಧರಿಸಿದ್ದ ೨೪ ಗ್ರಾಂ ಚಿನ್ನದ ಕನಕ ಮಾಲೆ ಹಾಗೂ ಬೀರುವಿನಲ್ಲಿದ್ದ ೩೫,೦೦೦ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಚಿನ್ನಾಭರಣಗಳ ಮೊತ್ತ ಸುಮಾರು ೩,೯೦,೦೦೦ ರೂ. ಎಂದು ಅಂದಾಜಿಸಲಾಗಿದೆ. ಸರೋಜಿನಿ ಅವರ ಪುತ್ರ ಪುರುಷೋತ್ತಮ ರೈ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬAಧ ದೂರು ನೀಡಿದ್ದಾರೆ.
ಸ್ಥಳಕ್ಕೆ ಸೋಮವಾರಪೇಟೆ ತಾಲೂಕು ಡಿವೈಎಸ್ಪಿ ಶೈಲೇಂದ್ರ, ವೃತ್ತನಿರೀಕ್ಷಕ ಮಹೇಶ್, ಸುಂಟಿಕೊಪ್ಪ ಠಾಣಾಧಿಕಾರಿ ಪುನೀತ್, ವೆಂಕಟರಮಣ ತೆರಳಿ ಮಹಜರು ನಡೆಸಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನವು ಗುರುತು ಪತ್ತೆ ಹಚ್ಚದಂತೆ ಅರಿಶಿಣ ಪುಡಿಯನ್ನು ಎರಚಿ ದರೋಡೆಕೋರರು ಪರಾರಿಯಾಗಿದ್ದಾರೆ.