ಮಡಿಕೇರಿ, ಏ. ೨೮: ‘ಪಿ.ಪಿ.ಇ ಕಿಟ್ ಧರಿಸಿ ಡೆಡ್‌ಬಾಡಿ ಪ್ಯಾಕ್ ಮಾಡುತ್ತಿದ್ದೇನೆ; ಇದು ಇಂದಿನ ೫ನೇ ಶವವಾಗಿದೆ. ನಾನು ಕೆಲಸ ಮುಗಿಸಿ ನಿಮಗೆ ಹಿಂತಿರುಗಿ ಕರೆ ಮಾಡುವೆ,’ ಎಂದು ವಿವರಿಸುತ್ತಾ ಸೈಯದ್ ಹುಸೇನ್ ತಮ್ಮ ಕೆಲಸಕ್ಕೆ ಹಿಂದಿರುಗಿದರು. ಮಡಿಕೇರಿ ಜಿಲ್ಲಾ ಆಸ್ಪತ್ರೆಯ ವಿಧಿವಿಜ್ಞಾನ ಇಲಾಖೆಗೆ ನಾಲ್ಕು ವರ್ಷದ ಹಿಂದೆ ನೇಮಕಗೊಂಡ ಸೈಯದ್ ಹುಸೇನ್, ತಮ್ಮ ವೃತ್ತಿಜೀವನದಲ್ಲಿ ಅನೇಕ ಯಾತನಾಮಯ ಸನ್ನಿವೇಶಗಳನ್ನು ಎದುರಿಸಿದ್ದಾರೆ.
ಗರ್ಭಿಣಿಯ, ಭ್ರೂಣದ ಸಾವಿನ ಸಂದರ್ಭ ಮರಣೋತ್ತರ ಪರೀಕ್ಷೆ ನಡೆಸುವ ಸನ್ನಿವೇಶ ಸೈಯದ್ ಅನೇಕ ಬಾರಿ ತಮ್ಮ ಜೀವನ ಆಯ್ಕೆಗಳ ಬಗ್ಗೆ ಮರುಚಿಂತಿಸಿರುತ್ತಾರೆ. ಆದರೆ ಈವರೆಗೂ ತಮ್ಮ ವೃತ್ತಿ ಧರ್ಮವನ್ನು ನಿಷ್ಠೆಯಿಂದ ಪಾಲಿಸುತ್ತಾ ಬಂದಿರುತ್ತಾರೆ. ಕೊಡಗಿನಲ್ಲಿ ಈವರೆಗೆ ೯೩ ನಿವಾಸಿಗಳು ಕೋವಿಡ್ ಸೋಂಕಿನಿAದ ಮೃತಪಟ್ಟಿರುತ್ತಾರೆ. ಈ ಎಲ್ಲಾ ಸೋಂಕಿತರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈಯದ್ ಹಾಗೂ ರಾಬರ್ಟ್ ರೊಡ್ರಿಗಸ್ ಸರಕಾರದ ಮಾರ್ಗಸೂಚಿಯಂತೆ ಪ್ಯಾಕ್‌ಮಾಡಿ ಮೃತರ ಕುಟುಂಬಕ್ಕೆ ಶವವನ್ನು ಹಸ್ತಾಂತರಿಸುತ್ತಿದ್ದಾರೆ. ಸುಮಾರು ಒಂದು ವರ್ಷದಿಂದ ಈ ಇಬ್ಬರು ಸೇವಕರು ಯಾವದೇ ಅಪೇಕ್ಷೆಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸೇವೆಯನ್ನು ಶ್ಲಾಘಿಸದಿದ್ದರೂ, ಹೀಯಾಳಿಸಬೇಡಿ ಎಂದು ಅವರು ‘ಶಕ್ತಿ’ ಮೂಲಕ ಕೋರಿಕೊಂಡರು.
‘೨೦೨೦ ಏಪ್ರಿಲ್ ತಿಂಗಳಿನಿAದ ನಾವಿಬ್ಬರೇ (ಸೈಯದ್ ಮತ್ತು ರಾಬರ್ಟ್) ಕೋವಿಡ್ ಸೋಂಕಿತರ ಮೃತದೇಹವನ್ನು ಪ್ಯಾಕ್ ಮಾಡುತ್ತಾ ಬಂದಿದ್ದೇವೆ. ಈ ವರೆಗೆ ಬೇರೆ ಯಾರೂ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿಲ್ಲ. ಸುಮಾರು ಒಂದು ವರ್ಷದಿಂದ ನಾವು ನಮ್ಮ ಕುಟುಂಬದವರೊAದಿಗೂ ಹೆಚ್ಚು ಸಮಯ ಕಳೆದಿಲ್ಲ. ಯಾವಾಗಲಾದರೂ ಒಮ್ಮೆ ಮನೆಗೆ ತೆರಳಿ ಕೆಲವು ನಿಮಿಷವಷ್ಟೇ ಇದ್ದು ಹಿಂತಿರುಗುತ್ತೇವೆ,’ ಎಂದು ಸೈಯದ್ ಅನುಭವ ಹಂಚಿಕೊAಡರು. ಒಂದು ವರ್ಷದಿಂದ ಹಬ್ಬದ ಸಂಭ್ರಮವಾಗಲಿ ಅಥವಾ ಇನ್ನಿತರ ಸಂತೋಷ ಕೂಟಗಳಲ್ಲಿಯಾಗಲಿ ಪಾಲ್ಗೊಳ್ಳುವ ಅವಕಾಶವೇ ಇವರಿಗೆ ಒದಗಿಬಂದಿಲ್ಲ. ಇತರರ ಸುರಕ್ಷತೆಯ ದೃಷ್ಟಿಯಿಂದ ಇವರು ತಮ್ಮನ್ನು ತಾವು ಸಮಾಜದಿಂದಲೇ ದೂರವಿರಿಸಿಕೊಂಡಿದ್ದಾರೆ.
‘ನಾವು ಪ್ರತಿನಿತ್ಯ ಪಿ.ಪಿ.ಇ ಕಿಟ್ ಧರಿಸಿ ಕೆಲಸ ನಿರ್ವಹಿಸುತ್ತಿದ್ದೇವೆ. ನಾವಷ್ಟೇ ಅಲ್ಲ, ಎಲ್ಲಾ ವೈದ್ಯರು, ಶುಶ್ರೂಕಿಯರು ಹಾಗೂ ಇನ್ನಿತರ ಡಿ-ಗ್ರೂಪ್ ನೌಕರÀರು ಹಗಲು-ರಾತ್ರಿ ಎನ್ನದೇ ಶ್ರಮಪಡುತ್ತಿದ್ದಾರೆ. ಸರಕಾರ ಆಸ್ಪತ್ರೆಯಲ್ಲಿ ಹೆಚ್ಚು ಮಂದಿಯನ್ನು ನೇಮಕಾತಿಯೂ ಮಾಡಿಲ್ಲ, ನಮ್ಮ ವೇತನ ಹೊರತು ಪಡಿಸಿ ನಮ್ಮೆಲ್ಲರ ಹೆಚ್ಚುವರಿ ಸಮಯದ ಕಾರ್ಯಗಳಿಗೆ ಪ್ರೋತ್ಸಾಹ ಧÀನವನ್ನೂ ನೀಡಿರುವದಿಲ್ಲ. ಆದರೂ ನಾವೆಲ್ಲರು ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದೇವೆ,’ ಎಂದು ಮುಕ್ತ ನುಡಿಯಾಡಿದರು. ನಿತ್ಯವೂ ಪಿ.ಪಿ.ಇ ಕಿಟ್ ಧರಿಸಿ ಕೆಲಸ ನಿರ್ವಹಿಸುವ ಇವರಿಗೆ ನೀರು ಕುಡಿಯಲೂ ಸಹ ಕೆಲವೊಮ್ಮೆ ಪರದಾಡಬೇಕಾಗುತ್ತದೆ.
ಕೆಲಸ ಮುಗಿಸಿ ಮನೆಗೆ ತೆರಳುವುದಷ್ಟೇ ತಡ, ಆಸ್ಪತ್ರೆಯಿಂದ ಕರೆಬಂದರೆ ಪಿ.ಪಿ.ಇ ಕಿಟ್ ಧರಿಸಿ ಪುನಃ ಕೆಲಸಕ್ಕೆ ಹಿಂತಿರುಗಬೇಕಾದ ಪರಿಸ್ಥಿತಿ. ಇದೇ ಭಾನುವಾರದಂದು ಆಸ್ಪತ್ರೆಯಿಂದ ಬೆಳಗಿನ ಜಾವ ಸುಮಾರು ೨.೩೦ಕ್ಕೆ ಇವರ ಫೋನ್‌ಗೆ ಕರೆ ಬರುತ್ತದೆ. ಸೋಂಕಿತರೊಬ್ಬರು ಮೃತಪಟ್ಟಿದ್ದರಿಂದ ಇವರು ತಕ್ಷಣ ಸೋಂಕಿತರ ಶವವನ್ನು ಪ್ಯಾಕ್ ಮಾಡಲು ತೆರಳಬೇಕಾಗುತ್ತದೆ. ಬೆಳಿಗ್ಗೆ ೨.೩೦ಕ್ಕೆ ಆಸ್ಪತ್ರೆಗೆ ತೆರಳಿದ ಇವರು ಸುಮಾರು ೪.೩೦ಕ್ಕೆ ತಮ್ಮ ರೂಂಗೆ ತೆರಳುತ್ತಾರೆ. ಮತ್ತೆ ಬೆಳಗ್ಗೆ ೬ಕ್ಕೆ ಆಸ್ಪತ್ರೆಗೆ ಹಿಂತಿರುಗುತ್ತಾರೆ. ‘ಅನೇಕ ಬಾರಿ ನಮಗೆ ಊಟಮಾಡಲೂ ಸಹ ಸಾಧ್ಯವಿಲ್ಲ. ಪಿ.ಪಿ.ಇ ಕಿಟ್ ನಿತ್ಯವೂ ಧರಿಸುವ ಕಾರಣ ಹಲವಾರು ಬಾರಿ ಬರಿ ಬಿಸ್‌ಕೆಟ್ ತಿಂದು ಹಸಿವು ನೀಗಿಸಿಕೊಳ್ಳುತ್ತೇವೆ,’ ಎಂದು ಅವರು ಮಾಹಿತಿಯತ್ತರು.
‘ಇಷ್ಟೆಲ್ಲಾ ಮಾಡಿದರೂ ಕೆಲವರು ನಮ್ಮ ಸೇವೆಯನ್ನು ಕಡೆಗಣಿಸುತ್ತಾರೆ,’ ಎಂದು ಅವರು ಬೇಸರ ವ್ಯಕ್ತ ಪಡಿಸುತ್ತಾರೆ. ಕೋವಿಡ್ ಸೋಂಕೇ ಒಂದು ವದಂತಿ, ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವವರು ಅಮಾನವೀಯರು, ಆರೋಗ್ಯ ಕಾರ್ಯಕರ್ತರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ... ಹೀಗೆಲ್ಲ ಹೇಳಿ ಅಂತರ್ ಜಾಲದಲ್ಲಿ ಪ್ರಚಾರಗಳಿಸುವವರಿಗೆ ತನ್ನಲ್ಲಿ ಒಂದು ಉತ್ತರವಿದೆ ಎಂದು ವಿವರಿಸುವ ಸೈಯದ್, ‘ಇಂತವರು ಕೇವಲ ಒಂದು ದಿನ ಪಿ.ಪಿ.ಇ ಕಿಟ್ ಧರಿಸಿ ನಮ್ಮ ಕಾರ್ಯಗಳನ್ನು ನೆರವೇರಿಸಲಿ. ಮತ್ತೆ ಆರೋಗ್ಯ ಕಾರ್ಯಕರ್ತರ ಬಗ್ಗೆ ಮಾತನಾಡಲಿ,’ ಎಂದು ಹೇಳುತ್ತಾರೆ. ಸ್ವಾರ್ಥ ರಹಿತವಾಗಿ ನಿಷ್ಠೆಯಿಂದ ಕಾರ್ಯನಿವಹಿಸುತ್ತಿರುವ ಇವರು ‘ಶಕ್ತಿ’ ಮೂಲಕ ಕೇವಲ ಒಂದು ವಿನಂತಿ ಮಾಡಲು ಬಯಸುತ್ತೇನೆ ಎನ್ನುತ್ತ ‘ನಮಗೆ ಯಾವದೇ ಫಲಾಪೇಕ್ಷೆ ಇಲ್ಲ. ಆದರೆ ಜನರು ಆರೋಗ್ಯ ಕಾರ್ಯಕರ್ತÀರಲ್ಲಿ ಮಾತನಾಡುವಾಗ ಗೌರವದಿಂದ ಮಾತನಾಡಿದರಷ್ಟೇ ನಮಗೆ ಸಾಕು,’ ಎಂದು ಕೊಡಗಿನ ಜನರಲ್ಲಿ ವಿನಂತಿಸುತ್ತಾರೆ. -ಪ್ರಜ್ಞಾ ಜಿ.ಆರ್.