ವೀರಾಜಪೇಟೆ, ಏ. ೨೭: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದಲ್ಲಿರುವ ದಂತ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪೂರ್ವ ತಯಾರಿ ಪರೀಕ್ಷೆ ನಡೆಸಿದ ದೂರಿನ ಮೇರೆ ಕೋವಿಡ್ ನಿಯಮ ಉಲ್ಲಂಘನೆ ಆರೋಪದಲ್ಲಿ ಕಾಲೇಜು ಆಡಳಿತಕ್ಕೆ ನೋಟೀಸ್ ನೀಡಲಾಗಿದೆ. ತರಗತಿ ನಡೆಸುತ್ತಿರುವುದಲ್ಲದೆ ಕಾಲೇಜಿನಲ್ಲಿ ಕೋವಿಡ್ ಷರತ್ತು ಉಲ್ಲಂಘಿಸಿ ಕ್ಯಾಂಟೀನ್ ಅನ್ನು ಕೂಡ ಪ್ರಾರಂಭಿಸಿದ್ದು, ವೀರಾಜಪೇಟೆ ತಾಲೂಕಿನ ಕೊರೊನಾ ಜಾಗೃತಿ ತಂಡ ಇಂದು ಬೆಳಿಗ್ಗೆ ಕಾಲೇಜಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳು ಅಲ್ಲಲ್ಲಿ ಕುಳಿತು ಆಹಾರ ಸೇವನೆ ಮಾಡುತ್ತಿದ್ದುದು ಕಂಡು ಬಂತು. ಈ ಎರಡು ಘಟನೆಗಳಿಗೆ ಸಂಬAಧಿಸಿದAತೆ ತಾಲೂಕು ತಹಶೀಲ್ದಾರ್ ಯೋಗಾನಂದ ಅವರು ಕಾಲೇಜು ಆಡಳಿತ ಮಂಡಳಿಗೆ ‘ಶೋಕಾಸ್ ನೋಟೀಸ್’ ನೀಡಿದ್ದಾರೆ.
ಕಾಲೇಜಿನ ಹಾಸ್ಟೆಲ್‌ನಲ್ಲಿ ತಂಗಿರುವ ವಿದ್ಯಾರ್ಥಿಗಳು ಸ್ವಇಚ್ಚೆಯಿಂದ ತಮ್ಮ ಊರುಗಳಿಗೆ ಹಿಂತಿರುಗಬಹುದು. ಕಾಲೇಜಿನ ಸಿಬ್ಬಂದಿ ಮಾತ್ರ ಕಾಲೇಜಿನ ಆವರಣದಲ್ಲಿ ಇರಬಹುದು ಹಾಗೂ ಯಾವುದೇ ತರಗತಿಯನ್ನು ನಡೆಸಬಾರದೆಂದು ಕಾಲೇಜು ಆಡಳಿತ ಮಂಡಳಿಗೆ ಯೋಗಾನಂದ ಅವರು ಸೂಚಿಸಿದ್ದಾರೆ. ಮಕ್ಕಳಿಗೆ ಆಫ್‌ಲೈನ್ ಪರೀಕ್ಷೆ ನಡೆಸಲು ಸರಕಾರದ ಗೈಡ್‌ಲೈನ್ಸ್ ಇದೆ ಎಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದ್ದು, ಇದನ್ನು ಪರಿಶೀಲಿಸುವುದಾಗಿ ತಹಶೀಲ್ದಾರ್ ಯೋಗಾನಂದ ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುವುದೆಂದು ಅವರು ಹೇಳಿದ್ದಾರೆ.