ಸೋಮವಾರಪೇಟೆ, ಏ. ೨೭: ಸೋಮವಾರದಂದು ನಡೆಯುವ ಸೋಮವಾರಪೇಟೆಯ ಸಂತೆಯನ್ನು ರದ್ದುಗೊಳಿಸಿ ಪಟ್ಟಣ ಪಂಚಾಯಿತಿ ಆದೇಶ ಹೊರಡಿಸಿದ ಹಿನ್ನೆಲೆ ಪಟ್ಟಣದ ರಸ್ತೆ ಬದಿಗಳೇ ಸಂತೆಯAತಾಗಿ ಮಾರ್ಪಟ್ಟಿತ್ತು. ಎಷ್ಟೇ ಎಚ್ಚರಿಕೆಯ ಸೂಚನೆಗಳನ್ನು ನೀಡಿದರೂ ಸಹ ಸಾರ್ವಜನಿಕರು ಕ್ಯಾರೇ ಎನ್ನದೆ ಸಾಮಾಜಿಕ ಅಂತರಕ್ಕೆ ಎಳ್ಳುನೀರು ಬಿಟ್ಟು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು.
ಸರಿಯಾಗಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೊರೊನಾ ಮಾರ್ಗಸೂಚಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ ಮಂದಿಗೆ ಬುದ್ದಿವಾದ ಹೇಳುವಷ್ಟರಲ್ಲಿ ಪೊಲೀಸರು ಹಾಗೂ ಇತರ ಇಲಾಖಾಧಿಕಾರಿಗಳು ಸುಸ್ತಾದರು.
ರಸ್ತೆಯಲ್ಲೇ ಸಂತೆ: ಸೋಮವಾರದ ಸಂತೆಯನ್ನು ರದ್ದುಗೊಳಿಸಿದ್ದರೂ ಸಹ ಹಲವಷ್ಟು ವರ್ತಕರು ಪಟ್ಟಣದ ರಸ್ತೆ ಬದಿಯಲ್ಲೇ ಅಂಗಡಿ ಮುಂಗಟ್ಟುಗಳನ್ನು ತೆರೆದಿದ್ದರಿಂದ ಅಶುಚಿತ್ವದ ತಾಣದಲ್ಲೇ ವ್ಯಾಪಾರ ವಹಿವಾಟು ನಡೆಯಿತು. ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ರಸ್ತೆ ಬದಿಯಲ್ಲಿ ಕಂಡುಬAತು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದ ಮುಂಭಾಗದಲ್ಲೂ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸುವ ಮೂಲಕ ಶುಚಿತ್ವಕ್ಕೆ ಎಳ್ಳುನೀರು ಬಿಟ್ಟಂತಾಯಿತು. ಸಿ.ಕೆ. ಸುಬ್ಬಯ್ಯ ರಸ್ತೆ, ಖಾಸಗಿ ಬಸ್ ನಿಲ್ದಾಣದ ರಸ್ತೆ, ಮಡಿಕೇರಿ ರಸ್ತೆಯ ಕನ್ನಡಾಂಬೆ ಸರ್ಕಲ್ ಬಳಿಯ ರಸ್ತೆ-ಚರಂಡಿಯ ಇಕ್ಕೆಲಗಳಲ್ಲಿ ಸಂತೆ ತಲೆ ಎತ್ತಿತ್ತು.
ಸಾಮಾಜಿಕ ಅಂತರ ಪಾಲಿಸದ ಹಿನ್ನೆಲೆ ಪೊಲೀಸರು ಮಧ್ಯ ಪ್ರವೇಶಿಸಿ ನಿಯಮ ಉಲ್ಲಂಘಿಸಿದ ವರ್ತಕರು ಹಾಗೂ ಸಾರ್ವಜನಿಕರಿಗೆ ದಂಡ ವಿಧಿಸಿದರು. ಮಧ್ಯಾಹ್ನ ೧ ಗಂಟೆ ವರೆಗೂ ರಸ್ತೆ ಬದಿಯಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ೧ ಗಂಟೆಯ ನಂತರ ರಸ್ತೆ ಬದಿಯ ವ್ಯಾಪಾರವನ್ನು ನಿರ್ಬಂಧಿಸಿ ಅಂಗಡಿ ಮುಂಗಟ್ಟು ಗಳನ್ನು ಪೊಲೀಸರು ಎತ್ತಿಸಿದರು.
ಪಟ್ಟಣದ ಕೆಲವೊಂದು ಅಂಗಡಿಗಳಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ವಹಿವಾಟು ನಡೆಯಿತು. ಪೊಲೀಸರು ಮೈಕ್ ಮೂಲಕ ಸೂಚನೆ ನೀಡುತ್ತಾ ಪಟ್ಟಣದಲ್ಲಿ ಸಾಗಿದರು. ಅಂಗಡಿಗಳ ಮುಂದೆ ಮಾರ್ಕಿಂಗ್ ಮಾಡದ ಮಾಲೀಕರಿಗೆ ಎಚ್ಚರಿಕೆ ನೀಡಿದ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಕಡ್ಡಾಯವಾಗಿ ಮಾರ್ಕಿಂಗ್ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವಂತೆ ವರ್ತಕರಿಗೆ ಸೂಚಿಸಿದರು. ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ನಿಯಮ ಉಲ್ಲಂಘನೆ: ದಂಡ
ಸAತೆ ದಿನವಾದ ಹಿನ್ನೆಲೆ ಸೋಮವಾರ ಪಟ್ಟಣದಲ್ಲಿ ಹೆಚ್ಚಿನ ಜನಜಂಗುಳಿ ಉಂಟಾದ್ದರಿAದ ತಾಲೂಕು ತಹಶೀಲ್ದಾರ್ ಆರ್. ಗೋವಿಂದರಾಜು ಅವರು ಇತರ ಇಲಾಖಾಧಿಕಾರಿಗಳ ತಂಡದೊAದಿಗೆ ಪಟ್ಟಣದಲ್ಲಿ ಸಂಚರಿಸಿ ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದವರಿಗೆ ದಂಡ ವಿಧಿಸಿದರು.
ಅಂಗಡಿ ಮುಂಗಟ್ಟು-ಸಾರ್ವಜನಿಕ ಪ್ರದೇಶದಲ್ಲಿ ಸಾಮಾಜಿಕ ಅಂತರ ಪಾಲಿಸದ, ಮಾಸ್ಕ್ ಧರಿಸದ ಮಂದಿಗೆ ದಂಡ ವಿಧಿಸಿದರಲ್ಲದೆ, ಮಾರ್ಗಸೂಚಿ ಉಲ್ಲಂಘಿಸಿದರೆ ಅಂಗಡಿಗಳ ಪರವಾನಗಿ ರದ್ದುಗೊಳಿಸಿ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು.
ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯಾಧಿಕಾರಿ ಉದಯ ಕುಮಾರ್ ಸೇರಿದಂತೆ ಪ.ಪಂ., ಕಂದಾಯ, ಪೊಲೀಸ್ ಇಲಾಖಾ ಸಿಬ್ಬಂದಿಗಳು ತಹಶೀಲ್ದಾರ್ರೊಂದಿಗೆ ಪಟ್ಟಣದಲ್ಲಿ ಬೀಟ್ ನಡೆಸಿ, ಕೊರೊನಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು. -ವಿಜಯ್