ಕಣಿವೆ, ಏ. ೨೭: ಇದು ಅಂತಿAತಹ ಪುಷ್ಪವಲ್ಲ. ಹಾಗಂತ ಈ ಪುಷ್ಪ ಕಂಡ ಕಂಡಲ್ಲಿ ಸಿಗೋದು ಇಲ್ಲ. ಮಹಾಶಿವನಿಗೆ ಅತ್ಯಂತ ಪ್ರಿಯವಾದುದು ಈ ಪುಷ್ಪ.
ಈ ಪುಷ್ಪದ ಕಲಾಕೃತಿಗೆ ಸರಿ ಸಾಟಿಯಾದ ಪುಷ್ಪ ಮತ್ತೊಂದಿಲ್ಲ. ನಿಸರ್ಗ ದೇವತೆಯೇ ಸೃಷ್ಟಿಯೊಳಗೆ ನಿರ್ಮಾಣ ಮಾಡಿರುವ ಈ ಪುಷ್ಪ ಪರಶಿವನ ವಾಹನವಾದ ಸಾವಿರ ಹೆಡೆಯ ನಾಗ ದೇವನ ಹೆಡೆಯನ್ನು ಹೋಲುತ್ತದೆ. ಶಿವಲಿಂಗದ ರೂಪು ತಳೆದಿದೆ. ಅದೇ ನಾಗಲಿಂಗ ಪುಷ್ಪ.
ಬಳ್ಳಿಯ ಅಥವಾ ಮರದ ಬುಡದಿಂದಲೇ ಅರಳುವ ಏಳಡಿ ಸರ್ಪದಾಕಾರದಲ್ಲಿ ನಾಲಿಗೆ ಚಾಚಿದಂತಹ ರೂಪದಲ್ಲಿ ಅರಳುವ ಈ ಸುಂದರ ಪುಷ್ಪ ಅತ್ಯಂತ ಸುವಾಸನೆಯನ್ನು ಸುತ್ತಲ ಪರಿಸರಕ್ಕೆ ಹರಡುತ್ತದೆ.
ಸಾಮಾನ್ಯವಾಗಿ ಶಿವ ದೇವಾಲಯಗಳ ಆವರಣದಲ್ಲಿ ಮತ್ತು ಕೆಲವು ಮಠ-ಮಂದಿರಗಳ ಬಳಿ ಈ ವಿಶೇಷವಾದ ನಾಗಲಿಂಗ ಪುಷ್ಟದ ಮರಗಳನ್ನು ಬೆಳೆಸಲಾಗುತ್ತದೆ. ಕುಶಾಲನಗರ ಸಮೀಪದ ಹುಲುಗುಂದದ ಸರ್ಕಾರಿ ಆಸ್ಪತ್ರೆಯ ಆವರಣ, ತೊರೆನೂರು ವಿರಕ್ತ ಮಠ ಹಾಗೂ ಬೆಟ್ಟದಪುರದ ಮಠದ ಆವರಣದಲ್ಲಿ ಈ ನಾಗಲಿಂಗ ಪುಷ್ಪದ ಮರವನ್ನು ಕಾಣಬಹುದಾಗಿದೆ.
ಶಿವ ದೇಗುಲದಲ್ಲಿ ಈ ಹೂವನ್ನು ಪರ ಶಿವನ ತಲೆಯ ಮೇಲಿಟ್ಟು ಪೂಜಿಸಿದರೆ ನೋಡುಗ ಭಕ್ತರಾಶಿಗೆ ಅದು ಶಿವನ ತಲೆಯ ಮೇಲಿನ ನಾಗಾಭರಣದಂತೆ ಭಾಸವಾಗುತ್ತದೆ.
ಪುರಾಣದಲ್ಲಿ ಹೇಳಿದಂತೆ ಸಾವಿರ ಹೆಡೆಯ ಕಾಳಿಂಗ ಸರ್ಪದ ರೂಪವನ್ನು ಹೋಲುವ ಆಕೃತಿಯ ಈ ಪುಷ್ಪ ಮತ್ತೊಂದು ರೀತಿಯಲ್ಲಿ ಶಿವನ ಜಡೆಯಂತೆಯೂ ಭಾಸ ವಾಗುತ್ತದೆ.
ಈ ನಾಗಲಿಂಗ ಪುಷ್ಪದ ಬಳ್ಳಿ ೧೩ ವರ್ಷದ ಬಳಿಕ ಹೂ ಬಿಡುತ್ತದೆ. ಈ ಪುಷ್ಪ ಸುಂದರಿಯನ್ನು ಹೊತ್ತ ಮರ ೧೨೦ ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ ಎಂದು ಹಾರಂಗಿ ಅಣೆಕಟ್ಟೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಹೇಳುತ್ತಾರೆ.
ಸುಗಂಧ ಭರಿತವಾದ ಪುಷ್ಪವನ್ನು ಬಿಡುವ ಈ ಮರದ ಎಲೆಗಳು ಶಂಕಾಕಾರದಲ್ಲಿ ಕಾಣುತ್ತವೆ. ಇನ್ನು ಈ ಮರದ ಕಾಯಿಗಳು ಗುಂಡಗೆ ಇದ್ದು ಜಾನುವಾರುಗಳಿಗೆ ಆಹಾರವಾಗಿಯೂ ನೀಡಬಹುದು ಎನ್ನಲಾಗಿದೆ. ಬೇರೆಲ್ಲಾ ಬಳ್ಳಿಗಳು ಗಿಡ - ಮರಗಳ ರೆಂಬೆ ಕೊಂಬೆಗಳಲ್ಲಿ ಹೂ ಬಿಟ್ಟರೆ ಈ ನಾಗಲಿಂಗಪುಷ್ಪ ಕಾಂಡದಲ್ಲಿ ಹೂ ಬಿಡುತ್ತದೆ. ಹಲವು ಬಗೆಯ ಕೇಸರಿ ಬಣ್ಣಗಳಿಂದ ಕಂಗೊಳಿಸುವ ಈ ಪುಷ್ಪ ಆಕರ್ಷಕ ಬಣ್ಣದೊಂದಿಗೆ ಅದ್ಭುತವಾದ ಸುವಾಸನೆಯನ್ನು ಹೊಂದಿದೆ.
ಶಿವ ದೇವ ಹಾಗೂ ಶಿವನಾಗನ ಹೆಸರಲ್ಲಿರುವ ಈ ಪುಷ್ಪದ ಬಳ್ಳಿಯನ್ನು ಮನೆಯ ಆವರಣದಲ್ಲಿ, ಮನೆಯ ಹಿಂದಿನ ಹಿತ್ತಲಲ್ಲಿ ಅಥವಾ ರಸ್ತೆಗಳ ಬದಿಗಳಲ್ಲಿ ಬೆಳೆಯಬಾರದು ಎಂಬ ಮೂಢನಂಬಿಕೆ ಇರುವ ಕಾರಣ ಈ ಪುಷ್ಪದ ಮರದ ಸಂತತಿ ಕ್ಷೀಣಿಸುತ್ತಿದೆ. ಈಗ ಕೇವಲ ದೇವಾಲಯ ಅಥವಾ ಮಠದ ಆವರಣದಲ್ಲಿ ಮಾತ್ರ ಈ ಮರ ಕಾಣ ಸಿಗುತ್ತಿದೆ. ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಲ್ಲಿಯೂ ಈ ಮರವನ್ನು ಬಳಸಲಾಗುತ್ತಿದೆ. ಸುಗಂಧ ದ್ರವ್ಯ ಹಾಗೂ ಸೌಂದರ್ಯ ವರ್ಧಕಗಳ ತಯಾರಿಕೆಗೆ ಈ ಪುಷ್ಪಗಳನ್ನು ಬಳಸಲಾಗುತ್ತಿದೆ. ಸುಟ್ಟ ಗಾಯದ ಗುರುತಿಗೆ ಈ ಮರದ ಬೇರನ್ನು ಅರೆದು ನಿಂಬೆ ಹಣ್ಣಿನ ರಸದೊಂದಿಗೆ ಹಚ್ವಿದರೆ ಬೇಗ ಗುಣವಾಗುತ್ತದೆ. ಚರ್ಮ ರೋಗಗಳಿಗೂ ಇದು ರಾಮಬಾಣವಾಗಿದೆ. ಈ ಮರ ಹೆಚ್ಚಾಗಿ ಉಷ್ಣವಲಯದ ದೇಶಗಳಲ್ಲಿ ಬೆಳೆಯುತ್ತದೆ ಎನ್ನಲಾಗುತ್ತಿದೆ.
- ಕೆ.ಎಸ್. ಮೂರ್ತಿ, ಕುಶಾಲನಗರ