ಸಿದ್ದಾಪುರ, ಏ. ೨೭: ಹದಿನಾರು ವರ್ಷದ ಬಳಿಕ ಒಂದಾದ ಸಹಪಾಠಿಗಳು, ಸ್ನೇಹಿತರ ಸಮ್ಮಿಲನಕ್ಕೆ ಸಾಕ್ಷಿಯಾದ ಶಿಕ್ಷಕರು. ಎಲ್ಲರ ಮಿಲನದಿಂದ ಮರುಕಳಿಸಿದ ಬಾಲ್ಯದ ದಿನಗಳು, ಭಾವುಕ ಕ್ಷಣ ಇದು ನೆಲ್ಲಿ ಹುದಿಕೇರಿ ಸರಕಾರಿ ಪ್ರೌಢಶಾಲೆಯಲ್ಲಿ ಕಂಡುಬAದ ಸುಂದರ ದೃಶ್ಯ.
೨೦೦೫-೬ನೇ ಸಾಲಿನಲ್ಲಿ ನೆಲ್ಲಿಹುದಿಕೇರಿ ಸರಕಾರಿ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹತ್ತನೆಯ ತರಗತಿಯ ಹಳೆ ವಿದ್ಯಾರ್ಥಿಗಳಿಂದ ಸ್ನೇಹಮಿಲನ ಕೂಟವನ್ನು ನೆಲ್ಲಿಹುದಿಕೇರಿ ಸರಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿತ್ತು.
ಹಳೇ ವಿದ್ಯಾರ್ಥಿಗಳು ಹಾಗೂ ವರ್ಗಾವಣೆಗೊಂಡ ಹಲವಾರು ಶಿಕ್ಷಕರು ಕೂಡ ಒಂದೇ ವೇದಿಕೆಯಲ್ಲಿ ಸೇರಿದ ಸಂಭ್ರಮ ಶಿಕ್ಷಕರದ್ದಾದರೆ, ಇತ್ತ ವಿದ್ಯಾರ್ಜನೆಯ ನಂತರ ಕಳೆದ ಹತ್ತು ವರ್ಷಗಳಿಂದ ಪರಸ್ಪರ ಸಂಪರ್ಕ ಇಲ್ಲದ ಸ್ನೇಹಿತರು ಮತ್ತೊಮ್ಮೆ ತಮ್ಮ ಬಾಂಧವ್ಯ ಬೆಸೆಯಲು ಸ್ನೇಹಕೂಟ ಕಾರಣವಾಯಿತು.
ಹದಿನಾರು ವರ್ಷದ ಹಿಂದೆ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಹಪಾಠಿಗಳು ಪ್ರೌಢಶಾಲೆಯ ವ್ಯಾಸಂಗ ಮುಗಿಸಿದ ನಂತರ ಬಹುತೇಕರು ಪರಸ್ಪರ ಸಂಪರ್ಕಕ್ಕೆ ಸಿಗದೆ ಉನ್ನತ ಶಿಕ್ಷಣ, ಉದ್ಯೋಗ, ವ್ಯಾಪಾರ ಎಂಬಿತ್ಯಾದಿ ಕಾರಣಗಳಿಂದ ದೂರ ಉಳಿದಿದ್ದರು. ಒಂದುವರೆ ದಶಕಗಳಿಂದ ದೂರ ವಾಗಿದ್ದವರು ಸ್ನೇಹಮಿಲನದಿಂದ ಒಂದಾಗಿ ತಮ್ಮ ತರಗತಿ ಕೊಠಡಿಗೆ ತೆರಳಿ ತಮ್ಮ ಶಾಲಾ ದಿನಗಳ ಕ್ಷಣಗಳನ್ನು ಮೆಲುಕು ಹಾಕಿದರು. ಅಲ್ಲದೆ ಫೋಟೋ ಕ್ಲಿಕ್ಕಿಸಿ ಸಂತಸದ ಸವಿ ಸವೆದರು. ವಿಶೇಷವೆಂದರೆ ಹಳೆ ವಿದ್ಯಾರ್ಥಿಗಳಲ್ಲಿ ಹಲವರು ತಮ್ಮ ಕುಟುಂಬ ಸಮೇತರಾಗಿ ಕಾರ್ಯ ಕ್ರಮಕ್ಕೆ ಬಂದು ಸಂಭ್ರಮಿಸಿದರು.
ಶಿಕ್ಷಕರಿಗೆ ವಿದ್ಯಾರ್ಥಿಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗುರುಗಳ ಆಶೀರ್ವಾದ ಪಡೆದರು. ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಅಭಿವೃದ್ಧಿಗಾಗಿ ಧನಸಹಾಯ ಮಾಡಿದರು.