ಕುಶಾಲನಗರ, ಏ. ೨೭: ೪೫ರ ವಯೋಮಾನದ ಮೇಲ್ಪಟ್ಟ ನಾಗರಿಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ದೇಶದೆಲ್ಲೆಡೆ ಭರದಿಂದ ನಡೆಯುತ್ತಿದ್ದು, ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಈಗಾಗಲೇ ಶೇ. ೭೫ ರಷ್ಟು ಸಂಖ್ಯೆಯ ಗುರಿಯನ್ನು ಸಾಧಿಸಿದೆ. ಹಲವೆಡೆ ಕೊರೊನಾ ಸೋಂಕಿನ ಎರಡನೇ ಅಲೆ ಅಡ್ಡಿಯಾಗುತ್ತಿದ್ದರೂ, ನೆರೆಯ ಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಕೊರೊನಾ ವಾರಿಯರ್ಸ್ ಮಾತ್ರ ಹಗಲು, ರಾತ್ರಿ ಎನ್ನದೇ ಕೋವಿಡ್ ಲಸಿಕೆ ನೀಡುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದನ್ನು ಕಾಣಬಹುದು.
೪೫ರ ವಯೋಮಾನದ ಮೇಲ್ಪಟ್ಟ ಜನರಿಗೆ ಈಗಾಗಲೇ ಒಟ್ಟು ಸಂಖ್ಯೆಯ ಶೇ. ೭೫ಕ್ಕೂ ಅಧಿಕ ಲಸಿಕೆ ನೀಡುವಲ್ಲಿ ಯಶಸ್ವಿಯಾಗುವುರೊಂದಿಗೆ ಇಲಾಖೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕುಶಾಲನಗರ ಸಮೀಪದ ಕೊಡಗು-ಮೈಸೂರು ಗಡಿಭಾಗದ ಕೊಪ್ಪ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಕೊರೊನಾ ಸೋಂಕು ತಡೆಗಟ್ಟಲು ನಿತ್ಯ ನಿರಂತರ ಯುದ್ಧೋಪಾದಿಯಲ್ಲಿ ಸೇವೆಯಲ್ಲಿ ತೊಡಗಿರುವುದು ಗೋಚರಿಸಿದೆ.
ಡಾ. ಶ್ರೀವಳ್ಳಿ, ಆರೋಗ್ಯ ನಿರೀಕ್ಷಕರಾದ ಮುಜೀಬ್ ಸೇರಿದಂತೆ ಇಲ್ಲಿರುವ ಬೆರಳೆಣಿಕೆಯ ದಾದಿಯರು ಮತ್ತು ಸಿಬ್ಬಂದಿಗಳ ತಂಡ ದಿನವೊಂದಕ್ಕೆ ಗರಿಷ್ಠ ೨೫೦ ಜನರಿಗೆ ಕೋವಿಡ್ ಲಸಿಕೆ ಚುಚ್ಚುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಪ್ಪ ಆವರ್ತಿ ಗ್ರಾಮ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಸಾವಿರಾರು ನಾಗರಿಕರು ಈಗಾಗಲೇ ಪ್ರಥಮ ಹಾಗೂ ದ್ವಿತೀಯ ಹಂತದ ಲಸಿಕೆ ಚುಚ್ಚಿಸಿಕೊಂಡಿರುವ ಬಗ್ಗೆ ವರದಿಗಳು ಲಭ್ಯವಾಗಿವೆ. ಆರೋಗ್ಯ ಕಾರ್ಯಕರ್ತರು ಮನೆಮನೆಗೆ ತೆರಳಿ ಲಸಿಕೆ ಬಗ್ಗೆ ಅರಿವು ಮತ್ತು ಕೊರೊನಾ ಜಾಗೃತಿ ಮೂಡಿಸುತ್ತಿರುವುದು ಈ ಸಾಧನೆಗೆ ಪ್ರಮುಖ ಕಾರಣ ಎಂದು ಆರೋಗ್ಯ ನಿರೀಕ್ಷಕ ಮುಜೀಬ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಈ ಆರೋಗ್ಯ ಕೇಂದ್ರದಲ್ಲಿ ಇತರ ಕಡೆಯ ಅದರ ಕುಶಾಲನಗರ ಪಟ್ಟಣ ವ್ಯಾಪ್ತಿಯ ಜನರು ಕೂಡ ಲಸಿಕೆ ಪಡೆಯಲು ಆಗಮಿಸುತ್ತಿದ್ದಾರೆ. ಕೇಂದದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಗಮನಾರ್ಹ ಸಂಗತಿ. ಇದರೊಂದಿಗೆ ನೆರೆಯ ಟಿಬೇಟಿಯನ್ ನಿರಾಶ್ರಿತ ಶಿಬಿರದ ನಿವಾಸಿಗಳಿಗೆ ಕೂಡ ಲಸಿಕೆ ನೀಡುವ ಕಾಯಕ ನಡೆಯುತ್ತಿದೆ. ಜೊತೆಗೆ ಕೊರೊನಾ ಸೋಂಕಿನ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ನೂರಾರು ಮಂದಿ ಸ್ವಾಬ್ ಟೆಸ್ಟ್ ಗೂ ಆಗಮಿಸುತ್ತಿದ್ದು, ವೈದ್ಯ ಸಿಬ್ಬಂದಿಗಳ ತಂಡ ವಾರದ ರಜೆಯನ್ನೂ ಲೆಕ್ಕಿಸದೇ ಶ್ರಮಿಸುತ್ತಿರುವುದು ಸುತ್ತಮುತ್ತಲ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯೇತರ ಸಿಬ್ಬಂದಿ ಕೊರತೆ ನಡುವೆ ಇತರ ರೋಗಿಗಳ ಆರೋಗ್ಯ ಬಗ್ಗೆ ಗಮನ ಹರಿಸುವುದರ ಜತೆಗೆ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವುದು ಕೊಪ್ಪ ಸೇರಿದಂತೆ ನೆರೆಯ ಜನಗಳ ಮೆಚ್ಚುಗೆಗೆ ಪಾತ್ರವಾಗಿದೆ.