ಮಡಿಕೇರಿ, ಏ. ೨೭: ಕೆರೆಯಲ್ಲಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಿಸಲು ಹೋದ ಆಕೆಯ ಚಿಕ್ಕಪ್ಪನೂ ಸೇರಿದಂತೆ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶನಿವಾರಸಂತೆ ಸಮೀಪದ ಗುಡುಗಳಲೆಯಲ್ಲಿ ಸಂಭವಿಸಿದೆ. ಗುಡುಗಳಲೆ ಗ್ರಾಮದ ವೆಂಕಟೇಶ್ ಟೈಲರ್ ಎಂಬವರ ಪುತ್ರಿ ನೀರಿನಲ್ಲಿ ಮುಳುಗಿದ ಬಾಲಕಿಯಾಗಿದ್ದು, ಬಾಲಕಿಯನ್ನು ರಕ್ಷಿಸಲು ಹೋದ ಚಿಕ್ಕಪ್ಪನೂ ಕೂಡಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂದು ಸಂಜೆ ೪.೩೦ ಗಂಟೆಗೆ ಈ ಘಟನೆ ನಡೆದಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಕಾರ್ಯಾಚರಣೆ ನಡೆಸಿ ರಾತ್ರಿ ೮ ಗಂಟೆ ವೇಳೆಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಆಕೆಯ ಚಿಕ್ಕಪ್ಪನ ಮೃತದೇಹ ಇನ್ನೂ ಪತ್ತೆಯಾಗದಿದ್ದು, ಕೆರೆಯಲ್ಲಿ ಹೆಚ್ಚಿಗೆ ನೀರಿರುವುದರಿಂದ ಕೆರೆಯನ್ನು ಒಡೆಯುವುದು ಸೂಕ್ತವೆಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ. ಆದರೆ ಕೆರೆಯನ್ನು ಒಡೆಯಲು ಕೆರೆಯ ಮಾಲೀಕರು ಒಪ್ಪಿಗೆ ಸೂಚಿಸುತ್ತಿಲ್ಲವೆನ್ನಲಾಗಿದೆ. ಸ್ಥಳಕ್ಕೆ ಶನಿವಾರಸಂತೆ ಪೊಲೀಸರು ಹಾಗೂ ಸಿಬ್ಬಂದಿಗಳು ತೆರಳಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.