ಸೋಮವಾರಪೇಟೆ, ಏ. ೨೭: ಕೋವಿಡ್ ಸೋಂಕು ತಗುಲಿ ಅನಾರೋಗ್ಯಕ್ಕೀಡಾಗಿದ್ದ ತಾಯಿಯನ್ನು ಆರೈಕೆ ಮಾಡುತ್ತಿದ್ದ ಮಗ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತನಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಮೃತದೇಹದ ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಘಟನೆ ತಾಲೂಕಿನ ಶನಿವಾರಸಂತೆ ಸಮೀಪದ ಮಾದ್ರೆ ಗ್ರಾಮದಲ್ಲಿ ನಡೆದಿದೆ.
ಮಾದ್ರೆ ಗ್ರಾಮದ ನಿವಾಸಿ ಶರತ್ಕುಮಾರ್ (೩೧) ಎಂಬಾತನೇ ಆತ್ಮಹತ್ಯೆಗೆ ಶರಣಾದವನಾಗಿದ್ದು, ಕಳೆದ ೧೧ ದಿನಗಳ ಹಿಂದೆ ತನ್ನ ತಾಯಿಗೆ ಅನಾರೋಗ್ಯ ಉಂಟಾಗಿದ್ದರಿAದ ಹಾಸನದ ಜಯ ಚಾಮರಾಜೇಂದ್ರ ಅಸ್ಪತ್ರೆಗೆ ದಾಖಲಿಸಿ ಅಲ್ಲೇ ಅಮ್ಮನ ಆರೈಕೆ ಮಾಡುತ್ತಿದ್ದ.
ಈ ನಡುವೆ ಶರತ್ಕುಮಾರ್ನಿಗೂ ಸಹ ಕೊರೊನಾ ಸೋಂಕು ತಗುಲಿದ್ದು, ಇದರಿಂದ ಬೇಸತ್ತ ಯುವಕ ಹಾಸನ ಆಸ್ಪತ್ರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತದೇಹವನ್ನು ಸ್ವಗ್ರಾಮಕ್ಕೆ ತಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭ ಒಂದು ಜಾತಿಯವರು ಅಡ್ಡಬಂದು, ಇದು ನಮ್ಮ ಜಾತಿಯವರಿಗೆ ಸೇರಿದ ಸ್ಮಶಾನ; ಇಲ್ಲಿ ಅಂತ್ಯಕ್ರಿಯೆ ನಡೆಸಬೇಡಿ ಎಂದು ತಗಾದೆ ತೆಗೆದಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಯಿತು.
ಮಾದ್ರೆ ಗ್ರಾಮದಲ್ಲಿರುವ ಸ್ಮಶಾನ ಜಾಗದಲ್ಲಿ ಅಂತ್ಯಕ್ರಿಯೆಗೆ ಸೌದೆಗಳನ್ನು ಜೋಡಿಸಿಟ್ಟ ನಂತರ ತಗಾದೆ ಏರ್ಪಟ್ಟಿದ್ದರಿಂದ ಸ್ಥಳಕ್ಕೆ ಶನಿವಾರಸಂತೆ ಪೊಲೀಸರು ತೆರಳಿದರು. ಈ ಸಂದರ್ಭ ಉಭಯ ಕಡೆಯವರೊಂದಿಗೆ ಮಾತುಕತೆ ನಡೆಸಿ, ಅಂತ್ಯಕ್ರಿಯೆಗೆ ಗುರುತಿಸಲಾಗಿದ್ದ ಸ್ಥಳದಿಂದ ೭೦ ಅಡಿಗಳಷ್ಟು ದೂರದಲ್ಲಿ ಮೃತದೇಹದ ಅಂತ್ಯಕ್ರಿಯೆ ನಡೆಸಲಾಯಿತು.
ಮೊನ್ನೆ ರಾತ್ರಿ ನೇಣು ಬಿಗಿದುಕೊಂಡಿದ್ದು,
(ಮೊದಲ ಪುಟದಿಂದ) ನಿನ್ನೆ ಮಧ್ಯಾಹ್ನದ ವೇಳೆಗೆ ಘಟನೆ ಬೆಳಕಿಗೆ ಬಂದಿದೆ. ಇಂದು ಮಧ್ಯಾಹ್ನ ೩.೩೦ರ ಸುಮಾರಿಗೆ ಹಾಸನದಿಂದ ಆಂಬ್ಯುಲೆನ್ಸ್ ಮೂಲಕ ಮೃತದೇಹವನ್ನು ತಂದ ಆಸ್ಪತ್ರೆಯ ಸಿಬ್ಬಂದಿಗಳು, ಪಿಪಿಇ ಕಿಟ್ಗಳನ್ನು ಬಳಸಿ ಕೊರೊನಾ ಮಾರ್ಗಸೂಚಿಯಂತೆ ಅಂತ್ಯಕ್ರಿಯೆ ನಡೆಸಲಾಯಿತು.
ಅವಿವಾಹಿತನಾಗಿದ್ದ ಶರತ್ಕುಮಾರ್, ಬೆಂಗಳೂರಿನ ಖಾಸಗಿ ಕಂಪೆನಿಯೊAದರಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಕಳೆದ ವರ್ಷದ ಲಾಕ್ಡೌನ್ ಸಂದರ್ಭ ಮನೆಗೆ ವಾಪಸ್ ಆಗಿದ್ದ. ಸೌಮ್ಯ ಸ್ವಭಾವದ ಶರತ್, ತಾಯಿಯ ಸಂಕಷ್ಟವನ್ನು ಕಂಡು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಮೃತ ಶರತ್ ತಾಯಿ ಸೇರಿದಂತೆ ಸಹೋದರನನ್ನು ಅಗಲಿದ್ದಾನೆ.