ಮಡಿಕೇರಿ, ಏ. ೨೪: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ೨೦೨೧-೨೨ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಕಾನೂನು ಪದವೀಧರರು ಹಿರಿಯ ವಕೀಲರ ಬಳಿ ವೃತ್ತಿ ತರಬೇತಿ ಪಡೆಯುವ ಅವಧಿಯಲ್ಲಿ ಶಿಷ್ಯವೇತನ ಪಾವತಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯನ್ನು ಮೇ ೧ ರಿಂದ ಜೂನ್ ೩೦ ರವರೆಗೆ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕೊಡಗು ಜಿಲ್ಲೆಯವರಾಗಿರಬೇಕು. ೪೦ ವರ್ಷ ವಯೋಮಿತಿಯೊಳಗಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಮೊದಲು ೩ ಅಥವಾ ೫ ವರ್ಷಗಳ ಒಳಗಡೆ ಕಾನೂನು ಪದವಿ ಪಡೆದಿರಬೇಕು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪ್ರಾಸಿಕ್ಯೂಟ್ ಬಳಿ ಅಥವಾ ೨೦ ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ವಕೀಲರ ಬಳಿ ತರಬೇತಿಗೆ ನಿಯೋಜಿಸಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ತರಬೇತಿಯನ್ನು ಪೂರ್ಣಗೊಳಿಸದೆ ಬಿಟ್ಟು ಹೋಗಬಾರದು. ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರಿ ಸಿಕ್ಕಿದಲ್ಲಿ ಮಾತ್ರ ನಿಯಮಾನುಸಾರ ಸಡಿಲಗೊಳಿಸಲಾಗುವುದು. ಒಂದು ವೇಳೆ ತರಬೇತಿ ಬಿಟ್ಟು ಹೋದಲ್ಲಿ ಅಂತವರ ಶಿಷ್ಯ ವೇತನವನ್ನು ನಿಯಮಾನುಸಾರ ವಸೂಲಿ ಮಾಡಲಾಗುವುದು. ತರಬೇತಿ ಅವಧಿಯು ೨ ವರ್ಷಗಳಾಗಿದ್ದು, ಮಾಸಿಕ ರೂ. ೧೦ ಸಾವಿರ ಶಿಷ್ಯವೇತನ ನೀಡಲಾಗುವುದು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ. ೨.೫೦ ಲಕ್ಷ ಮೀರತಕ್ಕದ್ದಲ್ಲ. ಸುಳ್ಳು ಮಾಹಿತಿ ದಾಖಲಾತಿಗಳನ್ನು ಒದಗಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿ ಪಡಿಸಲಾಗುವುದು. ಅಂತಹ ಅಭ್ಯರ್ಥಿಗಳಿಂದ ತರಬೇತಿ ಅವಧಿಯಲ್ಲಿ ನೀಡಿದ ಶಿಷ್ಯವೇತನವನ್ನು ಶೇ. ೧೦ ರ ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು.

ಅರ್ಜಿ ಅಪೂರ್ಣವಾಗಿದ್ದಲ್ಲಿ ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಯು ಕಾನೂನು ಪದವಿಯಲ್ಲಿ ತೇರ್ಗಡೆ ಹೊಂದಿದ ೩ ವರ್ಷದೊಳಗಾಗಿ ಬಾರ್ ಕೌನ್ಸಿಲ್‌ನಲ್ಲಿ ಹೆಸರು ನೋಂದಾಯಿಸಿದ ನಂತರ ಶಿಷ್ಯವೇತನ ಮತ್ತು ಎನ್‌ರೋಲ್‌ಮೆಂಟ್ ಫೀಯನ್ನು ನೀಡತಕ್ಕದ್ದು.

ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದೆ. ಕಾನೂನು ಪದವೀಧರ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ತರಬೇತಿ ಅವಧಿಯಲ್ಲಿ ಗರ್ಭಿಣಿ ಸ್ಥಿತಿಯಲ್ಲಿರುವ ವೇಳೆ ಮಹಿಳಾ ಅಭ್ಯರ್ಥಿಗಳಿಗೆ ೧೩೫ ದಿನಗಳ ತರಬೇತಿ ಭತ್ಯೆ ರಹಿತ ರಜೆಯನ್ನು ವೈದ್ಯಕೀಯ ಪ್ರಮಾಣ ಪತ್ರ ಪಡೆದು ರಜೆ ಮಂಜೂರು ಗೊಳಿಸಿ ತರಬೇತಿಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಕಚೇರಿ ವೆಬ್‌ಸೈಟ್ ತಿತಿತಿ.sತಿ.ಞಚಿಡಿ.ಟಿiಛಿ.iಟಿ ನಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಜೂನ್ ೩೦ ರೊಳಗೆ ಸಲ್ಲಿಸಬೇಕು. ದಾಖಲಾತಿಗಳನ್ನು ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ, ಮಡಿಕೇರಿ ದೂ: ೦೮೨೭೨-೨೨೫೫೩೧, ಸಹಾಯಕ ನಿರ್ದೇಶಕರ ಕಚೇರಿ, ಮಡಿಕೇರಿ-೦೮೨೭೨-೨೨೩೫೫೨, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ-೦೮೨೭೬-೨೮೧೧೧೫, ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಪೊನ್ನಂಪೇಟೆ ೦೮೨೭೪-೨೪೯೪೭೬ ಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.