ಅನಿಲ್ ಎಚ್.ಟಿ.

ನಾವೂ ಮನುಷ್ಯರೇ.. ಒಂದಲ್ಲ.. ಎರಡಲ್ಲ.. ಸತತವಾಗಿ ೪೦೦ ದಿನಗಳಿಂದ ರೋಗಿಗಳ ಸೇವೆಯಲ್ಲಿ ನಮ್ಮ ಕುಟುಂಬವನ್ನೇ ನಿರ್ಲಕ್ಷಿಸಿ ತೊಡಗಿಸಿಕೊಂಡಿದ್ದೇವೆ.. ಊಟ ಇಲ್ಲದೇ... ನೀರೂ ಕುಡಿಯದೇ ಸೇವೆ ಮಾಡಿದ್ದೇವೆ... ಇರುವ ಅಲ್ಪ ಸೌಲಭ್ಯದಲ್ಲಿಯೂ ಕೊಡಗಿನ ವೈದ್ಯಕೀಯ ಸೇವೆಗೆ ಕಳಂಕ ಬಾರದಂತೆ ನೋಡಿಕೊಂಡಿದ್ದೇವೆ.. ಹೀಗಿದ್ದರೂ ಇಂಥ ಕಳಂಕ ಸರಿಯಾ?

ಹೀಗೆಂದು ನೋವಿನಿಂದ ಪ್ರಶ್ನಿಸುತ್ತಿದ್ದಾರೆ.. ಮಡಿಕೇರಿಯ ಸರ್ಕಾರಿ ಕೋವಿಡ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು.

ಸಾಮಾಜಿಕ ಜಾಲತಾಣದಲ್ಲಿ ಕೋವಿಡ್ ಆಸ್ಪತ್ರೆಯ ಬಗ್ಗೆ ಬಂದ ಟೀಕೆಗಳ ಬಗ್ಗೆ ವೈದ್ಯಕೀಯ ಸಿಬ್ಬಂದಿಗಳಲ್ಲಿ ನೋವು ಮಡುಗಟ್ಟಿದೆ. ಇರುವ ಪರಿಸ್ಥಿತಿ ಅರ್ಥಮಾಡಿಕೊಳ್ಳದೇ ಟೀಕೆ ಮಾಡಲಾಗುತ್ತಿದೆ. ಕೆಲವು ಸಣ್ಣ ಲೋಪಗಳನ್ನೇ ದೊಡ್ಡದು ಮಾಡಿ ಈವರೆಗಿನ ಸೇವೆಯನ್ನೇ ನಿರ್ಲಕ್ಷö್ಯ ಮಾಡಲಾಗಿದೆ ಎಂದು ವೈದ್ಯಕೀಯ ಸಿಬ್ಬಂದಿಗಳು ಬೇಸರ ವ್ಯಕ್ತಪಡಿಸಿದರು.

ಹಾಗಿದ್ದರೆ ಹೇಗಿದೆ ಮಡಿಕೇರಿಯ ಕೋವಿಡ್ ಆಸ್ಪತ್ರೆ.?

- ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನೇ ಕಳೆದ ೧೦ ತಿಂಗಳಿನಿAದ ಜಿಲ್ಲಾ ಕೋವಿಡ್ ಆಸ್ಪತ್ರೆಯಾಗಿ ರೂಪಿಸಲಾಗಿದೆ. ಇಲ್ಲಿಯೇ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಇದೆ. ಈ ಪ್ರಯೋಗಾಲಯದಲ್ಲಿ ೨೦೦ ಪರೀಕ್ಷೆಗಳನ್ನು ಒಂದು ಬಾರಿಗೆ ನಡೆಸುವ ಅತ್ಯಾಧುನಿಕ ಯಂತ್ರವಿದೆ. ಇದೇ ಯಂತ್ರದ ಮೂಲಕ ಕೋವಿಡೇತರ ರೋಗಿಗಳ ಆರೋಗ್ಯ ಸಂಬAಧಿತ ಪರೀಕ್ಷೆ ಕೂಡ ನಡೆಸಬೇಕು. ಹೀಗಾಗಿ ಅಧ೯ ದಿನ ಕೋವಿಡೇತರ ರೋಗಿಗಳ ಪರೀಕ್ಷೆ ಕೈಗೊಂಡು ಮಧ್ಯಾಹ್ನ ಕೋವಿಡ್ ಪರೀಕ್ಷೆಗೆ ಈ ಪ್ರಯೋಗಾಲಯ ಮೀಸಲಿಡಲಾಗಿದೆ. ಪ್ರಯೋಗಾಲಯಕ್ಕೆ ನುರಿತ ತಜ್ಞರ ಕೊರತೆಯಿದ್ದು ಇದೀಗ ಹೊಸ ನೇಮಕಾತಿಗೆ ಅರ್ಜಿ ಕರೆಯಲಾಗಿದೆ.

- ಕೋವಿಡ್ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ಖಚಿತವಾದ ಬಳಿಕ ಸೋಂಕಿತರನ್ನು ಕೋವಿಡ್ ಆಸ್ಪತ್ರೆಯ ಪ್ರತ್ಯೇಕ ವಾರ್ಡ್ನಲ್ಲಿ ಬೇರೆ ಬೇರೆ ಪರೀಕ್ಷೆಗೆ ಒಪಡಿಸಲಾಗುತ್ತದೆ. ರಕ್ತ ಪರೀಕ್ಷೆ, ರಕ್ತದೊತ್ತಡ, ಸಿ.ಟಿ. ಸ್ಕಾö್ಯನ್ ಪರೀಕ್ಷೆಗೂ ಒಳಪಡಿಸಲಾಗುತ್ತದೆ. ಸರ್ಕಾರ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಸಿ.ಟಿ.ಸ್ಕಾö್ಯನ್‌ನ ವರದಿಗೆ ಹೊರರಾಜ್ಯದಲ್ಲಿನ ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಒಪ್ಪಂದದAತೆ ಅಲ್ಲಿಂದ ವರದಿ ಇಂಟರ್ ನೆಟ್‌ನಲ್ಲಿ ಲಭಿಸಲು ಕನಿಷ್ಟ ೪-೬ ಗಂಟೆಯಾದರೂ ಬೇಕೇ ಬೇಕು.

- ಈ ರೀತಿ ವರದಿ ಬರುವವರೆಗೂ ಪರೀಕ್ಷೆಗೊಳಪಟ್ಟವರನ್ನು ವಾರ್ಡ್ನಲ್ಲಿರಿಸಲಾಗುತ್ತದೆ. ಹಾಸಿಗೆ ವ್ಯವಸ್ಥೆ ಕೂಡ ಇದೆ. ಇದು ಎಲ್ಲಾ ಆಸ್ಪತ್ರೆಯಲ್ಲಿಯೂ ಇರುವಂಥದ್ದು. ಕೋವಿಡ್ ಸೋಂಕಿತರೇ ಇಲ್ಲಿರುವುದರಿಂದ ಇತರರಿಗೆ ಸೋಂಕು ಹಬ್ಬುವ ಸಾಧ್ಯತೆಯಿಲ್ಲ.

- ಸಿ.ಟಿ. ಸ್ಕಾö್ಯನ್ ವರದಿ ಮೈಸೂರಿನಿಂದ ಲಭಿಸಲು ತಡವಾದಂತೆ ಪರೀಕ್ಷೆಗೊಳಪಟ್ಟವರ ತಾಳ್ಮೆ ಮೀರುತ್ತದೆ. ಆದರೆ ಈ ನಿಟ್ಟಿನಲ್ಲಿ ವರದಿ ಶೀಘ್ರ ತರಿಸಲು ಅಥವಾ ಪ್ರಯೋಗಾಲಯವನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿಯೇ ಪ್ರಾರಂಭಿಸಲು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು.

- ಪರೀಕ್ಷೆಗೊಳಪಟ್ಟ ಸೋಂಕಿತರಿಗೆ ಕಾಲಕಾಲಕ್ಕೆ ಊಟ, ಕಾಫಿ ನೀಡಲಾಗುತ್ತದೆ. ಆದರೆ ಇಲ್ಲಿಯೂ ಸಮಸ್ಯೆಯಿದೆ. ಯಾವಾಗ ಎಷ್ಟು ಸೋಂಕಿತರು ಬರುತ್ತಾರೆ ಎಂದು ಹೇಳಲಾಗುವುದಿಲ್ಲ. ಹೆಚ್ಚು ಸೋಂಕಿತರು ಊಟದ ಸಮಯ ಮೀರಿ ಮಧ್ಯಾಹ್ನ ೨ ಗಂಟೆ ನಂತರ ಬಂದಾಗ ಮತ್ತೆ ಹೆಚ್ಚು ಊಟ ತರಿಸಬೇಕು. ಇದಕ್ಕೂ ಆಡಳಿತಾತ್ಮಕ ಅನುಮತಿ ಬೇಕು. ಸರ್ಕಾರದ ಮಟ್ಟದಲ್ಲಿ ಲೆಕ್ಕ ನೀಡಬೇಕಾಗಿರುವುದರಿಂದ ಹೆಚ್ಚಿನ ಊಟ ಮೊದಲೇ ಹೇಳುವಂತಿಲ್ಲ.

- ದಾದಿಯರ ಕೊರತೆ ತೀವ್ರವಾಗಿದೆ. ಸೋಂಕಿತರಿಗೆ ಊಟವನ್ನೂ ದಾದಿಯರೇ ನೀಡಬೇಕು. ನೂರಾರು ಸಂಖ್ಯೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ದಾದಿಯರು ಊಟ ಸರಬರಾಜು ಮಾಡಲೇ ಸಾಕಷ್ಟು ಸಮಯವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದ ಕೆಲವರು ದಾದಿಯರ ಮೇಲೆ ಅನಗತ್ಯ ರೇಗಾಡುತ್ತಾರೆ. ಇದನ್ನೂ ಸಹಿಸಿಕೊಳ್ಳಲೇಬೇಕಾಗಿದೆ.

- ಕೋವಿಡ್ ಆಸ್ಪತ್ರೆಯಲ್ಲಿ ಲಿಫ್ಟ್ ಇಲ್ಲ. ಹೀಗಾಗಿ ಮೂರಂತಸ್ತಿನ ಕಟ್ಟಡದ ಬೇರೆ ಬೇರೆ ವಾರ್ಡ್ಗಳಿಗೆ ದಿನನಿತ್ಯ ದಾದಿಯರು, ಆಯಾಗಳು, ವೈದ್ಯರು ಹಲವು ಬಾರಿ ಹತ್ತಿ ಇಳಿಯುವುದರಲ್ಲಿಯೇ ಹೈರಾಣಾಗುತ್ತಿದ್ದಾರೆ. ಕಾಲು ನೋವು ಅನೇಕರನ್ನು ಕಾಡುತ್ತಿದೆ.

- ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳ ಕೋವಿಡ್ ಪರೀಕ್ಷೆ ಈವರೆಗೆ ನಡೆದಿದೆ. ಆದರೆ ಕೋವಿಡ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳ ಕೋವಿಡ್ ಪರೀಕ್ಷೆಗೆ ಯಾರೂ ಹೇಳಿಲ್ಲ. ಅಪಾಯಕಾರಿ ಸ್ಥಿತಿಯಲ್ಲಿಯೇ ವೈದ್ಯಕೀಯ ಸಿಬ್ಬಂದಿಗಳು ರೋಗಿಗಳ ಸೇವೆಗೆ ಟೊಂಕಕಟ್ಟಿ ತೊಡಗಿಸಿಕೊಂಡಿದ್ದಾರೆ.

- ಕರ್ತವ್ಯಕ್ಕೂ ನಿಗಧಿತ ಸಮಯ ಇಲ್ಲ. ಕೋವಿಡ್ ಸೋಂಕಿತರನ್ನು ವಾರ್ಡ್ ಅಥವಾ ಮನೆಗೆ ಕಳುಹಿಸಿದ ಬಳಿಕವೇ ಸಿಬ್ಬಂದಿಗಳು ತಡರಾತ್ರಿ ಮನೆಗೆ ತೆರಳಬೇಕಾಗಿದೆ. ಗಂಟೆಗಟ್ಟಲೆ ಕೋವಿಡ್ ಕೇಂದ್ರದಲ್ಲಿ ಬೆವರು ಸುರಿಸುವಂತೆ ಮಾಡುವ ಪಿ.ಪಿ.ಇ ಕಿಟ್ ಹಾಕಿಕೊಂಡಿರುವ ಸಿಬ್ಬಂದಿಗಳು, ವೈದ್ಯರ ಮಾನಸಿಕ ಮತ್ತು ದೈಹಿಕ ಯಾತನೆ ಕೇಳುವುದೇ ಬೇಡ ಎಂಬAತಾಗಿದೆ.

- ಹೆಚ್ಚಿನ ಸಿಬ್ಬಂದಿಗಳನ್ನು, ವೈದ್ಯರನ್ನು ನೀಡಿ ಎಂಬ ಕೋರಿಕೆಗೆ ಸರ್ಕಾರ ಈವರೆಗೂ ಮೌನವಾಗಿದೆ. ಹೆಚ್ಚುವರಿ ನರ್ಸ್ಗಳ ಹುದ್ದೆ ಭರ್ತಿಯಾಗಿಲ್ಲ. ಹೀಗಾಗಿ ಕರ್ತವ್ಯದಲ್ಲಿರುವ ನರ್ಸ್ಗಳಿಗೆ ಹೊರೆ ಹೆಚ್ಚಾಗಿದೆ.

- ಕೊಡಗು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರ ನೆರವು ಕೂಡ ಈಗ ಕೋವಿಡ್ ಆಸ್ಪತ್ರೆಗೆ ಲಭ್ಯವಿಲ್ಲ. ಇರುವ ಅಲ್ಪ ಸಿಬ್ಬಂದಿಯೊAದಿಗೆ ವೈದ್ಯಕೀಯ ತಂಡ ಕೋವಿಡ್ ರೋಗಿಗಳ ಸೇವೆಗೆ ತೊಡಗಿಸಿಕೊಂಡಿದೆ. ಮನೆ , ಮಗು, ಪತ್ನಿಯನ್ನೂ ಕಾಣದೇ ನಾಲ್ಕು ದಿನಗಳೇ ಕಳೆದಿದೆ. ರಾತ್ರಿ ಕೂಡ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದ ವೈದ್ಯರು ಮಗುವಿನ ಫೋಟೋವನ್ನು ಪರ್ಸ್ನಲ್ಲಿರಿಸಿಕೊಂಡು ದಿನಕ್ಕೆರಡು ಬಾರಿ ನೋಡಿ ಸಮಾಧಾನ ಪಟ್ಟುಕೊಳ್ಳುತ್ತಿರುವೆ ಎಂದೂ ಭಾವನಾತ್ಮಕವಾಗಿ ನುಡಿದರು.

- ಈಗಾಗಲೇ ಲಸಿಕೆ ನೀಡುವ ಕಾರ್ಯವೂ ಪ್ರಾರಂಭವಾಗಿದೆ. ಇರುವ ಅಲ್ಪ ಸಿಬ್ಬಂದಿ ಕೂಡ ಲಸಿಕೆ ನೀಡಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೇನು ಮುಂದಿನ ಮೇ ೧ ರಿಂದ ೧೮ ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಿಕೆ ಪ್ರಾರಂಭವಾದಲ್ಲಿ ನರ್ಸ್ಗಳಿಗೆ ಬಿಡುವೇ ಇಲ್ಲದಂತೆ ಕೆಲಸದ ಒತ್ತಡ ಇರಲಿದೆ. ಯಾರಿಗೆ ಹೇಳುವುದು ನಮ್ಮ ಸಮಸ್ಯೆಯನ್ನು?

- ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಇದೆ ಎಂಬ ವದಂತಿಯನ್ನೂ ಹಬ್ಬಿಸಲಾಗುತ್ತಿದೆ. ಆದರೆ ಇದೂ ಸಂಪೂರ್ಣ ಸುಳ್ಳು. ಆಕ್ಸಿಜನ್ ಕೊರತೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇಂಥ ಸುದ್ದಿಗಳಿಂದ ಯಾರಿಗೆ ಲಾಭ ? ಸೋಮವಾರದಿಂದ ಜಿಲ್ಲೆಯ ವಿವಿಧೆಡೆ ಕೋವಿಡ್ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಇದರಿಂದಾಗಿ ಕೋವಿಡ್ ಆಸ್ಪತ್ರೆಗೆ ರೋಗಿಗಳ ಒತ್ತಡ ಕಡಿಮೆಯಾಗಲಿದೆ ಎಂದು ವೈದ್ಯಾಧಿಕಾರಿಯೋರ್ವರು ಮಾಹಿತಿ ನೀಡಿದರು.