ಶನಿವಾರಸಂತೆ, ಏ. ೨೪: ದುಂಡಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ತುರ್ತುಸಭೆ ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷೆ ಪೂರ್ಣಿಮ ಕಿರಣ್ ವಹಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಪಕ್ಷಭೇದ ಮಾಡದೆ ಒಂದಾಗಿ ಸಹಕರಿಸಬೇಕು ಎಂದರು.

ಪAಚಾಯಿತಿ ಸದಸ್ಯ ಡಿ.ಪಿ. ಬೋಜಪ್ಪ ಮಾತನಾಡಿ, ಹಿಂದಿನ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯನ್ನು ದುಂಡಳ್ಳಿ ಪಂಚಾಯಿತಿ ಗ್ರಾಮ ಸದಸ್ಯರುಗಳಿಗೆ ತಿಳಿಸದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಎಲ್ಲಾ ಸದಸ್ಯರುಗಳು ಕಡ್ಡಾಯವಾಗಿ ಮಾಸ್ಕ್ ಹಾಕಿ, ಲಸಿಕೆಯನ್ನು ಪಡೆದುಕೊಂಡು ಜನರಿಗೆ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಪಂಚಾಯಿತಿ ಸದಸ್ಯರು ಗ್ರಾಮ ಪಂಚಾಯಿತಿಯಿAದ ಕುಡಿಯುವ ನೀರು ಸರಬರಾಜು, ಚರಂಡಿ ದುರಸ್ತಿ, ಸ್ವಚ್ಛತೆ ಹಾಗೂ ಬೀದಿ ದೀಪಗಳನ್ನು ಅಳವಡಿಸಲು ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಗ್ರಾಮ ಪಂಚಾಯಿತಿಗಳಿಗೆ ವಿವಿಧ ಸರಕಾರ ಸೇರಿದಂತೆ ವಿವಿಧ ಅನುದಾನಗಳಿಂದ ವಾರ್ಷಿಕ ಒಂದೂವರೆ ಕೋಟಿ ರೂಪಾಯಿ ಬಜೆಟ್‌ನ ಅನುದಾನ ಬರಬೇಕಾಗಿದ್ದರೂ, ಗ್ರಾ.ಪಂ.ಗಳಿಗೆ ವಾರ್ಷಿಕ ರೂ. ೫೦ ಲಕ್ಷ ಅನುದಾನವೂ ಬರುತ್ತಿಲ್ಲ ಎಂದು ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿದರು.

೨೦೨೧-೨೨ನೇ ಸಾಲಿನ ೧೫ನೇ ಹಣಕಾಸಿನ ಕ್ರಿಯಾಯೋಜನೆಯನ್ನು ರೂ. ೩೫ ಲಕ್ಷಕ್ಕೆ ಸರಕಾರದ ನಿಯಮದಂತೆ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಪಡೆಯಲಾಯಿತು. ಪಂಚಾಯಿತಿ ಮುಖ್ಯ ೩ ಸ್ಥಾಯಿ ಸಮಿತಿಗಳನ್ನು ರಚಿಸಲಾಯಿತು. ೧೯೯೩-೯೪ನೇ ಸಾಲಿನಲ್ಲಿ ದುಂಡಳ್ಳಿ ಗ್ರಾಮ ಪಂಚಾಯಿತಿಯ ಚುನಾಯಿತ ಮಾಜಿ ಸದಸ್ಯೆ ಮಾದ್ರೆ ಗ್ರಾಮದ ಚೆನ್ನಮ್ಮ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ನಿತಿನ್, ಸದಸ್ಯರುಗಳಾದ ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್, ಎಸ್.ಸಿ. ಕಾಂತರಾಜ್, ಮಹಂತೇಶ್, ಎಂ.ಡಿ. ದೇವರಾಜ್, ಎಸ್.ಪಿ. ಭಾಗ್ಯ, ನಂದಿನಿ, ಗೋಪಿಕಾ, ಸತ್ಯವತಿ, ಭವಾನಿ, ಕೆ.ಎಸ್. ಜಾನಕಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಉಪಸ್ಥಿತರಿದ್ದರು. ವೇಣುಗೋಪಾಲ್ ಸ್ವಾಗತಿಸಿ, ಡಿ.ಪಿ. ಬೋಜಪ್ಪ ವಂದಿಸಿದರು.