ವಿಶೇಷ ವರದಿ - ಅಂಚೆಮನೆ ಸುಧಿ
*ಸಿದ್ದಾಪುರ, ಏ. ೨೪: ಗ್ರಾಮೀಣ ಮಕ್ಕಳು ವಿದ್ಯಾವಂತರಾಗಬೇಕು ಎನ್ನುವ ಸದುದ್ದೇಶದಿಂದ ಕೊಡಗಿನ ಅನೇಕ ಹಿರಿಯರು ಸರ್ಕಾರಿ ಶಾಲೆಗಳ ನಿರ್ಮಾಣಕ್ಕಾಗಿ ಭೂದಾನ ಮಾಡುವ ಮೂಲಕ ಮಹಾತ್ಮರೆನಿಸಿಕೊಂಡಿದ್ದಾರೆ. ಅವರು ನೀಡಿದ ದಾನದಿಂದಲೇ ಇಂದು ಹತ್ತಾರು ಶಾಲೆಗಳು ತಲೆ ಎತ್ತಿ ನಿಂತಿವೆ, ಅಲ್ಲದೆ ಗ್ರಾಮೀಣ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿವೆ.
ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಭೂದಾನಿಗಳಿಗಿಂತ ಭೂದಾಹ ಹೆಚ್ಚಿರುವ ಮಂದಿಯೇ ಕಾಣ ಸಿಗುತ್ತಾರೆ. ಹಿರಿಯರು ನೀಡಿದ ಭೂಮಿಯ ಮೇಲೆ ಹಕ್ಕು ಚಲಾಯಿಸುವ ಯತ್ನಗಳು ನಡೆಯುತ್ತಿದೆ. ಇದು ಇನ್ನೂ ಕೂಡ ದಾನ ಪತ್ರವನ್ನು ದಾಖಲೆಯನ್ನಾಗಿ ಪರಿವರ್ತಿಸಿಕೊಳ್ಳದ ಶಾಲೆಗಳ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತಿದ್ದು, ಹಿರಿಯರು ನೀಡಿದ ಭೂಮಿಯನ್ನು ಮತ್ತು ಶಾಲೆಯನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿಬಿಟ್ಟಿದೆ. ಕೊಡಗು ಜಿಲ್ಲೆಯ ಬಹುತೇಕ ಹಳೆಯ ಸರ್ಕಾರಿ ಶಾಲೆಗಳು ಹಿರಿಯರು ದಾನ ನೀಡಿದ ಜಮೀನಿನಲ್ಲೇ ನೆಲೆ ನಿಂತಿವೆ. ಆದರೆ ದಾನ ಪತ್ರ ಅಥವಾ ಇತರೆ ದಾಖಲೆಗಳಿಲ್ಲದ ಶಾಲೆಗಳು ಅಸ್ತಿತ್ವದ ಬಗ್ಗೆ ಚಿಂತಿಸುವ ಕಾಲ ಎದುರಾಗಿದೆ.
ವಾಲ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದು, ಸೂಕ್ತ ದಾಖಲೆಗಳಿಲ್ಲದೆ ಹೊಸ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು ೭೦ ವರ್ಷಗಳ ಹಿಂದೆ ಹೆಚ್.ಎನ್. ಲಿಂಗಪ್ಪ ಎಂಬವರು ಶಾಲೆಗಾಗಿ ತಮಗೆ ಸೇರಿದ ೨.೪೯ ಎಕರೆ ಭೂಮಿಯನ್ನು ದಾನ ಮಾಡಿದ್ದರು. ದಾನ ಪತ್ರವಾಗಲಿ ಅಥವಾ ಬೇರೆ ಯಾವುದೇ ದಾಖಲೆಗಳಿಲ್ಲದೆ ವಿಶ್ವಾಸದಿಂದಲೇ ಭೂದಾನವಾಗಿತ್ತು. ಆದರೆ ಶಾಲಾ ಆಡಳಿತ ಮಂಡಳಿ ಇಲ್ಲಿಯವರೆಗೆ ಶಾಲೆಗೆ ಸೇರಿದ ಜಮೀನೆಂದು ದಾಖಲೆಗಳನ್ನೇ ಸಿದ್ಧಪಡಿಸಿಕೊಂಡಿಲ್ಲ.
ಇದರ ಪರಿಣಾಮ ಲಿಂಗಪ್ಪ ಅವರ ಸೊಸೆಯಂದಿರಾದ ಗ್ರಾ.ಪಂ. ಮಾಜಿ ಅಧ್ಯಕ್ಷೆ ನಾಗರತ್ನ, ಕಮಲಮ್ಮ, ದಮಯಂತಿ ಹಾಗೂ ಬೇಬಿ ಅವರುಗಳು ಮಾವ ನೀಡಿದ ಭೂಮಿ ನಮಗೆ ಸೇರಬೇಕೆಂದು ತಕರಾರು ತೆಗೆದಿದ್ದಾರೆ. ಶಾಲೆಗೆ ಸೇರಿದ ಜಾಗ ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ, ಇದು ಲಿಂಗಪ್ಪ ಅವರ ಆಸ್ತಿಯಾಗಿರುವುದರಿಂದ ನಮಗೆ ಸೇರಬೇಕು ಎಂದು ಸೋಮವಾರಪೇಟೆ ಕಂದಾಯ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಎರಡು ಬಾರಿ ವಿಚಾರಣೆಯೂ ಆಗಿದೆ.
ಶಾಲೆ ಇರುವ ಜಾಗದ ಮೇಲೆ ದಾನಿಗಳ ಸಂಬAಧಿಕರು ಹಿಡಿತ ಸಾಧಿಸಲು ಮುಂದಾಗುತ್ತಿದ್ದAತೆ ಶಾಲಾ ಮುಖ್ಯ ಶಿಕ್ಷಕ ಹೆಚ್.ಎಂ. ಕುಮಾರ್ ಅವರು ದಾಖಲೆಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮದ ಹಿರಿಯರಾದ ಜಿ.ಪಂ. ಮಾಜಿ ಸದಸ್ಯ ಎ.ವಿ. ಶಾಂತಕುಮಾರ್ ಅವರು ಗ್ರಾಮಸ್ಥರ ಸಭೆ ಕರೆದು ದಾನ ನೀಡಿದ ಜಮೀನನ್ನು ಶಾಲೆಗೆಂದೇ ಉಳಿಸಿಕೊಳ್ಳುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಗ್ರಾಮದ ಹಿರಿಯರ ಪ್ರಕಾರ ಸುಮಾರು ೭೦ ವರ್ಷಗಳ ಹಿಂದೆ ಹೆಚ್.ಎನ್. ಲಿಂಗಪ್ಪ ಅವರು ೨.೪೯ ಎಕರೆ ಭೂಮಿಯನ್ನು ದಾನ ಮಾಡಿದ ಸಂದರ್ಭ ಅದಕ್ಕೆ ಬದಲಾಗಿ ಲಿಂಗಪ್ಪ ಅವರಿಗೆ ೭ ಎಕರೆಯಷ್ಟು ದೇವರ ಜಾಗವನ್ನು ಬಿಟ್ಟು ಕೊಡಲಾಗಿದೆ. ಅಲ್ಲದೆ ಇದಕ್ಕೆ ಸಂಬAಧಿಸಿದ ದಾಖಲೆಯೂ ಇದೆ ಎಂದು ಹೇಳಲಾಗುತ್ತಿದೆ.
ಸ್ವಚ್ಛತೆಗೂ ಅಡ್ಡಿ
ಶಾಲಾ ಆವರಣದಲ್ಲಿ ಕಾಡು ತುಂಬಿರುವುದರಿAದ ಇತ್ತೀಚೆಗೆ ಕಾಡಾನೆಗಳು ಹಾಗೂ ಹಾವುಗಳ ಉಪಟಳ ಹೆಚ್ಚಾಗಿತ್ತು. ಇದರಿಂದ ಆತಂಕಗೊAಡ ಶಿಕ್ಷಕ ವರ್ಗ ಕಾಡು ಕಡಿದು ಸ್ವಚ್ಛತೆ ಕಾಪಾಡಬೇಕೆನ್ನುವ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಗ್ರಾಮದ ಪ್ರಮುಖರು ಶಾಲಾ ಆವರಣದಲ್ಲಿ ಸ್ವಚ್ಛತಾ ಶ್ರಮದಾನಕ್ಕೆ ಮುಂದಾಗಿದ್ದರು.
ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾಮಸ್ಥರು ಸ್ವಚ್ಛತಾ ಶ್ರಮದಾನ ನಡೆಸುತ್ತಿದ್ದ ಸಂದರ್ಭ ಶಾಲೆಯ ಸ್ಥಳದಾನಿಗಳ ಸೊಸೆಯಂದಿರು ಆಕ್ಷೇಪ ವ್ಯಕ್ತಪಡಿಸಿ ಗೇಟಿಗೆ ಬೀಗ ಜಡಿದ ಪ್ರಕರಣವೂ ನಡೆಯಿತು. ಪ್ರಕರಣಕ್ಕೆ ಸಂಬAಧಿಸಿದAತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ಕೂಡ ದಾಖಲಾಯಿತು.
ಇದು ನಮಗೆ ಸೇರಿದ ಭೂಮಿ ಎಂದು ವಾದ ಮಂಡಿಸಿದ ಸೊಸೆಯಂದಿರು ಶಾಲೆಗೆ ಬೀಗ ಜಡಿದು ಗ್ರಾಮಸ್ಥರ ವಿರುದ್ಧ ಹರಿಹಾಯ್ದರು. ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಲಿಂಗಪ್ಪ ಅವರು ಶಾಲೆ ನಿರ್ಮಾಣಕ್ಕೆ ಸ್ಥಳದಾನ ಮಾಡಿ ೭೦ ವರ್ಷಗಳಾಗಿದೆ. ಈ ಜಾಗವನ್ನು ನೀಡಿದ್ದಕ್ಕೆ ಬದಲಾಗಿ ಬೇರೊಂದು ಪ್ರದೇಶದಲ್ಲಿ ಭೂಮಿ ನೀಡಲಾಗಿದೆ. ೭೦ ವರ್ಷಗಳ ಕಾಲ ಸುಮ್ಮನಿದ್ದು ಈಗ ಹಕ್ಕು ಚಲಾಯಿಸುತ್ತಿರುವುದು ಸರಿಯಾದ ಕ್ರಮವಲ್ಲವೆಂದು ತಿಳಿಸಿದರು.
ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿವಾದವನ್ನು ಶೀಘ್ರ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅಲ್ಲದೆ ತಹಶೀಲ್ದಾರ್ ಅವರ ಗಮನವನ್ನು ಕೂಡ ಸೆಳೆದಿರುವ ಪೊಲೀಸ್ ಅಧಿಕಾರಿಗಳು ಕಂದಾಯ ಇಲಾಖೆ ಮೂಲಕವೇ ವಿವಾದ ಬಗೆಹರಿಯಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಲಿಂಗಪ್ಪ ಅವರು ದಾನ ನೀಡಿದಕ್ಕೆ ಆಧಾರವಾಗಿ ಸೂಕ್ತ ದಾಖಲೆಗಳಿಲ್ಲದೆ ಪರದಾಡುತ್ತಿರುವ ಶಾಲಾ ಆಡಳಿತ ಮಂಡಳಿಗೆ ಗ್ರಾಮಸ್ಥರು ಬೆಂಬಲವಾಗಿ ನಿಂತಿದ್ದಾರೆ. ಆದರೆ ದಾನಿಗಳ ನಾಲ್ವರು ಸೊಸೆಯಂದಿರು ನಮ್ಮ ಮಾವನ ಆಸ್ತಿ ನಮಗೆ ಸೇರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕಾನೂನು ಚೌಕಟ್ಟಿನಡಿ ಇದೊಂದು ಇಕ್ಕಟ್ಟಿನ ಪ್ರಕರಣವಾಗಿದ್ದು, ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಬಿಕ್ಕಟ್ಟನ್ನು ಬಗೆ ಹರಿಸಬೇಕೆಂದು ಗ್ರಾಮದ ಪ್ರಮುಖರಾದ ಎ.ವಿ. ಶಾಂತಕುಮಾರ್, ರಾಮಪ್ಪ, ಭುವನೇಂದ್ರ, ಎನ್.ಎಂ. ಅಚ್ಚಯ್ಯ, ಚಿಣ್ಣಪ್ಪ, ಕಾಶಿ, ಶಿವಕುಮಾರ್ ಮತ್ತಿತರರು ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ ಈ ಪ್ರಕರಣ ದಾನಿಗಳು ನೀಡಿರುವ ಭೂಮಿಯ ಮೇಲೆ ಅಸ್ತಿತ್ವ ಕಂಡುಕೊAಡಿರುವ ಸರ್ಕಾರಿ ಶಾಲೆಗಳಿಗೆ ಎಚ್ಚರಿಕೆಯ ಕರೆ ಗಂಟೆಯಾಗಿದ್ದು, ದಾಖಲೆಗಳನ್ನು ಸಮರ್ಪಕಗೊಳಿಸಿಕೊಳ್ಳಲು ಇದು ಸಕಾಲವಾಗಿದೆ