ಮಡಿಕೇರಿ, ಏ. ೨೩: ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ೫ ತಾಲೂಕಿನ ಹೋಬಳಿಗಳಲ್ಲಿ ವಾರದ ೭ ದಿನ, ೨೪ ಗಂಟೆ (೨೪x೭) ಕೋವಿಡ್ ಸಹಾಯವಾಣಿ ಆರಂಭಿಸಬೇಕು ಹಾಗೂ ಸೋಂಕಿತರ ಓಡಾಟವನ್ನು ತಡೆಯುವ ನಿಟ್ಟಿನಲ್ಲಿ ಅವರ ಕೈಗೆ ಸೀಲ್ ಹಾಕಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಆದೇಶಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬAಧಿತ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ವಿ. ಸೋಮಣ್ಣ ಅವರು, ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಕೋವಿಡ್ ಸೋಂಕು ನಿಯಂತ್ರಣ ಮಾಡುವಲ್ಲಿ ಅಧಿಕಾರಿಗಳ ಪಾತ್ರ ಹೆಚ್ಚಿದೆ. ಇದೀಗ ಮತ್ತೆ ಸೋಂಕು ವ್ಯಾಪಿಸುತ್ತಿರುವುದರಿಂದ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯೋನ್ಮುಖಗೊಳ್ಳಬೇಕು. ಸೋಂಕಿತರ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ಮುತುವರ್ಜಿ ವಹಿಸಬೇಕು. ಅಗತ್ಯ ವೈದ್ಯಕೀಯ ಸಲಕರಣೆ, ಲಸಿಕೆಯನ್ನು ಒದಗಿಸಲಾಗುವುದು. ಸರಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತದೆ ಎಂದ ಅವರು, ಪ್ರತಿ ತಾಲೂಕಿನಲ್ಲಿ ಅಪರ ಜಿಲ್ಲಾಧಿಕಾರಿ ನೇತೃತ್ವದ, ತಹಶೀಲ್ದಾರ್ ಮೇಲ್ವಿಚಾರಣೆಯಲ್ಲಿ ಸಹಾಯವಾಣಿ ಆರಂಭಿಸಬೇಕು.

(ಮೊದಲ ಪುಟದಿಂದ) ಕೋವಿಡ್ ಸಂಬAಧಿತ ಯಾವುದೇ ಪ್ರಶ್ನೆಗಳಿಗೂ, ಸೇವೆಗಳಿಗೂ ಇಲ್ಲಿ ಉತ್ತರ ದೊರಕಬೇಕು. ತಾ. ೨೪ರ ಮಧ್ಯಾಹ್ನದ ವೇಳೆಗೆ ಸಹಾಯವಾಣಿ ಆರಂಭಿಸಬೇಕು. ಜೊತೆಗೆ ಸೋಂಕಿತರಿಗೆ ಸೀಲ್ ಹಾಕಬೇಕು ಎಂದು ಆದೇಶಿಸಿದರು.

೫೦೦ ರಿಂದ ೬೦೦ ಬೆಡ್ ವ್ಯವಸ್ಥೆ ಮಾಡಿ

ಕೊರೊನಾ ೨ನೇ ಅಲೆ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಮುಂದಿನ ತಿಂಗಳ ಹೊತ್ತಿಗೆ ಸೋಂಕಿನ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಯಲ್ಲಿ ಸಕಲ ವೈದ್ಯಕೀಯ ಸೌಲಭ್ಯವಿರುವ ೫೦೦ ರಿಂದ ೬೦೦ ಹಾಸಿಗೆಯ ಕೋವಿಡ್ ಆಸ್ಪತ್ರೆಯ ವ್ಯವಸ್ಥೆ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಕಳೆದ ವರ್ಷದ ಏಪ್ರಿಲ್-ಮೇ ತಿಂಗಳಿನಲ್ಲಿ ಕೆಲಸ ಮಾಡಿದಂತೆ, ಇದೀಗ ಮತ್ತೊಮ್ಮೆ ಅಧಿಕಾರಿಗಳು ಕಾರ್ಯೋನ್ಮುಖಗೊಳ್ಳಬೇಕಾದ ಅನಿವಾರ್ಯತೆ ಇದೆ. ಕೊಡಗಿನಲ್ಲಿ ಆಕ್ಸಿಜನ್‌ಗೆ ಕೊರತೆ ಇಲ್ಲ. ಸೋಂಕಿತರಿಗೆ ಮನೆಯನ್ನು ಸೀಲ್‌ಡೌನ್ ಮಾಡುವುದರ ಜೊತೆಗೆ ಪೋಸ್ಟರ್‌ಗಳನ್ನು ಅಂಟಿಸಿ ಅಕ್ಕಪಕ್ಕದವರು ಸೋಂಕಿತರ ಮನೆಗೆ ತೆರಳದಂತೆ ಕ್ರಮವಹಿಸಬೇಕು. ಜಿಲ್ಲೆಯಲ್ಲಿ ೫ ಸಾವಿರ ಲಸಿಕೆಯನ್ನು ೨ನೇ ಡೋಸ್ ಪಡೆಯುವವರಿಗೆಂದು ಕಾಯ್ದಿರಿಸಲಾಗಿದ್ದು, ಅದನ್ನು ಬಳಸಿಕೊಳ್ಳಿ. ರಾಜ್ಯ ಸರಕಾರ ೧ ಕೋಟಿ ಲಸಿಕೆ ಖರೀದಿಸಲು ಅನುಮೋದನೆ ಪಡೆದಿರುವ ಹಿನ್ನೆಲೆ ಲಸಿಕೆಗೆ ಕೊರತೆಯಾಗುವುದಿಲ್ಲ. ಅವಶ್ಯಕತೆ ಇರುವವರಿಗೆ ಲಸಿಕೆ ನೀಡುವಂತೆ ನಿರ್ದೇಶನ ನೀಡಿದರು.

ಒಂದು ನಿರ್ದಿಷ್ಟ ಸಮುದಾಯದವರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟೂ ಹಾಕುತ್ತಿರುವ ಹಿನ್ನೆಲೆ ಅವರಲ್ಲಿ ಜಾಗೃತಿ ಮೂಡಿಸಿ. ೧೮ ವರ್ಷ ಮೇಲ್ಪಟ್ಟವರಿಗೆ ಮೇ ೧ ರಿಂದ ಲಸಿಕೆ ಕಾರ್ಯ ಆರಂಭಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ೧೮ ವರ್ಷ ಮೇಲ್ಪಟ್ಟವರ ಪಟ್ಟಿ ತಯಾರಿಸಿ ವರದಿ ನೀಡುವಂತೆ ಸೂಚಿಸಿದರು. ಸಹಾಯವಾಣಿಗೆ ಸೂಕ್ತ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಿ. ಹೆಚ್ಚುವರಿ ಫೋನ್‌ಗಳನ್ನು ಖರೀದಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಚೆಕ್‌ಪೋಸ್ಟ್ನಲ್ಲಿ ಕಟ್ಟೆಚ್ಚರ ವಹಿಸಿ

ಕೇರಳದಿಂದ ಕೊಡಗು ಜಿಲ್ಲೆಗೆ ಪ್ರವೇಶಿಸುವವರು ಕೊರೊನಾ ನೆಗೆಟಿವ್ ಮಾಡಿರುವುದರಿಂದ ಇತರ ರೋಗಿಗಳಿಗೆ ವ್ಯತಿರಿಕ್ತ ಪರಿಣಾಮ ಬೀರಿದೆ. ವಾಸ್ತವ ಸ್ಥಿತಿ ಅರಿತು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಬೇಕು ಎಂದು ಹೇಳಿದರು.

೧೩ ಸಾವಿರ ಲೀಟರ್ ಆಕ್ಸಿಜನ್

ಕೊಡಗು ಜಿಲ್ಲೆಯಲ್ಲಿ ೧೩ ಸಾವಿರ ಲೀಟರ್ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ್ದು, ೪೪ ಸೋಂಕಿತರಿಗೆ ಅವಶ್ಯಕತೆ ಉಂಟಾಗಿದೆ. ಆಕ್ಸಿಜನ್, ವೆಂಟಿಲೇಟರ್ ಹಾಗೂ ಬೆಡ್‌ಗಳಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಸಭೆಯಲ್ಲಿ ಕೋವಿಡ್ ಸಂಬAಧಿತ ಸ್ಥಿತಿಗತಿ ಬಗ್ಗೆ ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣಾಧಿಕಾರಿಗಳನ್ನು ಪ್ರಶ್ನಿಸಿದ ಸಚಿವರು, ವೆಂಟಿಲೇಟರ್, ಐಸಿಯು ವ್ಯವಸ್ಥೆಯ ಬಗ್ಗೆ ಮಾಹಿತಿ ಬಯಸಿದರು.

ಇದಕ್ಕೆ ಉತ್ತರಿಸಿದ ಡಿಹೆಚ್‌ಓ ಡಾ. ಮೋಹನ್, ಹೋಂ ಐಸೋಲೇಷನ್, ಕೋವಿಡ್ ಆಸ್ಪತ್ರೆಯಲ್ಲಿ ಇರುವ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ನಿತ್ಯ ೧೩೦೦ ಮಂದಿಯ ಮಾದರಿ ಸಂಗ್ರಹಿಸಲಾಗುತ್ತಿದೆ. ಇದರೊಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ೨೯೮೨ ಮಾದರಿ ಸಂಗ್ರಹಿಸಲಾಗಿದೆ. ಜಿಲ್ಲೆಯ ೫ ಕಡೆಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ೯ ಕೋವಿಡ್ ಪರೀಕ್ಷೆ ಸಂಚಾರಿ ಆ್ಯಂಬ್ಯುಲೆನ್ಸ್ ಇದೆ. ಟಾಸ್ಕ್ ಫೋರ್ಸ್ ರಚನೆಯಾಗಿದೆ. ೬ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕವಾಗಿದೆ ಎಂದು ಮಾಹಿತಿ ನೀಡಿದರು.

ವೈದ್ಯಕೀಯ ಕಾಲೇಜು ಮುಖ್ಯಸ್ಥ ಡಾ. ಕಾರ್ಯಪ್ಪ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ೨೫೦ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ೧೫೦ ಆಕ್ಸಿಜನ್ ಬೆಡ್‌ಗಳಿದೆ. ೩೨ ವೆಂಟಿಲೇಟರ್‌ಗಳಿವೆ. ಹೆಚ್ಚುವರಿ ೧೦೦ ಬೆಡ್ ವ್ಯವಸ್ಥೆಗೆ ಪ್ರಸ್ತಾವನೆ ಇದ್ದು, ಶೀಘ್ರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ ಎಂದರು.

ಸಭೆಯಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ರಾಜ್ಯ ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಜಿ.ಪಂ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಉಪಸ್ಥಿತರಿದ್ದರು.