ಸೋಮವಾರಪೇಟೆ, ಏ. ೨೩: ರೂಪಾಂತರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯ ಕಾಣಬೇಕಾದರೆ ಎಲ್ಲರೂ ವಾರಿಯರ್ಸ್ಗಳಾಗಬೇಕು ಎಂದು ತುಮಕೂರು ಸಿದ್ದಗಂಗಾ ಮಠಾಧೀಶರಾದ ಶ್ರೀಸಿದ್ಧಲಿಂಗ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಶಿಡಿಗಳಲೆ ಮಠಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು, ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು, ಜನಸಾಮಾನ್ಯರ ಸಹಕಾರವಿಲ್ಲದಿದ್ದರೆ ಯಾವುದೇ ಫಲ ಕಾಣಲು ಸಾಧ್ಯವಿಲ್ಲ. ಈ ಹಿನ್ನೆಲೆ ಪ್ರತಿಯೋರ್ವರೂ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕೆಂದರು.

ಆರೋಗ್ಯ ಇಲಾಖೆ, ಪೊಲೀಸ್, ಸರ್ಕಾರಿ ಅಧಿಕಾರಿಗಳಂತೆ ಪ್ರತಿಯೋರ್ವ ಪ್ರಜೆಯೂ ಕೊರೊನಾ ವಿರುದ್ದದ ಹೋರಾಟದಲ್ಲಿ ವಾರಿಯರ್ಸ್ಗಳಾಗಬೇಕು. ದಿನೇ ದಿನೇ ಸೋಂಕಿತರು ಹಾಗೂ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳಿಗೂ ಸಮಸ್ಯೆಯಾಗುತ್ತಿದೆ. ಯುವ ಸಮುದಾಯವೂ ಸಹ ಹೆಚ್ಚಾಗಿ ವೈರಸ್‌ಗೆ ಬಲಿಯಾಗುತ್ತಿರುವುದು ಆತಂಕ ಮೂಡಿಸಿದೆ ಎಂದರು.

ಸಣ್ಣ ಜಿಲ್ಲೆಯಾದರೂ ಕೊಡಗಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವದು ಕಳವಳಕಾರಿ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ರೋಗ ಲಕ್ಷಣವಿದ್ದರೆ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕಿವಿಮಾತು ಹೇಳಿದರು.