ಕುಶಾಲನಗರ, ಏ. ೨೩: ಪ್ರಸಕ್ತ ಸಾಲಿನಲ್ಲಿ ಜೂನ್ ೨೧ ರಿಂದ ಆರಂಭ ವಾಗಲಿರುವ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಮೂಲಕ ಪರೀಕ್ಷೆಗೆ ಪೂರ್ವಸಿದ್ಧತೆ ನಡೆಸಬೇಕು ಎಂದು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಸಲಹೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ಫಾತಿಮ ಪ್ರೌಢ ಶಾಲೆಯಲ್ಲಿ ನಡೆದ ತಾಲೂಕು ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರಶ್ನೆಪತ್ರಿಕೆ ತಯಾರಿಕಾ ಸಂಪನ್ಮೂಲ ಶಿಕ್ಷಕರ ವಿಶ್ಲೇಷಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಕೋವಿಡ್-೧೯ ಹೆಚ್ಚುತ್ತಿರುವ ಹಿನ್ನೆಲೆ ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಹಾಗೂ ಪ್ರಮಾಣಿತ ಕಾರ್ಯಾ ಚರಣಾ ವಿಧಾನವನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ೧೦ನೇ ತರಗತಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಶಾಲೆಗೆ ಹಾಜರಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಆಗಿಂದಾಗ್ಗೆ ಸ್ಯಾನಿಟೈಸರ್ ಬಳಕೆ ಮಾಡಿಕೊಂಡು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ವಿಶೇಷ ಗಮನಹರಿಸಬೇಕು ಎಂದರು. ರಾಜ್ಯದಲ್ಲಿ ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಎಲ್ಲಾ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳ ಲಾಗಿದ್ದು, ಪರೀಕ್ಷೆ ಬಗ್ಗೆ ಯಾವುದೇ ಗೊಂದಲ ಬೇಡ. ಕಳೆದ ವರ್ಷ ನಡೆದಂತೆ ಈ ಬಾರಿ ಕೂಡ ಎಸ್‌ಎಸ್ ಎಲ್‌ಸಿ ಪರೀಕ್ಷೆಯೂ ಯಾವುದೇ ಆತಂಕವಿಲ್ಲದೆ ನಡೆಯಲಿದೆ. ಶಿಕ್ಷಕರು ಪರೀಕ್ಷೆ ಸಿದ್ಧತೆ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಪಾಂಡು ಹೇಳಿದರು. ಶಾಲಾ ಪಠ್ಯಕ್ರಮ, ಈತನಕ ಶಾಲೆಗಳಲ್ಲಿ ನಡೆಸಿರುವ ಪರೀಕ್ಷೆಯ ಫಲಿತಾಂಶದ ಪ್ರಗತಿ ಮತ್ತು ವಿಶ್ಲೇಷಣೆ, ಪಠ್ಯದ ಪುನರಾವರ್ತನೆ ಅಭ್ಯಾಸ ಹಾಗೂ ಪರೀಕ್ಷೆಗೆ ಬಾಕಿ ಉಳಿದಿರುವ ದಿನಗಳಲ್ಲಿ ಕಲಿಕೆಯನ್ನು ಉತ್ತಮ ಪಡಿಸುವ ಮೂಲಕ ಉತ್ತಮ ಫಲಿ ತಾಂಶಗಳಿಕೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಮುನ್ನ ಶಾಲಾ ಹಂತದ ಪರೀಕ್ಷೆಯೊಂದಿಗೆ ತಾಲೂಕು ಹಂತದಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ ಎರಡು ಹಂತದಲ್ಲಿ ಪೂರ್ವಸಿದ್ಧತಾ ಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿ ಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಲು ಪ್ರೇರೇಪಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಶಿಕ್ಷಣಾಧಿಕಾರಿ ಹಸೀನಾ ಬಾನು ಮಾತನಾಡಿ, ಮಕ್ಕಳಿಗೆ ಕಲಿಕೆ ಯೊಂದಿಗೆ ಉತ್ತಮ ಆರೋಗ್ಯದ ಕಡೆಗೆ ಕೂಡ ಹೆಚ್ಚಿನ ಗಮನಹರಿಸಬೇಕಿದೆ ಎಂದರು. ಕೋವಿಡ್ ಸೋಂಕಿನ ಹಿನ್ನೆಲೆ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಬಿ.ಆರ್. ಕುಮಾರ್ ಮಾತನಾಡಿ, ಕೋವಿಡ್-೧೯ರ ಸಂದರ್ಭದಲ್ಲಿ ಮಕ್ಕಳನ್ನು ಪರೀಕ್ಷೆಗೆ ಸಿದ್ಧಪಡಿಸಲು ತಾಲೂಕಿನಲ್ಲಿ ಕೈಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳು ಮಕ್ಕಳ ಕಲಿಕೆಗೆ ಉತ್ತಮ ಪ್ರೇರಣೆ ನೀಡಿವೆ ಎಂದರು

ಸAಘದ ಸಂಘಟನಾ ಕಾರ್ಯದರ್ಶಿ ಜಿ.ಎಂ. ಹೇಮಂತ್, ಫಾತಿಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಫ್ರಿ ಡಿಸಿಲ್ವ, ಬಿಆರ್‌ಪಿ ಎಸ್.ಎನ್. ಲೋಕೇಶ್, ಸಂಪನ್ಮೂಲ ಶಿಕ್ಷಕರಾದ ಚಿಣ್ಣಪ್ಪ, ಗಿರೀಶ್, ಮುಬೀನಾ ಕೌಸರ್, ಸಂತೋಷ್ ಕುಮಾರ್, ವಸಂತಕುಮಾರ್, ಸೀಮಾ, ಶಿಕ್ಷಣ ಸಂಯೋಜಕ ಎಸ್.ಆರ್. ಶಿವಲಿಂಗ, ತಾಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಪ್ರಶ್ನೆಪತ್ರಿಕೆ ತಯಾರಿಕಾ ಸಂಪನ್ಮೂಲ ಶಿಕ್ಷಕರು ಇದ್ದರು.