ಮಡಿಕೇರಿ, ಏ. ೨೩: ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರ ಬಗ್ಗೆ ಸಂಘಟನೆಯ ಹೆಸರು ಹೇಳಿಕೊಂಡು ಸುಳ್ಳು ಹೇಳಿಕೆ ನೀಡುತ್ತಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ವಕೀಲ ವಿದ್ಯಾದರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡ್ಡೆಮನೆ ಅಪ್ಪಯ್ಯ ಗೌಡ ಒಬ್ಬ ಕಾಲ್ಪನಿಕ, ಅನಾಮಧೇಯ ವ್ಯಕ್ತಿ ಎಂದು ನ್ಯಾಯಾಲಯ ತೀರ್ಪು ನೀಡಿರುವುದಾಗಿ ಕಾವೇರಿ ಸೇನೆ ಸಂಚಾಲಕ ರವಿ ಚಂಗಪ್ಪ, ವಕೀಲ ಬಿ.ಎ. ಮಾಚಯ್ಯ ಹೇಳಿಕೆ ನೀಡುತ್ತಿರುವುದು ಸತ್ಯಕ್ಕೆ ದೂರವಾದುದು. ಈ ದೂರನ್ನು ಸಿವಿಲ್ ನ್ಯಾಯಾಲಯದಲ್ಲಿ ತೀರ್ಮಾನಿಸಲು ಆಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆಯೇ ಹೊರತು ಬೇರೆ ಯಾವುದೇ ತೀರ್ಮಾನ ನೀಡಿಲ್ಲ. ಆದರೆ ಇವರಿಬ್ಬರು ಈ ಬಗ್ಗೆ ಈ ರೀತಿ ಸುಳ್ಳು ವದಂತಿ ಹಬ್ಬಿಸುತ್ತಿರುವುದಾಗಿ ಆರೋಪಿಸಿದರು.
ಕಾವೇರಿ ಸೇನೆ ಎಂಬ ಸಂಘಟನೆಯ ಹೆಸರು ಹೇಳಿಕೊಂಡು ರವಿ ಚಂಗಪ್ಪ ಕೊಡಗಿನ ರೈತರು, ಭೂಮಾಲೀಕರು, ಮರ ಮಾಲೀಕರಿಗೆ ಕಿರುಕುಳ ನೀಡುವ ವ್ಯಕ್ತಿಯಾಗಿದ್ದಾರೆ ಎಂದು ವಿದ್ಯಾಧರ್ ಆರೋಪಿಸಿದರು.
ಇನ್ನು ವಕೀಲ ಬಿ.ಎ. ಮಾಚಯ್ಯ ಅವರ ಮೇಲೆ ಛಾಪಾ ಕಾಗದ ಹಗರಣ ಸೇರಿದಂತೆ ಹಲವು ಗಂಭೀರ ಆರೋಪವಿದೆ. ಅವರನ್ನು ವಕೀಲರ ಬಾರ್ ಅಸೋಸಿಯೇಷನ್ ೧೫ ವರ್ಷಗಳ ಹಿಂದೆಯೇ ಉಚ್ಚಾಟನೆ ಮಾಡಿದೆ ಎಂದರು.
ಸ್ವಾತAತ್ರö್ಯ ಸಂಗ್ರಾಮದಲ್ಲಿ ಕೊಡಗಿನ ಹೆಮ್ಮನೆಯ ಪುಟ್ಟಬಸಪ್ಪ ಕೂಡ ಪಾಲ್ಗೊಂಡಿದ್ದು ಅವರನ್ನು ಇಂದಿಗೂ ಯಾರೂ ಸ್ಮರಿಸಿಕೊಳ್ಳದಿರುವುದು ಬೇಸರದ ಸಂಗತಿ. ಗುಡ್ಡೆಮನೆ ಅಪ್ಪಯ್ಯಗೌಡ ಕೂಡ ಸ್ವಾತಂತ್ರö್ಯ ಹೋರಾಟಗಾರರಾಗಿದ್ದಾರೆ ಎಂದು ವಿದ್ಯಾಧರ್ ನುಡಿದರು.