ಮಡಿಕೇರಿ, ಏ. ೨೨: ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಮುಷ್ಕರ ನಿರತರಾಗಿದ್ದ ಸಾರಿಗೆ ಬಸ್ ನೌಕರರ ಮುಷ್ಕರ ಇದೀಗ ನ್ಯಾಯಾಲಯದ ಸೂಚನೆಯಂತೆ ವಾಪಸ್ಸಾಗಿದೆ. ಈ ಹಿನ್ನೆಲೆ ಸಾರಿಗೆ ಬಸ್ ಸಂಚಾರ ಪುನರಾರಂಭ ಗೊಂಡಿವೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ಶೇ. ೭೦ ರಷ್ಟು ಬಸ್ ಸಂಚಾರ ನಿನ್ನೆಯಿಂದ ಶುರುವಾಗಿದೆ.
ರಾಜ್ಯದಲ್ಲಿನ ಕರೆಯಂತೆ ಕೊಡಗಿನಲ್ಲೂ ಬಸ್ ಸಂಚಾರದಲ್ಲಿ ವ್ಯತ್ಯಯವುಂಟಾಗಿತ್ತು. ಮಡಿಕೇರಿ ಘಟಕದ ಎಲ್ಲಾ ೧೦೬ ಮಾರ್ಗಗಳ ಬಸ್ ಸಂಚಾರ ಇದರಿಂದಾಗಿ ಸ್ಥಗಿತಗೊಂಡಿತ್ತು. ಈ ನಡುವೆ ಸಂಸ್ಥೆ ಸಿಬ್ಬಂದಿಗಳ ಮೇಲೆ ಹಲವು ಕ್ರಮಗಳನ್ನು ಜರುಗಿಸಿದ್ದು, ಮುಂದಿನ ನಡೆ ಏನೆಂಬದು ಇತ್ಯರ್ಥವಾಗ ಬೇಕಿದೆ.
ಜಿಲ್ಲೆಯಲ್ಲಿನ ಸಿಬ್ಬಂದಿಗಳ ಪೈಕಿ ೪೪ ಮಂದಿಯನ್ನು ವರ್ಗಾವಣೆಗೊಳಿ ಸಲಾಗಿದ್ದು, ೧೨ ಮಂದಿ ವಜಾಗೊಂಡಿದ್ದರೆ, ೫ ಮಂದಿಯನ್ನು ಅಮಾನತ್ತಿನಲ್ಲಿಡಲಾಗಿದೆ. ವರ್ಗಾವರ್ಗಿ ಪ್ರಕ್ರಿಯೆ ವಿವಿಧ ಘಟಕಗಳಿಗೆ ಮಾಡಲಾಗಿರುವುದರಿಂದ ಈ ಬಗ್ಗೆ ಮತ್ತೆ ನಿರ್ಧಾರವಾಗಬೇಕಿದೆ. ಸದ್ಯದ ಮಟ್ಟಿಗೆ ಶೇ. ೭೦ ರಷ್ಟು ಬಸ್ ಸಂಚಾರ ಪ್ರಾರಂಭವಾಗಿದೆ. ಸಂಸ್ಥೆಯ ಸೂಚನೆಯಂತೆ ಘಟಕ ಕಾರ್ಯನಿರ್ವಹಿಸಲಿದೆ ಎಂದು ವ್ಯವಸ್ಥಾಪಕಿ ಗೀತಾ ತಿಳಿಸಿದ್ದಾರೆ.