ಪುತ್ತರಿರ ಕರುಣ್ ಕಾಳಯ್ಯ
ಚೆಟ್ಟಳ್ಳಿ, ಏ. ೨೨: ಸ್ವಚ್ಛ ಭಾರತ ವೆಂಬ ಕೂಗು ದೇಶಾದಾದ್ಯಂತ ಹರಡುತಿದ್ದರೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಕಸವನ್ನೆಲ್ಲ ಪಂಚಾಯಿತಿ ಕಟ್ಟಡದ ಬದಿಯಲ್ಲೇ ಸುರಿದುಕೊಳ್ಳುತ್ತಾ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗದೇ ಇನ್ನು ನಿದ್ರಾವಸ್ಥೆಯಲ್ಲಿದೆ.
ಚೆಟ್ಟಳ್ಳಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗಾಗಿ ಪಂಚಾಯಿತಿ ವ್ಯಾಪ್ತಿಯ ಹಲವು ಜಾಗಗಳನ್ನು ಗುರುತಿಸಲಾಗಿತ್ತು. ಬೇರೆಂಗಿ ಬೆಟ್ಟದಲ್ಲಿ ಕಸವನ್ನು ಹಾಕಲು ಹೊರಟ ಸಂದರ್ಭ ಗ್ರಾಮಸ್ಥರ ವಿರೋಧದ ನಡುವೆ ಸುರಿದ ಕಸವನ್ನು ಅಲ್ಲೇ ಮುಚ್ಚಿದರು. ನಂತರ ಈರಳೆ ಗ್ರಾಮದಲ್ಲಿ ಕಸ ವಿಲೇವಾರಿಗೆ ಹಾಗೂ ನಿರಾಶ್ರಿತರಿಗೆ ಮನೆ ನಿರ್ಮಾಣಕ್ಕಾಗಿ ೨೮/೧ ರ ೪.೬೦ ಎಕರೆ ಜಾಗವನ್ನು ಗುರುತಿಸಿ ಮಂಜೂರಾತಿಗಾಗಿ ಕಂದಾಯ ಇಲಾಖೆಗೆ ಪಂಚಾಯಿತಿ ವತಿಯಿಂದ ಪತ್ರ ಬರೆಯಲಾಯಿತು. ನಂತರ ಆ ಜಾಗದ ಪ್ರಸ್ತಾವನೆಯನ್ನು ಪಂಚಾಯಿತಿಯೇ ಕೈಬಿಟ್ಟಿತು.
ಬಳಿಕ ಚೇರಳ ಗ್ರಾಮದ ಪೊನ್ನತ್ಮೊಟ್ಟೆಯ ಚೆಟ್ಟಳ್ಳಿ ಫಾರಂನ ಸಮೀಪ ಇರುವ ಜಾಗವನ್ನು ಗುರುತಿಸಿ ಅಲ್ಲಿ ಕಸ ವಿಲೇವಾರಿ ಘಟಕ ಮತ್ತು ನಿರಾಶ್ರಿತರಿಗೆ ನಿವೇಶನ ನಿರ್ಮಾಣಕ್ಕಾಗಿ ಜಾಗ ಗುರುತಿಸಿ ಕಂದಾಯ ಇಲಾಖೆಗೆ ಮಂಜೂರಾತಿಗಾಗಿ ಪ್ರಸ್ತಾವನೆ ಕಳುಹಿಸಲಾಯಿತು.
ಕಾಯುತ್ತಿರುವ ಪಂಚಾಯಿತಿ
ಕಸ ವಿಲೇವಾರಿಯ ಶಾಶ್ವತ ಸಮಸ್ಯೆಗೆ ಅತಿ ಶೀಘ್ರದಲ್ಲಿ ಚೇರಳ ಗ್ರಾಮದ ಪೊನ್ನತ್ಮೊಟ್ಟೆಯ ಚೆಟ್ಟಳ್ಳಿ ಫಾರಂನ ಸಮೀಪದ ೪೯/೧ರಲ್ಲಿ ೨.೩೦ ಎಕರೆ ಜಾಗವನ್ನು ಮಂಜೂರು ಮಾಡಿಕೊಡುವಂತೆ ಪಂಚಾಯಿತಿ ಕಂದಾಯ ಇಲಾಖೆಗೆ ಮನವಿ ಮಾಡಿತ್ತು. ಕಂದಾಯ ಇಲಾಖೆ ಸ್ಥಳ ಪರಿಶೀಲಿಸಿ ಸರ್ವೆ ಕಾರ್ಯ ನಡೆಸಿ ಹಲವು ತಿಂಗಳುಗಳೇ ಕಳೆದರೂ ಇಲಾಖಾ ಅಧಿಕಾರಿಗಳ ನಿರ್ಲಕ್ಷö್ಯ ದಿಂದ ಜಾಗದ ಮಂಜೂರಾತಿ ಆದೇಶ ಕಂದಾಯ ಇಲಾಖೆಯ ಕಡತದಲ್ಲೇ ಬಾಕಿಯಾಯಿತು. ಕಂದಾಯ ಇಲಾಖೆಯ ಅನುಮತಿ ಸಿಕ್ಕಿದ ಕೂಡಲೇ
(ಮೊದಲ ಪುಟದಿಂದ) ಕಸ ವಿಲೇವಾರಿ ಘಟಕವನ್ನು ಸ್ಥಾಪಿಸುತ್ತೇವೆಂದು ಕಂದಾಯ ಇಲಾಖೆಯ ಆದೇಶವನ್ನು ಕಾಯುವಂತಾಗಿದೆ.
ಮೂಲೆ ಸೇರಿದ ವಾಹನ
ಕಸ ವಿಲೇವಾರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಸರಕಾರ ಕಳೆದ ಎರಡು ತಿಂಗಳ ಹಿಂದೆ ಪಂಚಾಯಿತಿಗಳಿಗೆ ಕಸ ವಿಲೇವಾರಿಗೆ ಸ್ವಚ್ಛ ವಾಹಿನಿ ಎಂಬ ನೂತನ ವಾಹನವನ್ನು ನೀಡಿದೆ. ಚೆಟ್ಟಳ್ಳಿಗೆ ನೀರಿನ ಟ್ಯಾಂಕ್ ಉದ್ಘಾಟನೆಗೆ ಆಗಮಿಸಿದ್ದ ಶಾಸಕ ಅಪ್ಪಚ್ಚು ರಂಜನ್ ಅವರಿಂದ ಕಸ ವಿಲೇವಾರಿ ವಾಹನಕ್ಕೆ ಚಾಲನೆ ಮಾಡಿಸಿದರು. ಕಸ ವಿಲೇವಾರಿ ಘಟಕ ಸ್ಥಾಪನೆಯಾಗದೇ ಈ ಕಸ ವಿಲೇವಾರಿ ವಾಹನಕ್ಕೆ ಕೆಲಸವಿಲ್ಲದೆ ಪಂಚಾತಿಯ ಪಕ್ಕದ ಸಾರ್ವಜನಿಕ ಶೌಚಾಲಯದ ಬಳಿಯ ಮರದ ಕೆಳಗೆ ಕಾಯುತ್ತಾ ನಿಂತಿದೆ.
ಪAಚಾಯಿತಿ ಸದಸ್ಯರಿಗೆ ಮಾಸಿಕ ಸಭೆಯ ಪತ್ರವನ್ನು ಸದಸ್ಯರ ಮನೆಗೆ ಕೊಂಡೊಯ್ಯಲು ಈ ವಾಹನವನ್ನು ಬಳಕೆ ಮಾಡುತ್ತಿದ್ದಾರೆಂಬ ಮಾಹಿತಿ ಇದೆ.
ವಿಲೇವಾರಿಯಾಗದ ಬುಟ್ಟಿ
ಅಂಗಡಿ ಮಳಿಗೆಯವರಿಗೆ ಹಾಗೂ ಸಾರ್ವಜನಿಕರಿಗೆ ವಿಲೇವಾರಿ ಯಾಗಬೇಕಿದ್ದ ಜಿಲ್ಲಾ ಪಂಚಾಯಿತಿ ಯಿಂದ ಸ್ವಚ್ಛ ಭಾರತ ಯೋಜನೆಯಡಿ ಒದಗಿಸಲಾದ ಸುಮಾರು ೧೦೦೦ ಒಣ ಕಸ ಸಂಗ್ರಹ ಬುಟ್ಟಿ ಕಳೆದ ನಾಲ್ಕು ತಿಂಗಳಿAದ ಚೆಟ್ಟಳ್ಳಿ ಪಂಚಾಯಿತಿ ಕಚೇರಿಯ ಒಳಗೆ ಸಂಗ್ರಹವಾಗಿ ಬಿದ್ದಿದೆ. ಪಂಚಾಯಿತಿ ಅಧಿಕಾರಿಗಳಾಗಲಿ, ನೂತನವಾಗಿ ಆಯ್ಕೆಗೊಂಡ ಸದಸ್ಯರಾಗಲಿ ಇತ್ತಕಡೆ ಗಮನಹರಿಸದ ಫಲವಾಗಿ ಸಮಸ್ಯೆಗೆ ಪರಿಹಾರ ಕಾಣದೆ ಹಾಗೇ ಉಳಿದಿದೆ.
ಕಸ ಸಂಗ್ರಹ ಕೊಠಡಿ ನಿರ್ಮಾಣವಾಗಬೇಕೆಂದು ಸಭೆಯಲ್ಲಿ ಚರ್ಚೆಗೆ ಬಂದರೂ ನೂತನ ಸದಸ್ಯರಲ್ಲಿ ಒಮ್ಮತವಿಲ್ಲದರಿಂದ ಸಭೆಯಲ್ಲಿ ಕೆಲವು ಇಲ್ಲಸಲ್ಲದ ವಿಚಾರದ ಬಗ್ಗೆ ಗದ್ದಲದ ಮೂಲಕ ಸಭೆ ಮುಕ್ತಾಯಗೊಳ್ಳುವ ಪರಿಸ್ಥಿತಿ ಇಲ್ಲಿದೆ. ಕಟ್ಟಡ ಕಾಮಗಾರಿಗೆ ಹಲವರು ವಿರೋಧಿಸುವ ಕಾರಣಕ್ಕಾಗಿ ಗುತ್ತಿಗೆದಾರರು ಮುಂದೆಬರುತ್ತಿಲ್ಲ. ಕಳೆದ ಸಭೆಯ ತೀರ್ಮಾನದಂತೆ ಬೇರೆ ಗುತ್ತಿಗೆದಾರರಿಂದ ಕಸ ಸಂಗ್ರಹ ಕೊಠಡಿ ಕಾಮಗಾರಿಯನ್ನು ನಡೆಸಲು ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿಗಳೇ ಆದೇಶಿಸಬೇಕಿದೆ
ಕೊರಾನಾದ ಎರಡನೆಯ ಅಲೆ ವ್ಯಾಪಿಸಿರುವುದು ಒಂದೆಡೆಯಾದರೆ ಕಸದ ಸಮಸ್ಯೆಯಿಂದ ಚೆಟ್ಟಳ್ಳಿ ಪಟ್ಟಣ ಗಬ್ಬೆದ್ದು ನಾರುತ್ತಾ ಹಲವು ರೋಗ ರುಜಿನಕ್ಕೆ ಕಾರಣವಾಗುತ್ತಿದೆ. ಶಾಶ್ವತ ಸಮಸ್ಯೆಗೆ ಇತ್ತಕಡೆ ಅಧಿಕಾರಿ ವರ್ಗ ಮುತುವರ್ಜಿವಹಿಸದ ಪರಿಣಾಮವೇ ಚೆಟ್ಟಳ್ಳಿಯಲ್ಲಿ ಸೂಕ್ತ ಜಾಗವಿದ್ದರೂ ಶಾಶ್ವತ ಪರಿಹಾರ ಕಂಡು ಕೊಳ್ಳಲಾಗಲಿಲ್ಲ. ಶಾಸಕರು ಹಾಗೂ ಜಿಲ್ಲಾಧಿಕಾರಿಗಳು, ತಹಶೀಲ್ದಾರರು ಇತ್ತ ಗಮನ ಹರಿಸಿ ಶೀಘ್ರದಲ್ಲಿ ಸೂಕ್ತ ಕ್ರಮಕೈಗೊಳ್ಳಲು ಆದೇಶಿಸ ಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.