(ವರದಿ: ಕೆ.ಎಸ್. ಮೂರ್ತಿ)
ಕಣಿವೆ, ಏ. ೨೦: ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿರುವ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನ ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನಾ ಘಟಕದೊಳಗೆ ನುಗ್ಗಿದ ನಾಲ್ಕು ಮೇಕೆಗಳು ಆಹಾರ ದಾಸ್ತಾನು ಕೇಂದ್ರದೊಳಗಿದ್ದ ಅಕ್ಕಿ ಹಾಗೂ ಗೋಧಿಯನ್ನು ತಿಂದು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಕೂಡ್ಲೂರು ಗ್ರಾಮದ ರೈತ ಸಹದೇವ ಎಂಬವರಿಗೆ ಸೇರಿದ ಸುಮಾರು ೪೦ ಸಾವಿರ ಬೆಲೆ ಬಾಳುವ ಮೇಕೆಗಳು ಎನ್ನಲಾಗಿದೆ. ಘಟಕದ ಮೇಲುಸ್ತುವಾರಿಯೂ ಆದ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅಣ್ಣಯ್ಯ ಎಂಬವರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸೋಮವಾರಪೇಟೆ ತಾಲೂಕು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಬದಾಮಿ ಆಗಮಿಸಿ ಮೃತ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದರು.
ಘಟನೆಯ ವಿವರ: ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಇರುವ ಅವಿಭಜಿತ ಸೋಮವಾರಪೇಟೆ ತಾಲೂಕಿನ ಒಟ್ಟು ೨೮೦ ಅಂಗನವಾಡಿಗಳಿಗೆ ಆಹಾರದ ಪೊಟ್ಟಣಗಳನ್ನು ಪೂರೈಸುವ ಆಹಾರ ಉತ್ಪಾದನಾ ಘಟಕದಲ್ಲಿನ ಅಕ್ಕಿ ಹಾಗೂ ಗೋಧಿ ದಾಸ್ತಾನು ಗೋದಾಮಿನೊಳಗೆ ಆಹಾರ ಅರಸಿ ಶನಿವಾರ ಧಾವಿಸಿದ ಮೇಕೆಗಳು ಅಲ್ಲಿನ ಅಕ್ಕಿ, ಗೋಧಿ ತಿಂದು ಅಲ್ಲಿಯೇ ಉಳಿದುಕೊಂಡಿವೆ. ಆಹಾರ ಘಟಕದಲ್ಲಿ ಕರ್ತವ್ಯ ಗೈವ ಸಿಬ್ಬಂದಿಗಳು ಶನಿವಾರ ಸಂಜೆ ಕರ್ತವ್ಯ ಮುಗಿಸಿ ಮರಳುವ ಸಂದರ್ಭ ಗೋದಾಮನ್ನು ಪರಿಶೀಲಿಸದೇ ಹಾಗೆಯೇ ಬೀಗ ಹಾಕಿ ಹೋಗಿದ್ದಾರೆ. ಇತ್ತ ಸಂಜೆಯಾದರೂ ಮನೆಗೆ ಬಾರದ ಮೇಕೆಗಳನ್ನು ಹುಡುಕಿದ ರೈತ ಸಹದೇವ ಮೇಕೆಗಳನ್ನು ಯಾರೋ ಕದ್ದು ಒಯ್ದಿರಬಹುದು ಎಂದು ಅಲ್ಲಿ ಇಲ್ಲಿ ಹುಡುಕಿ ಸಾಕಾಗಿದ್ದರು.
ಬಳಿಕ ಮಂಗಳವಾರ ಬೆಳಿಗ್ಗೆ ಎಂದಿನAತೆ ಆಹಾರ ಉತ್ಪಾದನಾ ಘಟಕಕ್ಕೆ ಧಾವಿಸಿದ ಮಹಿಳಾ ಸಿಬ್ಬಂದಿಗಳು ಆಹಾರ ದಾಸ್ತಾನು ಮಳಿಗೆಯಿಂದ ದುರ್ವಾಸನೆ ಬರುತ್ತಿದ್ದುದನ್ನು ಗ್ರಹಿಸಿ ತಮ್ಮ ಉಸ್ತುವಾರಿ ಅಧಿಕಾರಿ ಅಣ್ಣಯ್ಯ ಅವರಿಗೆ ಮಾಹಿತಿ ನೀಡಿದಾಗ ಅವರು ಮಧ್ಯಾಹ್ನ ಸ್ಥಳಕ್ಕೆ ಬಂದು ನೋಡಿದಾಗ ಮೇಕೆಗಳು ಸತ್ತು ಬಿದ್ದಿದ್ದ ಚಿತ್ರಣ ಕಂಡು ಬಂತು.
ಬಳಿಕ ಕುಶಾಲನಗರ ಗ್ರಾಮಾಂತರ ಠಾಣೆ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕೆ.ಕೆ. ಭೋಗಪ್ಪ ಅವರಿಗೆ ಮಾಹಿತಿ ನೀಡಿದಾಗ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
ಆಹಾರ ದಾಸ್ತಾನು ಘಟಕದ ದುರವಸ್ಥೆ
ಎಳೆಯ ಕಂದಮ್ಮಗಳು ಹಾಗೂ ಅಪೌಷ್ಟಿಕತೆಯಿಂದ ಬಳಲುವ ಮಹಿಳೆಯರಿಗೆ ರಾಜ್ಯ ಸರ್ಕಾರ ಉಚಿತವಾಗಿ
(ಮೊದಲ ಪುಟದಿಂದ) ವಿತರಿಸುವ ಪೌಷ್ಟಿಕ ಆಹಾರ ತಯಾರಿಸುವ ಈ ಘಟಕದ ದುರವಸ್ಥೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಕಿ, ಬೇಳೆ, ಹೆಸರುಕಾಳು, ಕಡಲೆ ಕಾಳು, ನೆಲಗಡಲೆ ಬೀಜ ಮೊದಲಾದ ಪೌಷ್ಟಿಕ ಆಹಾರವನ್ನು ಪೂರೈಸುವ ಈ ಘಟಕದಲ್ಲಿ ಸ್ವಚ್ಛತೆ ಎಂಬದು ಕಾಣುತ್ತಿಲ್ಲ. ಅಕ್ಕಿ ಹಾಗೂ ಗೋಧಿ ದಾಸ್ತಾನಿನ ಬಳಿ ಇಲಿ-ಹೆಗ್ಗಣಗಳ ಗಲೀಜುಗಳ ರಾಶಿ ಇದ್ದದು ಗೋಚರಿಸಿತು.
ಅಭದ್ರತೆಯ ಆಹಾರ ದಾಸ್ತಾನು
ಆಹಾರ ಉತ್ಪಾದನಾ ಘಟಕದ ಸುತ್ತಲೂ ಸರಿಯಾದ ಹಾಗೂ ಸಮರ್ಪಕವಾದ ತಡೆಗೋಡೆಯಿಲ್ಲದ ಕಾರಣ ತಾತ್ಕಾಲಿಕವಾಗಿ ಕಿತ್ತು ಹೋದಂತಹ ಮತ್ತು ತುಕ್ಕು ಹಿಡಿದಂತಹ ಕಬ್ಬಿಣದ ‘ಮೆಸ್’ ಅಳವಡಿಸಲಾಗಿದೆ. ಕಿತ್ತು ಹೋದ ಕಬ್ಬಿಣದ ‘ಮೆಸ್’ ಒಳಗೆ ನುಗ್ಗಿದ ಮೇಕೆಗಳು ದಾಸ್ತಾನು ಮಳಿಗೆಯೊಳಗೆ ಹೋಗಿವೆ ಎನ್ನಲಾಗುತ್ತಿದೆ.
ಸೂಕ್ತ ರಕ್ಷಣಾ ಗೋಡೆ ಹಾಗೂ ಬಂದೋಬಸ್ತ್ ಇಲ್ಲದ ಈ ಆಹಾರ ಉತ್ಪಾದನಾ ಘಟಕದಲ್ಲಿ ಭವಿಷ್ಯದಲ್ಲಿ ಮತ್ತಾವುದೇ ಅವಘಡಗಳು ಜರುಗಿದರೂ ಅಚ್ಚರಿ ಪಡುವಂತಿಲ್ಲ. ಕೂಡಲೇ ಸಂಬAಧಿಸಿದ ಹಿರಿಯ ಆಹಾರ ಇಲಾಖೆಯ ಅಧಿಕಾರಿಗಳು ಈ ಘಟಕದತ್ತ ಬಂದು ಇಲ್ಲಿನ ಸಿಬ್ಬಂದಿಗಳಿಗೆ ಅಥವಾ ಮೇಲುಸ್ತುವಾರಿ ವಹಿಸಿರುವ ಅಧಿಕಾರಿಗೆ ಅಗತ್ಯ ಮಾಹಿತಿ ನೀಡುವ ಕೆಲಸ ತುರ್ತಾಗಿ ಆಗಬೇಕಿದೆ.