ನಾಪೋಕ್ಲು, ಏ. ೨೦: ಸಮೀಪದ ಪಾಲೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ವಾರ್ಷಿಕ ಉತ್ಸವದಲ್ಲಿ ಪಾರ್ವತಿ ಪರಮೇಶ್ವರ ಜೋಡು ದೇವರ ನೃತ್ಯಬಲಿ ಜರುಗಿ, ಮಧ್ಯಾಹ್ನ ದೇವಾಲಯದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಒಂದು ವಾರಗಳ ಕಾಲ ಹಬ್ಬ ವಿಜೃಂಭಣೆಯಿAದ ಜರುಗಿ ತಾ. ೧೮ ರಂದು ಎತ್ತುಪೋರಾಟ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜೋಡು ದೇವರ ನೃತ್ಯೋತ್ಸವವನ್ನು ಅಪಾರ ಸಂಖ್ಯೆಯ ಭಕ್ತರು ವೀಕ್ಷಿಸಿದರು. ನೃತ್ಯೋತ್ಸವಕ್ಕೆ ಮುನ್ನ ನಾಲ್ಕುನಾಡಿನ ಭಗವತಿ ಯುವಕ ಸಂಘದ ಸದಸ್ಯರಿಂದ ಬೊಳಕಾಟ್, ಕೋಲಾಟ್ ಹಾಗೂ ಪರೆಯಕಳಿ ಪ್ರದರ್ಶನ ನಡೆಯಿತು. ಮುಖ್ಯ ಅರ್ಚಕ ದೇವಿಪ್ರಸಾದ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ನಡೆಯಿತು. ತಕ್ಕಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.