ಚುನಾವಣೆ ಮುಂದೂಡಿಕೆ-ಚರ್ಚಿಸಿ ತೀರ್ಮಾನ

ಬೆಂಗಳೂರು, ಏ. ೧೯: ತಾಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ಮುಂದೂಡಿಕೆ ಮಾಡಲು ಸರ್ಕಾರದ ಚಿಂತಿಸಿದ್ದು, ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ನಂತರ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ ಅವರು, ಜಿ.ಪಂ., ತಾ.ಪಂ. ಚುನಾವಣೆ ಬರುತ್ತಿವೆ. ಕೋವಿಡ್ ಹೆಚ್ಚಳದಿಂದ ಚುನಾವಣೆ ಬೇಡವೆಂಬ ಸಲಹೆ ವ್ಯಕ್ತವಾಗಿವೆ. ಹಾಗಾಗಿ ಸದ್ಯಕ್ಕೆ ಚುನಾವಣೆ ಮುಂದಕ್ಕೆ ಹಾಕಲು ಚಿಂತನೆ ಇದೆ. ಸಂಪುಟ ಸಬ್ ಕಮಿಟಿ ಸಭೆಯಲ್ಲಿ ಚರ್ಚಿಸುತ್ತೇವೆ. ನಂತರ ಇದರ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ. ಅವಧಿ ಮುಗಿದ ಕಡೆ ಆಡಳಿತಾಧಿಕಾರಿ ಹಾಕಬೇಕು. ಈ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ. ಕೋವಿಡ್ ಹೆಚ್ಚು ಉಲ್ಬಣವಾಗುತ್ತಿದೆ. ಮೂರುವರೆ ಕೋಟಿ ಜನ ಇದರಲ್ಲಿ ಭಾಗಿಯಾಗಬೇಕು ಹಾಗಾಗಿ ಮುಂದೂಡುವುದು ಸೂಕ್ತ ಎಂಬ ಅಭಿಪ್ರಾಯ ಇದೆ. ಇದನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಆಯೋಗಕ್ಕೆ ಕಳಿಸುತ್ತೇವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

೧೮ ವರ್ಷ ಮೇಲ್ಪಟ್ಟವರಿಕೆ ಲಸಿಕೆ

ನವದೆಹಲಿ, ಏ. ೧೯: ಮೇ ೧ ರಿಂದ ೧೮ ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆ ಪಡೆಯಬಹುದು ಭಾರತ ಸರ್ಕಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೆöÊವ್‌ನ ೩ನೇ ಹಂತದಲ್ಲಿ ಬೆಲೆ ನಿಗದಿ, ಅರ್ಹತೆ, ಲಸಿಕೆಗಳ ನಿರ್ವಹಣೆಯನ್ನು ಸುಲಭವಾಗಿ ಮಾಡಲಾಗುತ್ತಿದೆ. ೧೮ ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಕೋವಿಡ್ -೧೯ ವಿರುದ್ಧ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಲಸಿಕೆ ತಯಾರಕರು ತಮ್ಮ ಪೂರೈಕೆಯ ಶೇ. ೫೦ ರಷ್ಟನ್ನು ರಾಜ್ಯ ಸರ್ಕಾರಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಪೂರ್ವ ಘೋಷಿತ ಬೆಲೆಗೆ ಬಿಡುಗಡೆ ಮಾಡಲು ಅಧಿಕಾರ ನೀಡಲಾಗಿದೆ.

ಪ್ರೊ. ಈ. ವೆಂಕಟಸುಬ್ಬಯ್ಯ ನಿಧನ

ಬೆಂಗಳೂರು, ಏ. ೧೯: ಕನ್ನಡದ ನಿಘಂಟು ತಜ್ಞರೆಂದೇ ಖ್ಯಾತಿ ಪಡೆದಿದ್ದ ಖ್ಯಾತ ಭಾಷಾ ತಜ್ಞ, ಶತಾಯುಷಿ ಪ್ರೊ. ಈ. ವೆಂಕಟಸುಬ್ಬಯ್ಯ (೧೦೮) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ವೆಂಕಟಸುಬ್ಬಯ್ಯ ಅವರು, ಭಾನುವಾರ ತಡರಾತ್ರಿ ೧.೧೫ಕ್ಕೆ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಒಂದು ವಾರದ ಹಿಂದಷ್ಟೇ ಮೂತ್ರನಾಳದ ಸೋಂಕಿಗೆ ಒಳಗಾಗಿದ್ದ ಅವರನ್ನು ಶಾಂತಿ ಸರ್ಜಿಕಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಿತ್ತು. ಆದರೆ ರಾತ್ರಿ ವಯೋಸಹಜವಾಗಿ ಅಸ್ವಸ್ಥರಾಗಿ ನಿಧನರಾಗಿದ್ದಾರೆ ಅವರ ಕುಟುಂಬದ ಮೂಲಗಳು ತಿಳಿಸಿವೆ.

ನೈಟ್‌ಕರ್ಫ್ಯೂ ಆದೇಶ ನಕಲಿ

ಬೆಂಗಳೂರು, ಏ. ೧೯: ರಾಜ್ಯದಲ್ಲಿ ನೈಟ್‌ಕರ್ಫೂ ಅವಧಿ ವಿಸ್ತರಿಸಲಾಗಿದ್ದು, ನಾಳೆಯಿಂದ ಮೇ ೩ ರವರೆಗೆ ರಾತ್ರಿ ೯ ಗಂಟೆಯಿAದ ಬೆಳಗ್ಗೆ ೬ ಗಂಟೆಯವರೆಗೆ ನೈಟ್‌ಕರ್ಫ್ಯೂ ಜಾರಿಗೊಳಿಸಲಾಗುವುದು ಎಂಬ ಆದೇಶ ನಕಲಿ ಎಂದು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳಲ್ಲಿ ರಾತ್ರಿ ೯ ಗಂಟೆಯಿAದ ನೈಟ್ ಕರ್ಫ್ಯೂ ಜಾರಿ ಎಂಬ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರವಿಕುಮಾರ್ ಅವರು, ರಾಜ್ಯ ಸರ್ಕಾರ ಅಧಿಕೃತವಾಗಿ ಯಾವುದೇ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿಲ್ಲ ಮತ್ತು ೯ ಗಂಟೆಯಿAದ ನೈಟ್‌ಕರ್ಫ್ಯೂ ಜಾರಿ ಎಂಬ ಆದೇಶ ನಕಲಿ ಎಂದು ಹೇಳಿದ್ದಾರೆ. ಇಂದು ರಾಜ್ಯಪಾಲರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಿಗದಿಯಾಗಿದ್ದು, ಸಭೆಯ ನಂತರ ಮುಖ್ಯಮಂತ್ರಿಗಳು ಅಧಿಕೃತವಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ರವಿಕುಮಾರ್ ತಿಳಿಸಿದ್ದಾರೆ.

ಬೆಡ್ ಕೊರತೆ ನೀಗಿಸಲು ವಿಪಕ್ಷ ನಾಯಕರ ಸಲಹೆ

ಬೆಂಗಳೂರು, ಏ. ೧೯: ಬೆಂಗಳೂರಿನಲ್ಲಿ ಕೋವಿಡ್-೧೯ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆ ಸಿಎಂ ಯಡಿಯೂರಪ್ಪ ಬೆಂಗಳೂರಿನ ಸಚಿವರು, ಸಂಸದರು ಹಾಗೂ ಶಾಸಕರ ಜೊತೆ ನಡೆಸಿದ ವೀಡಿಯೋ ಸಂವಾದದಲ್ಲಿ ಲಾಕ್‌ಡೌನ್ ಹೊರತುಪಡಿಸಿ ಬೆಡ್ ಕೊರತೆ ನೀಗಿಸಲು, ಅಂತ್ಯಕ್ರಿಯೆಗೆ ಸಮರ್ಪಕ ವ್ಯವಸ್ಥೆ, ಆಕ್ಸಿಜನ್ ಕೊರತೆ ನಿವಾರಣೆ ಸೇರಿದಂತೆ ಇತರೆ ಕಠಿಣ ಕ್ರಮಕ್ಕೆ ವಿಪಕ್ಷ ಶಾಸಕರು ಸಲಹೆ ನೀಡಿದರು. ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಸರ್ಕಾರದ ನಿಲುವು ಸ್ಪಷ್ಟಪಡಿಸಿದಲ್ಲಿ ಪೂರಕವಾಗಿ ಏನು ಮಾಡಬಹುದು ಎಂದು ಪ್ರಶ್ನಿಸಿದಾಗ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಆರ್. ಅಶೋಕ್, ತಮ್ಮ ಅಭಿಪ್ರಾಯ, ವಿಶೇಷವಾಗಿ, ರಚನಾತ್ಮಕ ಸಲಹೆಗಳನ್ನು ಪಡೆದು, ವೈಜ್ಞಾನಿಕ ನೆಲೆಗಟ್ಟಿನಲ್ಲಿ ಸರ್ಕಾರದ ನಿಲುವು ಪ್ರಕಟಿಸುವುದಾಗಿ ಹೇಳಿದರು. ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ಕನಿಷ್ಟ ೨೫,೦೦೦ ಹಾಸಿಗೆಗಳನ್ನು ವ್ಯವಸ್ಥೆ ಮಾಡಿ. ಹೋಮ್ ಐಸೋಲೇಷನ್‌ನಲ್ಲಿರುವರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಲಾಕ್‌ಡೌನ್‌ಗಿಂತಲೂ ಸೆಕ್ಷನ್ ೧೪೪ ಜಾರಿ ಮಾಡಿ ಗುಂಪು ಸೇರುವುದನ್ನು ತಡೆಯುವುದು ಉತ್ತಮ. ಕಲ್ಯಾಣ ಮಂಟಪ, ಸಮುದಾಯ ಭವನ, ಮಾರುಕಟ್ಟೆಗಳಲ್ಲಿ ಜನಸಂದಣಿ ನಿಯಂತ್ರಿಸಬೇಕು. ನೈಟ್‌ಕರ್ಫ್ಯೂ ಸಮಯ ಬದಲಾವಣೆ ಅಗತ್ಯವಿಲ್ಲ. ಕೊಳಗೇರಿಗಳಲ್ಲಿ ಲಸಿಕಾ ಅಭಿಯಾನಕ್ಕೆ ಒತ್ತು ಕೊಡಿ ಎಂದು ಸಲಹೆ ನೀಡಿದರು.

ಸಮಿತಿ ಸುಪರ್ದಿಗೆ ಗೋಕರ್ಣ ದೇವಾಲಯ

ನವದೆಹಲಿ, ಏ. ೧೯: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ನಿರ್ವಹಣೆಯನ್ನು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದ ಮೇಲ್ವಿಚಾರಣಾ ಸಮಿತಿಗೆ ಹಸ್ತಾಂತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಅವರನ್ನೊಳ ಗೊಂಡ ನ್ಯಾಯಪೀಠವು ರಾಮಚಂದ್ರಾಪುರ ಮಠ ಸೇರಿದಂತೆ ಗುಂಪೊAದು ಸಲ್ಲಿಸಿದ್ದ ಮನವಿಯ ಕುರಿತು ಸೋಮವಾರ ತೀರ್ಪು ನೀಡಿತು. ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಾಲಯದ ನಿರ್ವಹಣೆಯನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವ ರಾಜ್ಯ ಸರ್ಕಾರದ ಆದೇಶವನ್ನು ರದ್ದುಪಡಿಸಿದ ೨೦೧೮ ರ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಮಠ ಮೇಲ್ಮನವಿ ಸಲ್ಲಿಸಿತ್ತು. ಉನ್ನತ ನ್ಯಾಯಾಲಯವು ತನ್ನ ಹಿಂದಿನ ಮಧ್ಯಂತರ ಆದೇಶಗಳನ್ನು ಮಾರ್ಪಡಿಸಿತು ಮತ್ತು ಗೋಕರ್ಣ ಮಹಾಬಲೇಶ್ವರ ದೇವಸ್ಥಾನವು ಈಗ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ (ನಿವೃತ್ತ) ಶ್ರೀಕೃಷ್ಣ ನೇತೃತ್ವದ ಮೇಲ್ವಿಚಾರಣಾ ಸಮಿತಿಯಡಿ ಬರುತ್ತದೆ ಎಂದು ಆದೇಶಿಸಿದೆ. ಇದರಂತೆ ಮೇಲ್ಮನವಿ ಸಲ್ಲಿಸಿದ್ದ ಮಠ ಎಲ್ಲಾ ಪದ್ಧತಿಗಳು ಮತ್ತು ಸಂಪ್ರದಾಯಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುವ ಸಮಿತಿಗೆ ನಿರ್ವಹಣೆಯನ್ನು ಹಸ್ತಾಂತರಿಸಬೇಕಾಗುತ್ತದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಬೆಡ್ ನೀಡದ ಖಾಸಗಿ ಆಸ್ಪತ್ರೆಗಳು ಸರಕಾರದ ವಶಕ್ಕೆ

ಬೆಂಗಳೂರು, ಏ. ೧೯: ಬೆಡ್ ನೀಡದ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಎಚ್ಚರಿಸಿದ್ದಾರೆ. ವಿಧಾನಸೌದದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಇತರೆ ರೋಗಿಗಳು ಈಗಾಗಲೇ ಬೆಡ್ ನಲ್ಲಿದ್ದು, ಅವರನ್ನು ಖಾಸಗಿ ಆಸ್ಪತ್ರೆಗಳು ಏಕಾಏಕಿ ಕಳುಹಿಸಲು ಆಗುವುದಿಲ್ಲ. ಖಾಸಗಿ ಆಸ್ಪತ್ರೆಗಳ ಜೊತೆ ಈಗಾಗಲೇ ಈ ಸಂಬAಧ ಮಾತುಕತೆ ನಡೆದಿದೆ. ಸರ್ಕಾರ ನಿಗದಿಪಡಿಸಿರುವ ಹಾಸಿಗೆ ವ್ಯವಸ್ಥೆಗಳನ್ನು ಖಾಸಗಿಯವರು ಮಾಡಲೇಬೇಕು. ಇಲ್ಲದೇ ಹೋದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಸರ್ಕಾರ ನಿಗದಿ ಮಾಡಿರುವ ಶೇ. ೫೦ ರಷ್ಟು ಬೆಡ್‌ಗಳನ್ನು ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಕೊಡಲೇಬೇಕು. ಇಲ್ಲದೆ ಹೋದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ವಶಕ್ಕೆ ಪಡೆಯಲಾಗುವುದು ಎಂದರು.