ಕೊಡಗಿನ ಕಾಫಿ ಉದ್ಯಮ ಇನ್ನೆಷ್ಟು ವರ್ಷಗಳು ಉಳಿಯುವುದೋ ಎಂಬ ಭಯ ಹಾಗೂ ಚಿಂತೆ ಕಾಫಿ ಬೆಳೆಗಾರರನ್ನು ಗಾಢವಾಗಿ ಕಾಡುತ್ತಿದೆ. ಅದರಲ್ಲೂ ಇಲ್ಲಿಯ ಮೂಲನಿವಾಸಿಗಳಿಗೆ ಕಾಫಿ ಬೆಳೆಯನ್ನು ಬಿಟ್ಟರೆ ಬೇರೆ ಯಾವುದೇ ಪರ್ಯಾಯ ಬೆಳೆ ಬೆಳೆಯಲು ಸಾಧ್ಯವಿಲ್ಲ. ಕಳೆದ ಕೆಲವು ವರ್ಷಗಳ ತನಕ ಈ ಜಿಲ್ಲೆಯ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯಾಗಿ ಕಾಫಿ ಉದ್ಯಮವನ್ನು ನಂಬಿ ಬದುಕುತ್ತಿದ್ದರು. ಕಾಫಿ ಹಾಗೂ ಇತರ ವ್ಯವಹಾರಗಳು ಒಂದಕ್ಕೊAದು ಹಾಸುಹೊಕ್ಕಾಗಿ ಸೊಗಸಾಗಿ ಸಾಗುತ್ತಿತ್ತು. ಎಲ್ಲರಿಗೂ ಇದರ ಬಗ್ಗೆ ಅಭಿಮಾನ ಹಾಗೂ ಪ್ರೀತಿ ಇತ್ತು. ಕಾಫಿ ಕೃಷಿಯೊಳಗೆ ಖುಷಿ ಕಾಣಬಹುದಿತ್ತು. ಆದರೆ ಇಂದು ಎಲ್ಲವೂ ಬದಲಾಗುತ್ತಿದೆ. ಕಾಫಿ ಒಂದನ್ನೇ ನಂಬಿ ಬದುಕು ಸಾಗಿಸುವುದು ಕಷ್ಟಸಾಧ್ಯ! ಹಿಂದೆ ಕೇವಲ ಭತ್ತ ಬೆಳೆದು ಸಂಭ್ರಮದ ಬದುಕು ಬದುಕುತ್ತಿದ್ದರು. ಆದರೆ ಇಂದು ಭತ್ತ ಬೇಸಾಯ ಮಾಡುತ್ತಿದ್ದ ಪ್ರದೇಶದಲ್ಲಿ ಶೇ. ೬೦ ರಷ್ಟು ಕಾಂಕ್ರಿಟ್ ಕಟ್ಟಡಗಳು! ಶೇ. ೨೦ ರಷ್ಟರಲ್ಲಿ ಹೊರ ರಾಜ್ಯದ ಜನರ ವಾಸಸ್ಥಾನ. ಇನ್ನುಳಿದ ಶೇ. ೨೦ ರಲ್ಲಿ ಕೇವಲ ಶೇ. ೧೦ ರಷ್ಟು ಮಾತ್ರ ಭತ್ತ ಬೆಳೆಯುತ್ತಿದ್ದು, ಉಳಿದ ಭಾಗ ಪಾಳುಬಿಡಲಾಗಿದೆ. ಇಲ್ಲವೇ ಕಾಫಿ ತೋಟವಾಗಿ ಪರಿವರ್ತನೆಗೊಳಿಸಲಾಗಿದೆ. ಹಲವಾರು ವರ್ಷಗಳಿಂದ ಕಾಫಿ ಮಾರುಕಟ್ಟೆಯನ್ನು ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಹಲವು ವರ್ಷಗಳ ಕಾಲ ಕಾಫಿ ಮಂಡಳಿ ಬೆಳೆಗಾರರನ್ನು ಜೀತರಾಳುಗಳ ಹಾಗೆ ಬಳಸಿಕೊಂಡು ಚೀಲ ಒಂದಕ್ಕೆ ರೂ. ೩೫೦, ರೂ. ೪೦೦ ನೀಡಿ ಕೈ ತೊಳೆದುಕೊಳ್ಳುತ್ತಿತ್ತು. ಇವರ ಹಿಡಿತದಿಂದ ೧೯೯೪ - ೯೫ನೇ ಇಸವಿಯಲ್ಲಿ ಮುಕ್ತ ಮಾರುಕಟ್ಟೆ ಬರಲು ಹೋರಾಟಗಳೇ ನಡೆಸಬೇಕಾಯಿತು. ರೂ. ೩೫೦ ರಿಂದ ರೂ. ೨೦೦೦ಕ್ಕೆ ಬಂದಾಗ ಹೋರಾಟಗಳನ್ನು, ಹೋರಾಟದ ಹಾದಿಯನ್ನು, ಹಳೆಯ ಕಷ್ಟಗಳನ್ನೆಲ್ಲಾ ಮರೆತು ಕಾಫಿ ಬೆಳೆಗಾರ ಹಾರಾಟಗಳನ್ನು ಪ್ರಾರಂಭಿಸಿದನು. ಹೆಂಚು ಮನೆಗಳೆಲ್ಲವೂ ಮಾಯವಾಗಿ ಕಾಂಕ್ರಿಟ್ ಬಂಗಲೆಗಳಾದವು. ಜೀವನಶೈಲಿ ಬದಲಾಯಿತು. ದುಂದುವೆಚ್ಛ ಹೆಚ್ಚಾದವು. ಸಮಾರಂಭಗಳಲ್ಲಿ ಜನಜಂಗುಳಿ ದಾಳಾಧೂಳಿ! ವಾಹನ ಹಾಗೂ ಮದ್ಯ ವ್ಯಾಪಾರದಲ್ಲಿ ನಮ್ಮ ಜಿಲ್ಲೆ ಹಲವು ವರ್ಷಗಳಿಂದ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡೇ ಬಂದಿದೆ... ಹಾಗೆಯೇ ಪಕ್ಕದ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳೂ ಹೆಚ್ಚಾದವು! ಅದೆಷ್ಟೋ ಕಾಫಿ ವ್ಯಾಪಾರಿಗಳು ರಾತೋರಾತ್ರಿ ಗಂಟೂ ಮೂಟೆ ಕಟ್ಟಿಕೊಂಡು ಓಡಿ ಹೋದರು. ಇನ್ನೂ ಹಲವರು ಭೂಗತದಾರರು! ಕೆಲವರು ಭೂಮಿ ಒಳಗಾದರು. ಆದರೂ ಸಹ ಬೆಳೆಗಾರರು ಇಂದಿಗೂ ಅಂಥವರ ಮೋಸದ ಜಾಲಕ್ಕೆ ಬೀಳುತ್ತಲೇ ಇದ್ದಾರೆ. ಸನ್ ೧೯೯೯ ರಲ್ಲಿ ರೂ. ೧೫೦೦ ರಿಂದ ರೂ. ೧೬೦೦ ಇದ್ದ ಕಾಫಿ ಧಾರಣೆ ಸನ್ ೨೦೦೧ ರಲ್ಲಿ ರೂ. ೧೦೦೦ಕ್ಕೆ ಬಂದರೆ ಸನ್ ೨೦೦೧ ರಲ್ಲಿ ಕೇವಲ ರೂ. ೬೦೦ ರಿಂದ ರೂ. ೭೦೦ ಕ್ಕೆ ಬಂತು. ಸನ್ ೨೦೦೨ ರಲ್ಲಿ ರೂ. ೫೦೦ ಆಯಿತು. ಸನ್ ೨೦೦೩ ರಲ್ಲಿ ಸ್ವಲ್ಪ ಚೇತರಿಸಿಕೊಂಡು ರೂ. ೭೫೦ ರಿಂದ ರೂ. ೮೦೦ ಆಯಿತು. ಸನ್ ೨೦೦೪ ರಲ್ಲೂ ರೂ. ೮೦೦ ಆಯಿತು. ಸನ್ ೨೦೦೫ ರಲ್ಲಿ ಮುಕ್ತ ವಿದೇಶಿ ರಫ್ತು ನೀತಿಯಿಂದ ಸ್ವಲ್ಪ ಸುಧಾರಿಸಿಕೊಂಡ ಕಾಫಿ ಧಾರಣೆ ಮೆಲ್ಲ ಮೆಲ್ಲನೆ ಏರಿಕೆ ಕಂಡುಕೊAಡಿತು. ಈ ಒಂದು ಅವಧಿಯಲ್ಲಿ (ಸನ್ ೧೯೯೯ ರಿಂದ ೨೦೦೫ ರವರೆಗೆ) ಅದೆಷ್ಟೋ ಸಣ್ಣ ಬೆಳೆಗಾರರು ತಮ್ಮ ಅಸ್ತಿತ್ವವನ್ನು ಕಳೆದು ಕೊಳ್ಳುವ ಭಯದಲ್ಲಿ ಕದ್ದುಮುಚ್ಚಿ ಕಾಫಿ ತೋಟಗಳನ್ನು ಪಕ್ಕದ ರಾಜ್ಯದವರಿಗೆ ಸಿಕ್ಕಸಿಕ್ಕ ಬೆಲೆಗೆ ಮಾರಾಟ ಮಾಡಿದ್ದೂ ಉಂಟು! ಸನ್ ೨೦೦೫-೨೦೦೬ ರಲ್ಲಿ ಒಂದು ಚೀಲ ಕಾಫಿ ರೂ. ೨೨೦೦, ಈಗ ಅಂದರೆ ೬ ವರ್ಷಗಳ ಬಳಿಕ ಕಾಫಿಯ ಧಾರಣೆ ಒಂದು ಚೀಲಕ್ಕೆ ರೂ. ೨೬೦೦ ಇದಕ್ಕಿಂತ ವಿಪರ್ಯಾಸ ಮತ್ತೊಂದಿಲ್ಲ. ಸನ್ ೨೦೦೫ ರಲ್ಲಿ ತೋಟದ ಕೂಲಿ ಕಾರ್ಮಿಕರಿಗೆ ೨೦೪.೨೧ ಪೈಸೆ, ಇವತ್ತು ೩೪೨.೨೫ ಪೈಸೆ! ಅಂದು ಒಂದು ಕೆ.ಜಿ. ಹಸಿ ಕಾಫಿ ಕುಯ್ಯಲು ೧.೩೦ ಪೈಸೆ. ಇಂದು ರೂ. ೩.೫೦ ರಿಂದ ರೂ. ೪. ಅಂದು ಒಂದು ಗಿಡ ಕಪಾತಿಗೆ ರೂ. ೩ ಇವತ್ತು ಅದು ರೂ. ೮ ರಿಂದ ರೂ. ೯. ಒಂದು ಮೂಟೆ ಡಿ.ಎ.ಪಿ. ಗೊಬ್ಬರಕ್ಕೆ ಅಂದು ರೂ. ೧೦೮೦, ಇಂದು ಅದೇ ಡಿ.ಎ.ಪಿ.ಗೆ ರೂ. ೧೨೦೦ ರಿಂದ ೧೨೫೦. ಮರ ಕಪಾತ್ ಮಾಡಲು ಅಂದು ರೂ. ೩೦೦ ಕೇಳುತ್ತಿದ್ದವರು ಇಂದು ರೂ. ೬೦೦ ರಿಂದ ರೂ. ೭೦೦ ಕೇಳುತ್ತಿದ್ದಾರೆ! ಡೀಸೆಲ್ ದರ ಅಂದು ರೂ. ೫೨, ಇಂದು ರೂ. ೮೭. ಇತರೇ ಖರ್ಚು ಕಟ್ಟಡ, ಎರತೆ, ಅಗತೆ, ಚಿಗುರು ತೆಗೆಯುವುದು ಎಲ್ಲವನ್ನು ಒಟ್ಟು ಸೇರಿಸಿ ನೋಡಿದರೆ ಬೆಳೆಗಾರರಿಗೆ ಸಿಗುವ ಲಾಭ ‘೦’!
ಕೊಡಗಿನಲ್ಲಿ ಶೇ. ೯೮ ರಷ್ಟು ಕಾಫಿ ಕೃಷಿ ಪ್ರದೇಶದಲ್ಲಿ ಶೇ. ೫೦ ರಷ್ಟು ಹೊರಗಿನವರ ಕೈಯಲ್ಲಿದೆ. ಕೇವಲ ಶೇ. ೪೮ ರಷ್ಟು ಮಾತ್ರ ಸ್ಥಳೀಯರ ಕೈಯಲ್ಲಿದೆ. ಆದರೂ ಕಾಫಿ ಬೆಳೆಗಾರರು ಶ್ರೀಮಂತರು! ಕಾರಣ ಬ್ಯಾಂಕ್‌ಗಳು ಬೆಳೆಗಾರರು ಕೇಳಿದಷ್ಟು ಗಿರವಿ ಸಾಲ ಕೊಟ್ಟು ಮುಂದೊAದು ದಿನ ಸಾಲ ಕಟ್ಟಲಾಗದಿದ್ದಾಗ ರೈತರ ಕಾಫಿ ತೋಟಗಳು ಎಸ್.ಬಿ.ಐ., ಬಿ.ಒ.ಬಿ., ಕೆನರಾ ಬಡಾವಣೆಗಳಾಗಿ ಮರು ನಾಮಕರಣಗೊಳ್ಳಲಿದೆ! ಕಾಫಿ ಮಂಡಳಿಯವರು ಬಂದು ಸರ್ವೆ ಕಾರ್ಯವನ್ನು ಕೈಗೊಂಡು ಕಾಫಿ ಉತ್ಪಾದನೆಯ ಒಟ್ಟು ವೆಚ್ಚ ಹಾಗೂ ಫಸಲಿನ ಅಂದಾಜಿನ ಆಯವ್ಯಯ(ಛಿosಣ oಜಿ ಛಿuಟಣivಚಿಣioಟಿ ಚಿಟಿಜ ಠಿಡಿoಜuಛಿಣiviಣಥಿ oಜಿ ಡಿobusಣಚಿ & ಚಿಡಿಚಿbiಛಿಚಿ) ಪ್ರಕಾರ ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷಗಳ ಸರಾಸರಿ ಫಸಲು ೧೦೩೧ ಕೆ.ಜಿ./ ಹೆಕ್ಟೆರ್ ಅರೇಬಿಕಾ ಕಾಫಿ ೪೨೮ ಕೆ.ಜಿ./ಹೆಕ್ಟೆರ್ (ಮಳೆ ಆಧಾರಿತ) ೨೦೧೭-೧೯ ರ ಅಂಕಿ ಅಂಶಗಳ ಪ್ರಕಾರ ಒಂದು ಹೆಕ್ಟೆರ್ ಪ್ರದೇಶದಲ್ಲಿ ಅಂದಾಜು ೧೫೦೦ ಕೆ.ಜಿ. ಒಣ ಕಾಫಿ ಸಿಕ್ಕಿದೆ/ ಅಂದರೆ ಅದು ಎಕರೆಗೆ ೬೦೦ ಕೆ.ಜಿ. (ಇದು ಕಾಫಿ ಮಂಡಳಿಯವರೇ ಪ್ರಕಟಿಸಿದ್ದು) ತಿತಿತಿ.iಟಿಜiಚಿಛಿoಜಿಜಿeeoಡಿg/ಜಚಿಣಚಿbಚಿseಛಿoಜಿಜಿeehಣmಟ ಹಾಗೆಯೇ ಒಂದು ಎಕರೆ ರೋಬಸ್ಟಾ ಕಾಫಿ ಬೆಳೆಗೆ ತಗಲುವ ವೆಚ್ಚ ರೂ. ೪೫,೦೦೦ ದಿಂದ ೫೫೦೦೦ಗಳು. ಇವರ ಪ್ರಕಾರ ೬೦೦ ಕೆ.ಜಿ. ಕಾಫಿಗೆ ಇಂದಿನ ಧಾರಣೆಯ ಪ್ರಕಾರ ರೂ. ೩೩,೬೦೦ ಬಾಕಿ ಇರುವ ರೂ. ೯ ರಿಂದ ೧೯ ಸಾವಿರಗಳನ್ನು ಬೆಳೆಗಾರ ಎಲ್ಲಿಂದ ತಂದು ಹಾಕುವುದು? ಇಂದು ಎಕರೆಗೆ ೧೦೦೦ ಕೆ.ಜಿ. ಕಾಫಿ ಉತ್ಪಾದಿಸಬೇಕಾದರೆ ವರ್ಷಕ್ಕೆ ೨-೩ ಬಾರಿ ನೀರು ಹಾಗೂ ಗೊಬ್ಬರ ಕೊಡಲೇಬೇಕು. ಇದರ ವೆಚ್ಚ ಎಷ್ಟು? ಕಾಫಿ ಬೆಳೆಗಾರರ ನಿಜವಾದ ಕಷ್ಟ-ನಷ್ಟಗಳನ್ನು ಸರಕಾರದ ಮುಂದೆ ಅಂಕಿ ಅಂಶಗಳ ಆಧಾರದಲ್ಲಿ ಮಾಡುವವರು ಯಾರು? ಕೆ.ಪಿ.ಎ. - ಸಿ.ಪಿ.ಎ.ಗಳು ಮಾಡುತ್ತಿರುವುದಾದರೂ ಏನು? ಇವರ ಸಮಾವೇಶಗಳೆಲ್ಲವೂ ಐಶಾರಾಮಿ ಹೊಟೇಲ್‌ಗಳಲ್ಲಿ ಮಾತ್ರ ನಡೆಯುತ್ತವೆ ಎಂದು ಗೊತ್ತಿದೆ! ಕಾಫಿ ಮಂಡಳಿಗೆ ಸರಕಾರದಿಂದ ಆಯ್ಕೆಯಾಗುವವರು ಆಯಾ ರಾಜಕೀಯ ಪಕ್ಷದಲ್ಲಿ ಅತೃಪ್ತರಾಗಿ ಯಾವುದೇ ಅಧಿಕಾರ (ಪಕ್ಷದ ಮಟ್ಟದಲ್ಲಿ) ಇಲ್ಲದವರನ್ನು ಆರಿಸಿ ಕಳುಹಿಸುತ್ತಾರೆ.! ಇಂತಹವರು ಪಕ್ಷದ ಋಣ ತೀರಿಸುತ್ತಾರೆಯೇ ವಿನಃ ಬೆಳೆಗಾರರ ತೊಂದರೆಗಳನ್ನಲ್ಲಾ.
ಕಾಫಿ ಮಂಡಳಿಯಲ್ಲಿ ಕೋಟಿ ಕೋಟಿ ಹಣ ಕೊಳೆಯುತ್ತಿದ್ದರೂ ಇದರ ಸದುಪಯೋಗ ಯಾರಿಗೆ ಆಗುತ್ತಿದೆ ಎಂದು ಯಾರಿಗೂ ಗೊತ್ತಿಲ್ಲ. ಬೆಳೆಗಾರರಿಗೆ ಸಬ್ಸಿಡಿ ಕೊಡುವುದೊಂದೇ ಅವರ ಉದ್ಯೋಗವಾಗಿದೆ. ಕಾಫಿಗೆ ದೇಶಿಯ ಮಾರುಕಟ್ಟೆ ನಿರ್ಮಾಣ ಮಾಡಿ ನಮ್ಮಲ್ಲಿ ಬೆಳೆಯುವ ಕಾಫಿಯನ್ನು ನಮ್ಮಲ್ಲೇ ಬಳಕೆಯಾಗುವಂತ ಕಾರ್ಯಗಳಿಗೆ ಕೈ ಹಾಕುತ್ತಿಲ್ಲ! ನಮ್ಮ ದೇಶದ ಪ್ರಮುಖ ಎರಡು ಇಲಾಖೆಗಳಾದ (ರೈಲ್ವೆ ಮತ್ತು ಸೇನೆ)ಯಲ್ಲಿ ಕಾಫಿಯ ಬಳಕೆ ಪ್ರಾರಂಭಿಸಿದರೆ ನಾವು ಬೆಳೆದ ಕಾಫಿ ನಮಗೇ ಸಾಲುವುದಿಲ್ಲ! ಆದರೆ ಟೀ ಮಾಫಿಯಾದೆದುರು ಕಾಫಿ ಬೆಳೆಗಾರ ಮಂಡಿಯೂರಿ, ತಲೆತಗ್ಗಿಸಿ ಕೂರಬೇಕಾದ ಪರಿಸ್ಥಿತಿ ಇಂದು ನಮ್ಮ ದೇಶದಲ್ಲಿದೆ. ದೇಸಿ ಉತ್ಪಾದನೆಗೆ ಉತ್ತೇಜನ ಕೊಡಬೇಕು ಎಂಬ ಮಂತ್ರಕ್ಕೆ ಇಷ್ಟೇನಾ ಬೆಲೆ? ಕೆ.ಪಿ.ಎ., ಸಿ.ಪಿ.ಎ., ಕಾಫಿ ಮಂಡಳಿ ಎಲ್ಲವೂ ನೆಪಮಾತ್ರಕ್ಕೆ. ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಹವಾಮಾನ ವೈಪರೀತ್ಯ, ಆಧಾಯಕ್ಕಿಂತ ಹೆಚ್ಚಿನ ಖರ್ಚು, ಅತ್ಯಧಿಕ ರಾಸಾಯನಿಕ ಬಳಕೆ, ಅಧಿಕ ಕೂಲಿ, ಧಾರಣೆ ಕುಸಿತ ಇವೆಲ್ಲದಿಂದಾಗಿ ಕಾಫಿ ಬೆಳೆಯ ಜೊತೆಯಲ್ಲೇ ಬೆಳೆಗಾರರೂ ಕೂಡ ನಾಶವಾಗುವುದು ಖಂಡಿತ!
- ಮಚ್ಚಮಾಡ ಅನೀಶ್ ಮಾದಪ್ಪ, ಟಿ. ಶೆಟ್ಟಿಗೇರಿ.