ಮಡಿಕೇರಿ ಏ. ೧೬ : ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ ಸಾಮಾನ್ಯ ಸಭೆ ಪಂಚಾಯ್ತಿ ಅಧ್ಯಕ್ಷೆ ಬಿ.ಎಸ್.ಅನಿತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಷ್ಟಿçÃಯ ಜಲ್ಧನ್ ಮಿಷನ್ ಯೋಜನೆಗೆ ಪ್ರತಿಯೊಂದು ಕುಟುಂಬ ತಲಾ ೬೦೦ ರೂ. ನೀಡಬೇಕೆಂಬ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಯಿತು.
ಈ ಸಂದರ್ಭ ಮಾತನಾಡಿದ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ಈ ಯೋಜನೆಯಲ್ಲಿ ಪಂಚಾಯಿತಿ ಮೂಲಕ ೭.೫೦ ಲಕ್ಷ ರೂ. ನೀಡಿದರೆ, ಉಳಿದ ಹಣವನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಆದ್ದರಿಂದ ಪ್ರತಿ ಕುಟುಂಬ ೬೦೦ ರೂ. ನೀಡುವುದು ಅನಿವಾರ್ಯವಾಗಿದೆ. ಗ್ರಾಮಸ್ಥರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಗ್ರಾ.ಪಂ ವ್ಯಾಪ್ತಿಯಲ್ಲಿರುವ ನೀರಿನ ಮೋಟರುಗಳನ್ನು ಮೊಬೈಲ್ ಮೂಲಕವೇ ನಿರ್ವಹಿಸುವ ಹೈಟೆಕ್ ವ್ಯವಸ್ಥೆಗೆ ಸಭೆ ಸಮ್ಮತಿ ಸೂಚಿಸಿತು.
ಪಂಚಾಯ್ತಿ ವ್ಯಾಪ್ತಿಯ ಹೋಂಸ್ಟೇಗಳ ನೀರಿನ ಕಂದಾಯ ವಾರ್ಷಿಕ ೭ ಸಾವಿರ ರೂ. ಪಾವತಿಸುವುದು ಕಡ್ಡಾಯವಾಗಿರುತ್ತದೆ. ಕಳೆದ ಬಾರಿ ನಿಗಧಿಪಡಿಸಲಾಗಿದ್ದ ೧೦ ಸಾವಿರ ರೂ. ದುಬಾರಿಯಾಯಿತೆಂದು ಯಾರೂ ನೀರಿನ ಕಂದಾಯ ಪಾವತಿಸಿರಲಿಲ್ಲ. ಆದರೆ ಈಗ ಈ ಮೊತ್ತವನ್ನು ೭ ಸಾವಿರ ರೂ.ಗಳಿಗೆ ಇಳಿಕೆ ಮಾಡಿರುವುದರಿಂದ ಸಕಾಲದಲ್ಲಿ ಹಣ ಪಾವತಿಸುವಂತೆ ಅಧ್ಯಕ್ಷರು ಮನವಿ ಮಾಡಿದರು.
ಉದ್ಯೋಗ ಖಾತ್ರಿ ಯೋಜನೆಯಡಿ, ಕ್ರಿಯಾ ಯೋಜನೆ ತಯಾರಿಸಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮೂರು ಬಾರಿ ಕಳುಹಿಸಿದರೂ ಅನುಮೋದನೆ ದೊರೆತಿಲ್ಲ. ಆದ್ದರಿಂದ ಮತ್ತೊಮ್ಮೆ ಜಿ.ಪಂ ಗೆ ಕ್ರಿಯಾ ಯೋಜನೆ ಸಲ್ಲಿಸಲು ಸಭೆ ನಿರ್ಣಯ ಕೈಗೊಂಡಿತು.
ಪಂಚಾಯ್ತಿಯ ಎಂ.ಬಿ ಪುಸ್ತಕ ನಾಪತ್ತೆ ಪ್ರಕರಣ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ವಿಷಯ ಪ್ರಸ್ತಾಪಿಸಿದ ಸದಸ್ಯ ಭುವನೇಂದ್ರ ಪುಸ್ತಕವನ್ನು ಆಡಿಟ್ ಸಂದರ್ಭವೂ ನೀಡಿಲ್ಲ, ಇದರ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಪ್ರತಿಕ್ರಿಯೆ ನೀಡಿದ ಅಭಿವೃದ್ಧಿ ಅಧಿಕಾರಿ ಪುಸ್ತಕ ಇನ್ನೂ ಕೂಡ ಪತ್ತೆಯಾಗಿಲ್ಲವೆಂದರು. ಉಪಾಧ್ಯಕ್ಷ ಎನ್.ಎಸ್.ಸುಧಾ, ಕಾರ್ಯದರ್ಶಿ ರವಿ ಹಾಗೂ ಸದಸ್ಯರು ಸಭೆಯಲ್ಲಿ ಹಾಜರಿದ್ದರು.