ಮಡಿಕೇರಿ, ಏ. ೧೫: ಸರಕಾರದ ಹೊಸ ಕಾನೂನಿನಿಂದಾಗಿ ಕಟ್ಟಡ ಕಾಮಗಾರಿ ಸಾಮಗ್ರಿ ಸಾಗಾಟ ಮಾಡುವ ಲಾರಿ ಮತ್ತು ಮಿನಿ ಲಾರಿ ಚಾಲಕರು ಹಾಗೂ ಮಾಲೀಕರು ಸಂಕಷ್ಟಕ್ಕೀಡಾಗಿದ್ದು, ಸಾಮಗ್ರಿಗಳನ್ನು ಸಾಗಾಟ ಮಾಡಲು ಕಾನೂನಾತ್ಮಕ ವಾಗಿ ಅನುಮತಿ ನೀಡುವಂತೆ ಜಿಲ್ಲಾಡಳಿತವನ್ನು ಮನವಿ ಮಾಡಿ ಕೊಂಡಿರುವ ಲಾರಿ ಮಾಲೀಕರು ಹಾಗೂ ಚಾಲಕರುಗಳು; ಬೇಡಿಕೆ ಈಡೇರದಿದ್ದಲ್ಲಿ ಜಿಲ್ಲೆಯಾದ್ಯಂತ ಇರುವ ಎಲ್ಲಾ ಲಾರಿಗಳ ಸಂಚಾರ ವನ್ನು ಸ್ಥಗಿತಗೊಳಿಸಿ ಮೌನ ಮುಷ್ಕರ ಹೂಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಕೊಡಗು ಜಿಲ್ಲಾ ಲಾರಿ ಮತ್ತು ಮಿನಿಲಾರಿ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಸಮದ್ ಮೆಟ್ರೊ; ಜಿಲ್ಲೆಯಲ್ಲಿ ೨೦೦ ರಿಂದ ೨೫೦ ಲಾರಿ ಮತ್ತು ಮಿನಿಲಾರಿ, ಟಿಪ್ಪರ್‌ಗಳಿದ್ದು, ಕಟ್ಟಡ ಕಾಮಗಾರಿ ಸಾಮಗ್ರಿಗಳ ಸಾಗಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಲೀಕರು - ಚಾಲಕರು, ಸಿಬ್ಬಂದಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಕುಟುಂಬಗಳು ಇದನ್ನೇ ಅವಲಂಭಿಸಿ ಕೊಂಡು ಬದುಕು ಸಾಗಿಸುತ್ತಿದ್ದು, ಪ್ರಸ್ತುತ ಸರಕಾರದ ಹೊಸ ಕಾನೂನಿ ನಿಂದಾಗಿ ಸಾವಿರಾರು ಕುಟುಂಬಗಳ ಜೀವನ ದುಸ್ತರವಾಗಿದೆ ಎಂದು ಹೇಳಿದರು. ಹೊಸ ಕಾನೂನಿನಿಂದಾಗಿ ಕಟ್ಟಡ ಸಾಮಗ್ರಿಗಳಿಗೆ ಅವಶ್ಯವಾದಂತಹ ಮರಳು, ಜಲ್ಲಿ, ಸೈಜ್ ಕಲ್ಲುಗಳು ಯಾವದೂ ಸಿಗುತ್ತಿಲ್ಲ. ಕಲ್ಲು ಕ್ವಾರಿಗಳಲ್ಲಿ ಅನುಮತಿ ಕೂಡ ಸಿಗುತ್ತಿಲ್ಲ. ಇದರೊಂದಿಗೆ ತೈಲ ಬೆಲೆ, ವಾಹನಗಳ ಬಿಡಿಭಾಗಗಳ ಬೆಲೆ ಕೂಡ ದುಬಾರಿಯಾಗಿದ್ದು, ವಿಮೆ, ತೆರಿಗೆ ಪಾವತಿಗೂ ಕಷ್ಟಕರವಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಆರು ತಿಂಗಳು ಮಾತ್ರ ಕೆಲಸ ಮಾಡಲು ಸಾಧ್ಯವಿದ್ದು, ಅದರಲ್ಲೂ ರಜಾ ದಿನಗಳನ್ನು ಕಳೆದರೆ ನಮಗೆ ಕೇವಲ ಮೂರು ತಿಂಗಳು ಮಾತ್ರ ಕೆಲಸ ಮಾಡಲು ಅವಕಾಶ ಸಿಗುತ್ತದೆ. ವಾಹನಗಳ ಮೇಲಿನ ಸಾಲವನ್ನು ತೀರಿಸಲು ಕೂಡ ಕಷ್ಟವಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಪೊಲೀಸರಿAದ ಕಿರುಕುಳ
ಈ ಎಲ್ಲಾ ಸಮಸ್ಯೆಗಳೊಂದಿಗೆ ವೀರಾಜಪೇಟೆ ತಾಲೂಕಿನಲ್ಲಿ ಪೊಲೀಸರ ಕಿರುಕುಳ ಅಧಿಕವಾಗಿದೆ. ವಿನಾಕಾರಣ ವಾಹನಗಳನ್ನು ತಡೆದು ಹೆಚ್ಚುವರಿ ತೂಕದ ನೆಪವೊಡ್ಡಿ ಲಾರಿ ಮಾಲೀಕರಿಗೆ ತಮಗೆ ಮನಬಂದAತೆ ದಂಡ ವಿಧಿಸುತ್ತಿದ್ದಾರೆ. ಅಲ್ಲದೆ, ಮುಟ್ಟುಗೋಲು ಹಾಕಿಕೊಂಡು ವಾಹನಗಳನ್ನು ೨೪ ಗಂಟೆಗಳಲ್ಲಿ ಬಿಡಿಸಿಕೊಳ್ಳಲು ಅವಕಾಶವಿದ್ದರೂ ಏನಾದರೂ ನೆಪವೊಡ್ಡಿ ೫-೬ ದಿನಗಳ ಕಾಲ ವಾಹನಗಳನ್ನು ನಿಲ್ಲಿಸಿಕೊಳ್ಳು ತ್ತಾರೆ. ಇದರಿಂದ ವಾಹನಕ್ಕೂ ಹಾನಿಯಾಗುವದಲ್ಲದೆ, ಚಾಲಕರ, ಸಿಬ್ಬಂದಿಗಳ ಕೆಲಸವೂ ಕಡಿತ ಗೊಳ್ಳುತ್ತದೆ.
ಇದಲ್ಲದೆ, ಕಟ್ಟಡ ಸಾಮಗ್ರಿಗಳನ್ನು ಸಾಗಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಗಿ ಸ್ಥಗಿತಗೊಳಿಸಲಾಗಿದ್ದು, ಇಲಾಖೆ ಕೂಡ ವಾಹನ ಮುಟ್ಟುಗೋಲು ಹಾಕಿಕೊಂಡು ಹೆಚ್ಚುವರಿ ದಂಡ ವಿಧಿಸಲಾಗುತ್ತಿದೆ. ಇದರಿಂದಾಗಿ ಲಾರಿ ಮಾಲೀಕರು; ಚಾಲಕರು ಜೀವನೋಪಾಯೋಗಕ್ಕಾಗಿ ಬೇರೆ ಮಾರ್ಗವನ್ನು ಹುಡುಕುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಹೊರಜಿಲ್ಲೆಯಿಂದ ಸಾಮಗ್ರಿ
ಜಿಲ್ಲೆಯ ಲಾರಿ ಮಾಲೀಕರು, ಚಾಲಕರು ತೆರಿಗೆ, ವಿಮೆ ಪಾವತಿ ಮಾಡುವದರಲ್ಲಿ ಮೊದಲಿಗರಾಗಿದ್ದಾರೆ. ಅಲ್ಲದೆ ನಿಯಮ ಮೀರದೆ ಸಮವಸ್ತç ಸಹಿತ, ದಾಖಲಾತಿಯೊಂದಿಗೆ ವಾಹನ ಚಲಾಯಿಸುತ್ತಾರೆ. ಆದರೆ ಇಲ್ಲಿಯ ವಾಹನಗಳಿಗೆ ಅಧಿಕಾರಿಗಳಿಂದ ತೊಂದರೆ ಹೆಚ್ಚಾಗಿದೆ. ಬದಲಿಗೆ ಹೊರ ಜಿಲ್ಲೆಗಳಿಂದ ಪ್ರಭಾವಿಗಳ ಲಾರಿಗಳು ಯಾವದೇ ನಿಯಮಗಳಿಲ್ಲದೆ ಎಗ್ಗಿಲ್ಲದೆ ಸಾಮಗ್ರಿಗಳನ್ನು ಜಿಲ್ಲೆಗೆ ಸರಬರಾಜು ಮಾಡುತ್ತವೆ. ಈ ಬಗ್ಗೆ ಯಾವುದೇ ಕ್ರಮ ಜರುಗಿಸುವದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಮೌನ ಮುಷ್ಕರ
ಕಾನೂನು, ನಿಯಮಬಾಹಿರವಾಗಿ ನಾವುಗಳು ಸಾಮಗ್ರಿಗಳನ್ನು ಸಾಗಾಟ ಮಾಡುವದಿಲ್ಲ. ನಮಗೆ ಕಾನೂನಾತ್ಮಕವಾಗಿ ಸಾಗಾಟ ಮಾಡಲು ಸಂಬAಧಿಸಿದ ಇಲಾಖೆ, ಜಿಲ್ಲಾಡಳಿತ ಅನುಮತಿ ನೀಡಲಿ. ಅನುಮತಿಯೊಂದಿಗೆ ಸಾಗಾಟ ಮಾಡುತ್ತೇವೆ. ಮುಂದಿನ ಏಳು ದಿನಗಳೊಳಗಡೆ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ಲಾರಿಗಳನ್ನು ಯಾರಿಗೂ ತೊಂದರೆ ಯಾಗದಂತೆ ನಿರ್ದಿಷ್ಟ ಪ್ರದೇಶಗಳಲ್ಲಿ ನಿಲುಗಡೆಗೊಳಿಸಿ, ಮಾಲೀಕರು ಹಾಗೂ ಚಾಲಕರು ಮನೆಯಲ್ಲಿಯೇ ಇದ್ದುಕೊಂಡು ಮೌನ ಪ್ರತಿಭಟನೆ ನಡೆಸುವದಾಗಿ ಸಮದ್ ಹೇಳಿದರು.
ವರ್ಗಾವಣೆ ಮಾಡಿ
ಸಂಘದ ಗೌರವ ಅಧ್ಯಕ್ಷ ಪಿ. ಟಿ. ರಮೇಶ್ ಮಾತನಾಡಿ, ಪ್ರಕೃತಿ ವಿಕೋಪ, ಕೋವಿಡ್‌ನಿಂದಾಗಿ ಎಲ್ಲವೂ ಸ್ಥಗಿತಗೊಂಡಿತ್ತು. ಇದೀಗ ಎರಡು - ಮೂರು ತಿಂಗಳಿನಿAದ ಲಾರಿಗಳ ಸಂಚಾರ ಆರಂಭವಾಗಿದೆ. ಅಷ್ಟರಲ್ಲಿ ಮತ್ತೆ ಪೊಲೀಸರಿಂದ ತೊಂದರೆ ಎದುರಿಸುವಂತಾಗಿದೆ. ಹೊರಗಿನಿಂದ ಬರುವ ಲಾರಿಗಳಿಗೆ ಯಾವದೇ ಅಡ್ಡಿಯಿಲ್ಲ. ಜಿಲ್ಲೆಯ ಬಡ ಲಾರಿ ಮಾಲೀಕರು ಹಾಗೂ ಚಾಲಕರಿಗೆ ಮಾತ್ರ ತೊಂದರೆ ಕೊಡಲಾಗುತ್ತಿವೆ.
ವೀರಾಜಪೇಟೆ ವೃತ್ತ ನಿರೀಕ್ಷಕರು ವಿನಾಕಾರಣ ತೊಂದರೆ ಕೊಡುತ್ತಾ ಕೇಸ್‌ಗಳನ್ನು ಹಾಕುತ್ತಿದ್ದಾರೆ. ಮುಟ್ಟುಗೋಲು ಹಾಕಿಕೊಂಡ ವಾಹನಗಳು ಎಲ್ಲಿವೆ ಎಂಬ ಬಗ್ಗೆ ಮಾಹಿತಿ ಕೂಡು ನೀಡುವದಿಲ್ಲ. ಕೊಡಗಿನಲ್ಲಿ ಮಾತ್ರ ಈ ರೀತಿಯ ತೊಂದರೆ ನೀಡಲಾಗುತ್ತಿದೆ. ಇಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಮಡಿಕೇರಿಯಲ್ಲಿ ಈ ರೀತಿಯ ತೊಂದರೆಗಳಿಲ್ಲವೆAದು ಇದೇ ಸಂದರ್ಭ ಅಧ್ಯಕ್ಷ ಸಮದ್ ಹೇಳಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ಎಂ. ಶೇಖರ್, ಪ್ರಧಾನ ಕಾರ್ಯದರ್ಶಿ ಕೆ.ಎಂ. ಮೊಹಮ್ಮದ್, ಸಂಘಟನಾ ಕಾರ್ಯದರ್ಶಿ ಮುರುಗೇಶ್, ಪದಾಧಿಕಾರಿ ಮುರಳಿ ಇದ್ದರು.