* ವೀರಾಜಪೇಟೆ, ಏ. ೧೬: ವೀರಾಜಪೇಟೆಯ ಕ್ಷೇತ್ರ ಸಂಪನ್ಮೂಲ ಕಚೇರಿಯ ಸಭಾಂಗಣದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಹಕ್ಕುಗಳ ಘಟಕದ ವತಿಯಿಂದ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ವಿವಿಧ ಹಂತದ ಅಧಿಕಾರಿಗಳಿಗೆ ಮಕ್ಕಳ ಹಕ್ಕುಗಳ ಕುರಿತು ಅರಿವು ಕಾರ್ಯಾಗಾರ ನಡೆಯಿತು.

ಇತ್ತೀಚೆಗೆ ರಾಷ್ಟç ಹಾಗೂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧಿಕಾರಿಗಳು ಶಿಕ್ಷಣ ಇಲಾಖೆಗೆ ಭೇಟಿ ನೀಡಿದ ಬಳಿಕ ಅವರು ನಿರ್ದೇಶನಗಳ ಅನುಸಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಇ.ಸಿ.ಒ, ಬಿ.ಆರ್.ಪಿ, ಬಿ.ಐ.ಇ.ಆರ್.ಟಿ, ಸಿ.ಆರ್.ಪಿ. ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿ ಸುಮತಿ ಪೋಕ್ಸೋ ಕಾಯ್ದೆ, ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳ ಕುರಿತು ಮಾತನಾಡಿ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಶಿಕ್ಷಕರು ಶಾಲೆಯಲ್ಲಿ ಮಕ್ಕಳ ನಡವಳಿಕೆಯನ್ನು ಸೂಕ್ಷö್ಮವಾಗಿ ಗಮನಿಸಿ ಅವರಿಗೆ ನೆರವಿನ ಅಗತ್ಯವಿದ್ದಾಗ ನೆರವಾಗಬೇಕು.

ವೀರಾಜಪೇಟೆ ತಾಲೂಕಿನಲ್ಲಿ ಅಪ್ರಾಪ್ತರ ಒಪ್ಪಿತ ಲೈಂಗಿಕ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲಿ ಅತೀ ಹೆಚ್ಚು ಲೈಂಗಿಕ ದೌರ್ಜನ್ಯಗಳು ಪುರುಷರ ಮೇಲಾಗುತ್ತಿವೆ. ಆದರೆ ಇಂದು ಬೆಳಕಿಗೆ ಬರುವುದಿಲ್ಲ. ಮಹಿಳೆಯರಿಗೆ ಮಾತ್ರವೇ ಪೋಕ್ಸೋ ಕಾಯ್ದೆಯಲ್ಲಿ ರಕ್ಷಣೆ ಸಿಗುವುದಲ್ಲಾ ಪುರುಷರಿಗೂ ಸಿಗುತ್ತದೆ. ಆದ್ದರಿಂದ ಶಿಕ್ಷಕರ ಪಾತ್ರ ಮಕ್ಕಳ ರಕ್ಷಣೆ ಮಾಡುವಲ್ಲಿ, ಅವರ ಹಕ್ಕುಗಳನ್ನು ರಕ್ಷಣೆ ಮಾಡುವುದರಲ್ಲಿ ಅತೀ ಮಹತ್ವವಾದುದು ಎಂದರು.

ಕಾರ್ಮಿಕ ಇಲಾಖೆಯ ನಿರೀಕ್ಷಕ ಜಯಣ್ಣ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿ, ವೀರಾಜಪೇಟೆ ತಾಲೂಕಿನಲ್ಲಿ ತಾವೂ ಇದುವರೆಗೂ ವಶಕ್ಕೆ ಪಡೆದಿರುವ ಬಾಲಕಾರ್ಮಿಕ ಪ್ರಕರಣಗಳ ಬಗ್ಗೆ ಅದರ ಹಿಂದಿರುವ ಕಾನೂನಿನ ತೊಡಕುಗಳು, ತಾಂತ್ರಿಕ ತೊಂದರೆಗಳ ಬಗೆ ವಿವರಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಅಬ್ದುಲ್ ಲತೀಫ್ ಮಾತನಾಡಿ, ಹಾಡಿಗಳಲ್ಲಿ ಅತೀ ಹೆಚ್ಚು ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕಾರಿ ವಿಚಾರ. ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಕೇರಳ ಮಾದರಿಯಲ್ಲಿ ಹಾಡಿಗಳ ಸ್ಥಿತಿಗತಿ ಕಾಯುವ ಪರಿವರ್ತಕರನ್ನು ನೇಮಕ ಮಾಡುವಂತೆ ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಪ್ರಾಸ್ತಾವಿಕ ಮಾತನಾಡಿದರು. ಬಿ.ಆರ್.ಸಿ ವನಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ, ವೀರಾಜಪೇಟೆ ತಾಲೂಕಿನ ಮಂಚಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಕರುಗಳಾದ ಸೋಮಯ್ಯ ಮತ್ತು ಸ್ವಾತಿ ಬಿಸಿ ನೀರಿನ ಫಿಲ್ಟರ್ ಅನ್ನು ಕ್ಷೇತ್ರ ಸಂಪನ್ಮೂಲ ಕಚೇರಿಗೆ ಕೊಡುಗೆಯಾಗಿ ನೀಡಿದರು.

- ಉಷಾ ಪ್ರೀತಂ