ಸೋಮವಾರಪೇಟೆ, ಏ. ೧೬: ಪರಿಸರ ಸಮತೋಲನದಲ್ಲಿ ಪಕ್ಷಿಗಳ ಪಾತ್ರ ಅಪಾರವಾಗಿದ್ದು, ಪ್ರಪಂಚದ ಶೇ. ೭೦ರಷ್ಟು ಭೂ ಭಾಗದಲ್ಲಿ ಸಮೃದ್ಧ ವಾದ ಮತ್ತು ವೈವಿಧ್ಯಮಯವಾದ ಕಾಡುಗಳನ್ನು ಬೆಳೆಸಲು ಪಕ್ಷಿ ಸಂಕುಲಗಳಿAದ ಮಾತ್ರ ಸಾಧ್ಯವಾಗಿದೆ ಎಂದು ಪಕ್ಷಿ ತಜ್ಞ ಡಾ.ಎಸ್.ವಿ. ನರಸಿಂಹನ್ ಹೇಳಿದರು.

ಇಲ್ಲಿನ ‘ನಾವು ಪ್ರತಿಷ್ಠಾನ’ ಸಂಸ್ಥೆ ವತಿಯಿಂದ ಸ್ಥಳೀಯ ಪತ್ರಿಕಾಭವನ ದಲ್ಲಿ ಆಯೋಜಿಸಿದ್ದ ‘ಪಕ್ಷಿಗೊಂದು ಅಭಿಯಾನ-ಪರಿಸರ ಸಮತೋಲನ ದಲ್ಲಿ ಹಕ್ಕಿಗಳ ಮಹತ್ವ’ ಉಪನ್ಯಾಸ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅರಣ್ಯ ಸಂಪತ್ತನ್ನು ಉಳಿಸುವಲ್ಲಿ ಪಕ್ಷಿಗಳ ಪಾತ್ರ ಅಪಾರವಾದುದು. ಅಭಿವೃದ್ಧಿಯ ನೆಪದಲ್ಲಿ ಮಾನವನ ದುರಾಸೆಗೆ ಕಾಡುಗಳು ಕಣ್ಮರೆಯಾಗು ತ್ತಿವೆ. ಆದರೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಯಬೇಕಾದರೆ ಹಕ್ಕಿಗಳ ಜೊತೆಗೆ ಎಲ್ಲರೂ ಕೈಜೋಡಿಸ ಬೇಕು ಎಂದು ಸಲಹೆ ನೀಡಿದರು.

ವಿಶ್ವದಲ್ಲಿ ವೈಮಾನಿಕ ಹಾರಾಟ ಆರಂಭವಾಗಿ ೧೧೫ ವರ್ಷಗಳು ಕಳೆದಿವೆ. ಆದರೆ ಸುಮಾರು ೨೫ಕೋಟಿ ವರ್ಷಗಳ ಹಿಂದೆಯೇ ಪಕ್ಷಿಗಳು ಹಾರಾಟವನ್ನು ಆರಂಭಿಸಿದ್ದು, ಅದರ ಆಧಾರದ ಮೇಲೆಯೇ ಜಂಬೋ ವಿಮಾನ ಮತ್ತು ಯುದ್ಧವಿಮಾನ ಗಳನ್ನು ತಯಾರಿಸಲಾಗಿದೆ. ಇದರಿಂದಾಗಿ ವೈಜ್ಞಾನಿಕ ಮುನ್ನಡೆ ಯಲ್ಲೂ ಹಕ್ಕಿಗಳ ಸಹಕಾರವನ್ನು ಸ್ಮರಿಸಬೇಕು ಎಂದು ಹೇಳಿದರು.

ಅರಣ್ಯ ಸಂಪತ್ತನ್ನು ಉಳಿಸಲು ಇಲಾಖೆ ಹಲವಾರು ಕೋಟಿ ಹಣವನ್ನು ವ್ಯಯಿಸುತ್ತಿದೆ. ಆದರೆ ಪಕ್ಷಿ-ಪ್ರಾಣಿ ಸಂಕುಲಗಳು ಪುಕ್ಕಟೆಯಾಗಿ ಯಾವುದೇ ನಿರೀಕ್ಷೆಯಿಲ್ಲದೇ ಕಾಯಕ ಮಾಡುತ್ತಿವೆ. ಹೀಗಾಗಿ ಪಕ್ಷಿ-ಪ್ರಾಣಿ ಸಂಕುಲಗಳನ್ನು ಉಳಿಸುವ ಸಂಕಲ್ಪ ತೊಡಬೇಕು ಎಂದು ನರಸಿಂಹನ್ ಕರೆ ನೀಡಿದರು.

ಭತ್ತದ ಕೊಯ್ಲಿನ ಸಂದರ್ಭ ಶೇ. ೩೦ರಷ್ಟು ಬೆಳೆಯನ್ನು ಇಲಿ-ಹೆಗ್ಗಣಗಳು ತಿಂದು ನಾಶ ಮಾಡುವ ಮೂಲಕ ರೈತನ ಪಾಲಿಗೆ ಕಂಟಕ ವಾಗುತ್ತಿವೆ. ಆದರೆ ರೈತನಿಗೆ ಅರಿವಿಲ್ಲದೆ ಗೂಬೆಯಂತಹ ಸಣ್ಣ ಪಕ್ಷಿ ಮೂರು ತಿಂಗಳಿಗೆ ಸುಮಾರು ೧೫೦೦ರಷ್ಟು ಪ್ರಮಾಣದ ಇಲಿ, ಹೆಗ್ಗಣಗಳನ್ನು ತಿನ್ನುವ ಮೂಲಕ ಕೃಷಿಕರ ಪಾಲಿಗೆ ನೆರವಾಗುತ್ತಿವೆ ಎಂದರು.

ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಯ ವ್ಯಾಪ್ತಿಯ ಕಸಗಳನ್ನು ಊರಿನ ಹೊರಗಡೆ ವಿಲೇವಾರಿ ಮಾಡಲಾಗುತ್ತದೆ. ಆದರೆ ಅದರಲ್ಲಿರುವ ಕೊಳಕನ್ನು ರಣಹದ್ದು ಗಳು ಶುದ್ಧೀಕರಿಸುವ ಮೂಲಕ ಪರಿಸರ ನೈರ್ಮಲ್ಯವನ್ನು ಕಾಪಾಡಲು ನೆರವಾಗುತ್ತವೆ. ಹೀಗೆ ಅರಣ್ಯ ಸಂಪತ್ತು ಹೆಚ್ಚಿಸುವುದು, ಪರಿಸರ ಸಂರಕ್ಷಣೆ ಸೇರಿದಂತೆ ಹಲವಾರು ಕಾಯಕವನ್ನು ಮಾಡುವ ಪಕ್ಷಿ ಸಂಕುಲವನ್ನು ಎಲ್ಲರೂ ಪ್ರೀತಿಸಿ, ಪೋಷಿಸಲು ಮುಂದಾಗ ಬೇಕು ಎಂದರು. ಕಾರ್ಯಕ್ರಮದಲ್ಲಿ ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ‘ಹಕ್ಕಿಗೊಂದು ಗುಟುಕು’ ಅಭಿಯಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ತೀರ್ಪುಗಾರರಾಗಿ ಸಾಹಿತಿ ಕಾಜೂರು ಸತೀಶ್, ವೇದಿಕೆಯಲ್ಲಿ ವದ್ದಳ್ಳಿ ಮುತ್ತಪ್ಪ, ಹಿರಿಯ ಪತ್ರಕರ್ತ ನಾಗರಾಜ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರತಿಷ್ಠಾನದ ಸುಮನ್ ಗೌತಮ್, ಅಮೃತ್ ತಾಕೇರಿ ನಿರ್ವಹಿಸಿದರು. ದೀಪಿಕಾ ಸುದರ್ಶನ್ ಪ್ರಾರ್ಥಿಸಿದರು.

ಕಾರ್ಯಕ್ರಮಕ್ಕೆ ಪಾರಿವಾಳ ಗಳನ್ನು ಹಾರಿಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭ ಉದ್ಯಮಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕೊತ್ನಳ್ಳಿ, ಗಿರೀಶ್ ಮಲ್ಲಪ್ಪ, ಡಾ. ಸುಪರ್ಣ ಕೃಷ್ಣಾನಂದ್ ಮತ್ತಿತರರು ಉಪಸ್ಥಿತರಿದ್ದರು. ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.