ಕುಶಾಲನಗರ, ಏ. ೧೬: ಕುಶಾಲನಗರ ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಸ್ಥಾನ ಹಾಗೂ ನಿರ್ದೇಶಕ ಸ್ಥಾನಕ್ಕೆ ವಿ.ಎನ್. ವಸಂತಕುಮಾರ್ ರಾಜೀನಾಮೆ ನೀಡಿದ್ದಾರೆ.
ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಸಂತಕುಮಾರ್, ದೇವಸ್ಥಾನ ಸಮಿತಿಯ ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಕೆಲವು ಸದಸ್ಯರು ಕಳೆದ ಸಾಲಿನ ಮಹಾಸಭೆಯ ತೀರ್ಮಾನಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅಧ್ಯಕ್ಷರನ್ನು ಹೊಣೆಗಾರರನ್ನಾಗಿ ಮಾಡಿ ಸಭೆಯಲ್ಲಿ ಗಲಾಟೆ, ಗೊಂದಲ ಸೃಷ್ಟಿಸಿದ್ದಾರೆ.
ಆ ಸಂದರ್ಭ ಮಹಾಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ನಿರ್ದೇಶಕರು ಮೌನವಹಿಸಿರುವುದು ಸಭೆಯಲ್ಲಿ ಗೊಂದಲ ಸೃಷ್ಟಿಯಾಗಲು ಕಾರಣವಾಯಿತು. ಇದರಿಂದ ಕಳೆದ ಮಹಾಸಭೆಯ ನಿರ್ಣಯಗಳಿಗೆ ಬೆಲೆ ಇಲ್ಲದಂತಾಗಿ, ಆಡಳಿತ ಮಂಡಳಿಯ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಬಹಿರಂಗ ಗೊಂಡು, ತಮಗೆ ನೋವುಂಟು ಮಾಡಿದೆ ಎಂದು ಹೇಳಿದರು. ಅನೇಕ ಹಿರಿಯ ಸದಸ್ಯರಿಗೆ ಕೂಡ ಇದರಿಂದಾಗಿ ಬೇಸರ ಉಂಟಾಗಿದೆ ಎಂದ ವಸಂತಕುಮಾರ್, ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಹೀಗೆ ಮುಂದುವರಿದರೆ ದೇವಸ್ಥಾನದ ಅಭಿವೃದ್ಧಿಗೆ ಮಾರಕವಾಗುವ ಸಾಧ್ಯತೆ ಇರುವುದಾಗಿ ಹೇಳಿದ ವಸಂತಕುಮಾರ್, ತಾನು ಕಳೆದ ೪ ದಶಕಗಳ ಅವಧಿಯಲ್ಲಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವ ಬಗ್ಗೆ ತಿಳಿಸಿದರು. ಈ ಸನ್ನಿವೇಶದಲ್ಲಿ ತಾನು ಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಇಚ್ಛೆಪಡುವುದಿಲ್ಲ. ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನಕ್ಕೆ ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿರುವುದಾಗಿ ಹೇಳಿದರು. ಗೋಷ್ಠಿಯಲ್ಲಿ ವಿ. ಚೇತನ್, ಆದರ್ಶ್ ಇದ್ದರು.