ಗೋಣಿಕೊಪ್ಪಲು, ಏ.೧೧: ವ್ಯಾಘ್ರನ ದಾಳಿಗೆ ಒಂದು ಹಾಲು ಕರೆಯುವ ಹಸು ಹಾಗೂ ಒಂದು ಗಬ್ಬದ ಹಸು ಸೇರಿದಂತೆ ಎರಡು ಹಸುಗಳು ಬಲಿಯಾಗಿದೆ. ಮಧ್ಯರಾತ್ರಿ ೧೨ ಗಂಟೆಯ ಸಮಯದಲ್ಲಿ ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳೂರು ಗ್ರಾಮದ ರೈತರಾದ ಕಾಂಡೇರ ಲತಾ ಗಣೇಶ್ ಅವರಿಗೆ ಸೇರಿದ ಕೊಟ್ಟಿಗೆಗೆ ದಾಳಿ ಮಾಡಿದ ಹುಲಿ ಎರಡು ಜೆರ್ಸಿ ತಳಿಯ ಹಸುವನ್ನು ಕೊಂದುಹಾಕಿದೆ.

ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಹುಲಿಯು ದಾಳಿ ನಡೆಸಿದ ವೇಳೆ ಸಮೀಪದಲ್ಲಿದ್ದ ಕಾರ್ಮಿಕರ ಸದ್ದಿಗೆ ಹಸುವನ್ನು ಅಲ್ಲೇ ಬಿಟ್ಟು ಮರೆಯಾಗಿದೆ. ಹುಲಿಯು ದಿನಕ್ಕೊಂದರAತೆ ದಾಳಿ ನಡೆಸಿ ಜಾನುವಾರುಗಳನ್ನು ಕೊಂದು ಹಾಕುತ್ತಿದೆ.

ಇದೀಗ ಯಾವ ಭಾಗದಿಂದ ಹುಲಿಯು ಆಗಮಿಸಬಹುದೆಂದು ಊಹಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಈ ಭಾಗದ ರೈತರು ಸಿಲುಕಿಕೊಂಡಿದ್ದಾರೆ. ಕಳೆದ ಒಂದು ವಾರದಿಂದ ಬಾಳೆಲೆ ಹೋಬಳಿಯ ಸುತ್ತಮುತ್ತಲಿನ ಪ್ರದೇಶಗಳ ರೈತರ ಜಾನುವಾರುಗಳ ಮೇಲೆ ಹುಲಿಯು ದಾಳಿ ನಡೆಸುತ್ತಿದೆ.

ಸುದ್ದಿ ತಿಳಿದ ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿ ದಿವಾಕರ್ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರ ಆಕ್ರೋಶದ ಮೇರೆಗೆ ಹುಲಿ ಸೆರೆಗೆ ಬೋನನ್ನು ಅಳವಡಿಸುವ ಭರವಸೆ ನೀಡಿದರು.

ಅರಣ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ನಾಗರಿಕರು, ಸಂಘ ಸಂಸ್ಥೆಯ ಪದಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಹುಲಿ ಹಾವಳಿಯಿಂದ ಕೊಡಗಿನ ರೈತರನ್ನು ರಕ್ಷಿಸುವಂತೆ ಒತ್ತಾಯ ಮಾಡಿದರು. ಅಧಿಕಾರಿಗಳು ಹಸು ಕಳೆದುಕೊಂಡ ರೈತನಿಗೆ ತಾತ್ಕಾಲಿಕ ಪರಿಹಾರ ನೀಡುವ ಭರವಸೆ ನೀಡಿದರು. ಹಸುಗಳನ್ನು ಪ್ರೀತಿಯಿಂದ ಸಾಕುತ್ತಿದ್ದೆವು. ಉತ್ತಮ ಬೆಲೆಗೆ ಹಸುವನ್ನು ಕೊಡಿ ಎಂದು ಕೇಳಿಕೊಂಡು ಬಂದಿದ್ದರು. ಆದರೆ ಹಸುವನ್ನು ನಾವು ನೀಡಲಿಲ್ಲ. ಉತ್ತಮ ಗುಣಮಟ್ಟದ ಜೆರ್ಸಿ ಹಸುಗಳನ್ನು ತಂದು ಸಾಕುತ್ತಿದ್ದೆವು. ಪ್ರತಿದಿನ ೧೦ ಲೀಟರ್ ಹಾಲು ನೀಡುತ್ತಿತ್ತು. ಇದೀಗ ಕೊಟ್ಟಿಗೆ ಖಾಲಿಯಾಗಿವೆ. ದುಃಖ ತಡೆಯಲು ಸಾಧ್ಯವಾಗುತ್ತಿಲ್ಲ. ಸರಕಾರದ ಪರಿಹಾರ ಏನೇನೂ ಸಾಲದು, ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ಹಸುವಿನ ವಾರಸುದಾರರಾದ ಕಾಂಡೇರ ಲತಾ ಗಣೇಶ್ ಒತ್ತಾಯಿಸಿದ್ದಾರೆ.

(ಮೊದಲ ಪುಟದಿಂದ)

ಶಾಸಕರ ಭೇಟಿ- ಅರಣ್ಯ ಸಚಿವರಿಗೆ ಮಾಹಿತಿ

ದ.ಕೊಡಗಿನಲ್ಲಿ ಕೆಲವು ದಿನಗಳಿಂದ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳದಿಂದ ದೂರವಾಣಿ ಮೂಲಕ ಡಿಎಫ್‌ಓ ಚಕ್ರಪಾಣಿ ಅವರನ್ನು ಸಂಪರ್ಕಿಸಿ ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ಅರಣ್ಯ ಸಚಿವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಇಲ್ಲಿನ ಹುಲಿ ಹಾವಳಿಯ ಬಗ್ಗೆ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಸಭೆ ಆಯೋಜನೆ ಮಾಡುವಂತೆ ಸಲಹೆ ನೀಡಿದರು. ಹತ್ತು ದಿನಗಳ ಒಳಗೆ ಸಭೆ ಆಯೋಜನೆ ಮಾಡುವ ಬಗ್ಗೆ ಭರವಸೆ ನೀಡಿದರು. ಈ ವೇಳೆ ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷರಾದ ಕಾಡ್ಯಮಾಡ ಗಿರೀಶ್ ಗಣಪತಿ, ಆರ್.ಎಂ.ಸಿ. ನಿರ್ದೇಶಕ ಅದೇಂಗಡ ವಿನುಚಂಗಪ್ಪ, ಶಾಸಕರ ಆಪ್ತ ಸಹಾಯಕರಾದ ಮಲ್ಲಂಡ ಮಧು ದೇವಯ್ಯ, ನರಸಿಂಹ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಪೊನ್ನಂಪೇಟೆ ಎಸ್.ಐ. ಕುಮಾರ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

-ಹೆಚ್.ಕೆ. ಜಗದೀಶ್