ಸೋಮವಾರಪೇಟೆ, ಏ. ೧೧: ಕಳೆದ ಒಂದು ವಾರದಿಂದ ಬೀಟಿಕಟ್ಟೆ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ ನಿರ್ಗತಿಕ ಮಹಿಳೆಯನ್ನು ಕರವೇ ಕಾರ್ಯಕರ್ತರು ಹಾಗೂ ಗೌಡಳ್ಳಿ ಗ್ರಾ.ಪಂ.ನ ಸಹಕಾರದಿಂದ ಮಡಿಕೇರಿಯ ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯಕ್ಕೆ ಸೇರಿಸಲಾಯಿತು.

ಸುಮಾರು ೩೫ ವರ್ಷ ಪ್ರಾಯದ ಮಹಿಳೆಯೋರ್ವರು ಕೈಯಲ್ಲಿ ಚೀಲ ಹಿಡಿದುಕೊಂಡು ಕಳೆದೊಂದು ವಾರದಿಂದ ಬೀಟಿಕಟ್ಟೆ ಗ್ರಾಮದಲ್ಲಿ ಸುತ್ತಾಡುತ್ತಿದ್ದರು. ಇದನ್ನು ಗಮನಿಸಿದ ಶಿಲ್ಪಿ ಮಂಜುನಾಥ್ ಅವರು ಕ.ರ.ವೇ. ಶಿವರಾಮೇಗೌಡ ಬಣದ ಅಧ್ಯಕ್ಷ ಫ್ರಾನ್ಸಿಸ್ ಅವರಿಗೆ ತಿಳಿಸಿದ ಮೇರೆ, ಸಖಿ ಒನ್ ಸ್ಟಾಪ್ ಸೆಂಟರ್‌ನೊAದಿಗೆ ಮಾತುಕತೆ ನಡೆಸಿ, ಗೌಡಳ್ಳಿ ಗ್ರಾ.ಪಂ. ಸದಸ್ಯ ವೆಂಕಟೇಶ್ ಸಹಕಾರದೊಂದಿಗೆ ಗ್ರಾ.ಪಂ. ವತಿಯಿಂದ ವಾಹನ ವ್ಯವಸ್ಥೆ ಕಲ್ಪಿಸಲಾಯಿತು.

ನಂತರ ಕರವೇ ಕಾರ್ಯಕರ್ತರು ಮಹಿಳೆಯನ್ನು ಮಡಿಕೇರಿಯ ಒನ್ ಸ್ಟಾಪ್ ಸೆಂಟರ್‌ಗೆ ಕರೆದೊಯ್ದು ಚಿಕಿತ್ಸೆ ನೀಡುವಂತೆ ಮನವಿ ಸಲ್ಲಿಸಿದರಲ್ಲದೇ, ನಿರ್ಗತಿಕ ಮಹಿಳೆಯನ್ನು ಮಡಿಕೇರಿಯ ಶಕ್ತಿ ಹಿರಿಯ ನಾಗರಿಕರ ವಸತಿ ನಿಲಯಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದರು.