ಶನಿವಾರಸಂತೆ, ಏ. ೧೦: ದಲಿತ ಸಮುದಾಯ, ಮಹಿಳೆಯರು ಹಾಗೂ ಡಾ. ಅಂಬೇಡ್ಕರ್ ಅವರ ಬಗ್ಗೆ ಜನಾಂಗೀಯವಾಗಿ ಯುವಕನೊಬ್ಬ ಇತರರ ಜೊತೆ ಸೇರಿ ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದನ್ನು ವಿರೋಧಿಸಿ ವಿವಿಧ ದಲಿತ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಶನಿವಾರಸಂತೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕ್ರಮಕ್ಕೆ ಒತ್ತಾಯಿಸಿ ದ.ಸಂ.ಸ. ಜಿಲ್ಲಾ ಸಂಚಾಲಕ ಡಿ.ಜೆ. ಈರಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಂಬರಳ್ಳಿ ಗ್ರಾಮದ ಅರುಣ ನಿಂದನೆ ಮಾಡಿದ ಯುವಕ. ಈತ ತಾ. ೯ರ ರಾತ್ರಿ ಯಶಸ್ವಿ ಕಲ್ಯಾಣ ಮಂಟಪದ ಮುಂದೆ ನಿಂತು ಸಾರ್ವಜನಿಕವಾಗಿ ಸೋಮೇಶ್ ಎಂಬಾತನಿಗೆ ಮೊಬೈಲ್ ಕರೆ ಮಾಡಿ ಜಾತಿ ನಿಂದನೆ ಮಾಡಿ ಅಂಬೇಡ್ಕರ್ ಮತ್ತು ಜನಾಂಗದವರನ್ನು ಅವಾಚ್ಯ, ಅಶ್ಲೀಲ ಶಬ್ಧಗಳಿಂದ ನಿಂದಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಯುವಕ ಅರುಣ ಹಾಗೂ ಜೊತೆಯವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಬೇಕು ಎಂದು ವಿವಿಧ ದಲಿತ ಸಂಘಟನೆಯ ಮುಖಂಡರಾದ ಜೆ.ಎಲ್. ಜನಾರ್ಧನ್, ಕೆ.ಪಿ. ಜಯಕುಮಾರ್, ಶಿವಲಿಂಗ, ಈರಪ್ಪ, ಕಾಂತರಾಜ್, ಸುರೇಶ್, ಲೋಕೇಶ್, ಸಂದೀಪ್, ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಎಚ್.ಈ. ದೇವರಾಜ್ ಪ್ರಕರಣ ದಾಖಲಿಸಿದ್ದಾರೆ.