ದೇವರ ಪತ್ತಾಯಕ್ಕೆ ಅಕ್ಕಿ ಹಾಕುವುದು :

ಕನ್ಯಾಮಾಸದ ಹತ್ತನೇ ದಿನದಂದು ಅಂದರೆ ತುಲಾಸಂಕ್ರಮಣಕ್ಕೆ ಇಪ್ಪತ್ತು ದಿನಗಳ ಮೊದಲು ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದ ಉಗ್ರಾಣದಲ್ಲಿರುವ ‘ಪತ್ತಾಯ’ಕ್ಕೆ ಪ್ರಥಮವಾಗಿ ಅಕ್ಕಿಯನ್ನು ದೇವಾಲಯದ ಗೌರವ ‘ತಕ್ಕರು’ ಎಂದರೆ ಜನಪ್ರತಿನಿಧಿ ಮುಖ್ಯಸ್ಥರು ಸುರಿಯುತ್ತಾರೆ. ನಂತರ ಇತರರು ಅಕ್ಕಿಯನ್ನು ಪತ್ತಾಯಕ್ಕೆ ಸುರಿಯುತ್ತಾರೆ. ಜಾತ್ರೆಗೆ ಬರುವ ಯಾತ್ರಾರ್ಥಿಗಳಿಗೆ ಊಟಕ್ಕೆ ಅನುಕೂಲವಾಗಲೆಂದು ಈ ರೀತಿ ಶೇಖರಣೆ ಮಾಡಲಾಗುತ್ತದೆ.

ಆಜ್ಞಾ ಗೊನೆ ಕಡಿಯುವುದು : ಕಾವೇರಿ ಜಾತ್ರೆಯ ಮುನ್ನ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ನೆರೆದು ಜಾತ್ರೆಯ ಕಾರ್ಯಕ್ರಮಗಳೆಲ್ಲ ಚ್ಯುತಿ ಇಲ್ಲದೆ ಸಾಂಗವಾಗಿ ನೆರವೇರಲಿ ಎಂದು ಪ್ರಾರ್ಥಿಸಿ, ದೇವಾಲಯದ ‘ತಕ್ಕ’ (ಮುಖ್ಯಸ್ಥರು) ಸಮೀಪ ಇರುವ ಬಾಳೆ ತೋಟದಿಂದ ಎರಡು ಬಾಳೆಗೊನೆಗಳನ್ನು ಕಡಿದುಕೊಂಡು ಬರುವುದನ್ನು ಆಜ್ಞಾ ಗೊನೆ ಕಡಿಯುವುದೆಂದು ಕರೆಯುತ್ತಾರೆ.

ಶ್ರೀ ದುರ್ಗಾದೇವಿ ಮತ್ತು ನಂದಾದೀಪ ಆರಾಧನೆ: ಕಾವೇರಿ ಜಾತ್ರೆಯ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲು ಶ್ರೀ ದುರ್ಗಾದೇವಿಯನ್ನು ಭಗಂಡೇಶ್ವರ ದೇವಾಲಯದಲ್ಲಿ ಮೂಲ ಭಂಡಾರ ಇಡುವ ಉಗ್ರಾಣದ ಕೊಠಡಿಯಲ್ಲಿ ಶಾಸ್ತೊçÃಕ್ತವಾಗಿ ನಂದಾದೀಪವಿಟ್ಟು ಪಂಚಜ್ಯೋತಿಯನ್ನು ಬೆಳಗಿಸಿ ಪೂಜೆ ಮಾಡುತ್ತಾರೆ. ಆ ದಿನ ಹಚ್ಚಿದ ದೀಪವು ಒಂದು ತಿಂಗಳವರೆಗೆ ಸದಾ ನಂದದ ಜ್ಯೋತಿಯಾಗಿ ಉರಿಯುವಂತೆ ನೋಡಿಕೊಳ್ಳಲಾಗುತ್ತದೆ. ಜಾತ್ರೆಯ ಕಾರ್ಯಕ್ರಮಗಳು ಹಾಗೂ ಜಾತ್ರೆಗಾಗಿ ಬರುವ ಭಕ್ತಾದಿಗಳ ರಕ್ಷಣೆಗಾಗಿ ಪ್ರಾರ್ಥಿಸಿ ಜಾತ್ರೆ ತಿಂಗಳಿಡೀ ಬೆಳಗಿಸುವ ಈ ನಂದಾದೀಪಕ್ಕೆ ‘ಭದ್ರ ನಂದಾದೀಪ’ ಎಂದು ಕರೆಯುತ್ತಾರೆ.

ಅಕ್ಷಯ ಪಾತ್ರೆ ಇಡುವುದು : ಕಾವೇರಿ ಜಾತ್ರೆಯ ಸಂದರ್ಭದಲ್ಲಿ ಕ್ಷೇತ್ರಕ್ಕೆ ಬರುವ ಸಹಸ್ರಾರು ಮಂದಿ ಯಾತ್ರಿಕರಿಗೆ ಅಕ್ಕಿಯ ಧರ್ಮಪಡಿ ನೀಡಲು ಅಕ್ಕಿಯ ಪಾತ್ರೆಯನ್ನು ಬಳಸುತ್ತಾರೆ. ಕನ್ಯಾ ಮಾಸದ ೨೮ರಂದು ಬೆಳಗ್ಗೆ ಶ್ರೀ ದುರ್ಗಾದೇವಿಯ ಆರಾಧನೆ ಆದನಂತರ ಸುಮುಹೂರ್ತದಲ್ಲಿ ಅಕ್ಷಯ ಪಾತ್ರೆಯನ್ನು ದೇವಾಲಯದ ಉಗ್ರಾಣದಲ್ಲಿಟ್ಟು ವಿಧಿಯುಕ್ತವಾಗಿ ದೇವರ ಪತ್ತಾಯದಿಂದ ಅಕ್ಕಿಯನ್ನು ಸುರಿಯುತ್ತಾರೆ. ನಂತರ ಅಲ್ಲಿ ನೆರೆದವರಿಗೆಲ್ಲಾ ‘ಅಕ್ಷಯ ಪಾತ್ರೆ’ಯಿಂದ ಅಕ್ಕಿಯನ್ನು ತೆಗೆದು ಪ್ರಸಾದವಾಗಿ ಹಂಚುತ್ತಾರೆ. ಜಾತ್ರೆಗೆ ಎಷ್ಟು ಜನ ಬಂದರೂ ಅಕ್ಕಿಯನ್ನು ಉಚಿತವಾಗಿ ಹಂಚುವುದರಿAದ ಈ ಪಾತ್ರೆಗೆ ‘ಅಕ್ಷಯ ಪಾತ್ರೆ’ ಎಂಬ ಹೆಸರು ಬಂದಿದೆ.

ದೇವರ ಭಂಡಾರದ ಡಬ್ಬಿ ಇಡುವುದು : ಅಕ್ಷಯ ಪಾತ್ರೆ ದಿನದಂದು ಭಂಡಾರ ಡಬ್ಬಿಗಳನ್ನು ಉಗ್ರಾಣದಿಂದ ಹೊರತೆಗೆದು ಮೊಹರು ಮಾಡಿ ವಾದ್ಯಘೋಷಣೆಗಳೊಂದಿಗೆ ದೇವಾಲಯದ ವಿವಿಧ ಭಾಗದಲ್ಲಿ ಇಡುತ್ತಾರೆ.

ಶ್ರೀ ಮಹಾಗಣಪತಿಗೆ ಅಪ್ಪಕಜ್ಜಾಯ ಸೇವೆ : ಜಾತ್ರೆಗೆ ಸಂಬAಧಿಸಿದ ಸಿದ್ಧತಾ ಕಾರ್ಯಗಳು ಮುಗಿದ ನಂತರ ಜಾತ್ರೆಯು ಸುಗಮವಾಗಿ ನಡೆಯಲು ಸಕಲ ವಿಘ್ನನಿವಾರಕ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಅಪ್ಪ ಕಜ್ಜಾಯಗಳನ್ನು (ಅಕ್ಕಿಯಲ್ಲಿ ತಯಾರಿಸುವ ಖಾದ್ಯ) ಸಮರ್ಪಿಸುತ್ತಾರೆ. ಪೂಜೆ ಸಲ್ಲಿಸಿದ ನಂತರ ಅಪ್ಪಕಜ್ಜಾಯವನ್ನು ನೆರೆದಿರುವ ಭಕ್ತರಿಗೆ ಹಂಚುತ್ತಾರೆ. ಶ್ರೀ ಕಾವೇರಿ ಸಂಕ್ರಮಣದ ದಿನ ಭಾಗಮಂಡಲದ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ಸಂಕ್ರಮಣದ ಮುಹೂರ್ತಕ್ಕೆ ಮೊದಲು ಭಾಗಮಂಡಲದಲ್ಲಿ ಶ್ರಾದ್ಧ, ತರ್ಪಣ ಕ್ರಿಯೆಗಳು ನಡೆಯುತ್ತಿರುತ್ತವೆ. ಸಂಕ್ರಮಣದ ಮುಹೂರ್ತದ ವೇಳೆಗೆ ಯಾತ್ರಿಕರು ತಲಕಾವೇರಿಯ ತೀರ್ಥ ಸ್ನಾನಕ್ಕೆ ತೆರಳುತ್ತಾರೆ.

ಶ್ರೀ ಪೊಲಿಂಕಾನ ಉತ್ಸವ : ಆಟಿ (ಆಷಾಢ) ತಿಂಗಳ ಅಮಾವಾಸ್ಯೆಯ ದಿನದಂದು ಕಾವೇರಮ್ಮನನ್ನು ನೆನೆದು ಭಗಂಡೇಶ್ವರ ದೇವಾಲಯದಲ್ಲಿ ಪೊಲಿಂಕಾನ ಉತ್ಸವ (ಮಳೆಗಾಲದಲ್ಲಿ) ಮಾಡುತ್ತಾರೆ. ಬಾಳೆ ಕಂದುಗಳಿAದ ವಿಶಿಷ್ಟವಾದ ರೀತಿಯಲ್ಲಿ ಅಲಂಕರಿಸಿ ಮಂಗಳಜ್ಯೋತಿಯನ್ನು ಬೆಳಗಿಸಿ, ಮಂಗಳದ್ರವ್ಯ, ತಾಳಿ, ಕುಂಕುಮ, ಕರಿಮಣಿ, ಬಿಚ್ಚೋಲೆಯನ್ನು ಇಟ್ಟು ಪೂಜಿಸುತ್ತಾರೆ. ಮಳೆಯಿಂದಾಗಿ ಉಂಟಾಗುವ ಪ್ರವಾಹಗಳಿಂದ ತೊಂದರೆ ಆಗದಿರಲಿ ಎಂದು ಕಾವೇರಿ ಮಾತೆಯನ್ನು ಶ್ರೀ ಪೊಲಿಂಕಾನ ಪೂಜೆ, ಪ್ರಾರ್ಥನೆಯೊಡನೆ ಅರ್ಚಕರು ಕಾವೇರಿಗೆ ಅರ್ಪಿಸುತ್ತಾರೆ. ನೀರಿನ ಪ್ರವಾಹದಲ್ಲಿ ಪೊಲಿಂಕಾನ ಮಂಟಪವು ದಿವ್ಯಜ್ಯೋತಿ ಸಹಿತವಾಗಿ ತೇಲಿಕೊಂಡು ಮುಂದೆ ಸಾಗುತ್ತದೆ. (ಕ್ಷೇತ್ರಕಾರ್ಯದಿಂದ ತಿಳಿದ ಮಾಹಿತಿ)

ಪದಿನೆಟ್ಟಾಂ ಪೆರಕು-ಹದಿನೆಂಟರ ಹಬ್ಬ : ಆಟಿ ತಿಂಗಳ (ಜುಲೈಯಿಂದ-ಆಗಸ್ಟ್) ಹದಿನೆಂಟರAದು ಈ ಹಬ್ಬವು ನಡೆಯುವುದರಿಂದ ಇದನ್ನು ಹದಿನೆಂಟರ ಹಬ್ಬ ಎಂದೂ ತಮಿಳಿನಲ್ಲಿ ‘ಪದಿನೆಟ್ಟಾಂ ಪೆರುಕು’ ಎಂದೂ ಕರೆಯುವರು. ತಮಿಳುನಾಡಿನಲ್ಲಿ ಕಾವೇರಿ ಜಾತ್ರೆಯ ದಿನ ಕಾವೇರಿ ನದಿಯು ಹರಿದಲ್ಲೆಲ್ಲಾ ಭಕ್ತರು ತೀರ್ಥಸ್ನಾನ, ಅರ್ಚನೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ತಲಕಾವೇರಿಯಿಂದ ಪೂಂಪುಹಾರಿನವರೆಗೆ ಭಕ್ತಾದಿಗಳು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ.

ತಮಿಳುನಾಡಿನ ಸಿರಿದೇವಿ : ತಮಿಳುನಾಡಿನ ಜನರು ಕಾವೇರಿ ಮಾತೆಯನ್ನು ಸಿರಿದೇವಿ ಎನ್ನುತ್ತಾರೆ. ಧಾನ್ಯದ ಸಿರಿಸಂಪತ್ತಿಗೆ ಜಲವನ್ನು ನೀಡಿರುವ ಕಾವೇರಿ ಯನ್ನು ಇವರು ಹೊನ್ನಿನ ದೇವಿ, ಅನ್ನಪೂರ್ಣೆ ಎಂದೂ ಪೂಜಿಸಿ ಈ ಹಬ್ಬವನ್ನು ಆಚರಿಸುತ್ತಾರೆ. ಕಾವೇರಿ ನದಿ ತೀರದಲ್ಲಿ ಊರಿನವರೆಲ್ಲರೂ ತೀರ್ಥಸ್ನಾನ ಮಾಡಿ, ಕಾವೇರಿಯ ಪ್ರತಿಮೆ ಮಾಡಿ, ಕುಂಕುಮ ಅರಿಸಿನ, ಧೂಪ, ದೀಪಗಳನ್ನಿಟ್ಟು ಪೂಜೆ ಮಾಡಿ, ನದಿಗೆ ಕರಿಮಣಿ, ಫಲ-ಪುಷ್ಪಗಳನ್ನು ಅರ್ಪಿಸುತ್ತಾರೆ. ಆ ದಿನ ‘ಕಪ್ಪರಸಿ’ ಎಂಬ ವಿಶೇಷ ಖಾದ್ಯವನ್ನು ನದಿಗೆ ಅರ್ಪಿಸುತ್ತಾರೆ. (ಕ್ಷೇತ್ರ ಕಾರ್ಯದಿಂದ ದೊರೆತ ಮಾಹಿತಿ) ಆಟಿ ಹದಿನೆಂಟರ ಹಬ್ಬದಂದು ನವ ದಂಪತಿಗಳು ಅರಿಸಿನ ವರ್ಣದ ದಾರವನ್ನು ಧರಿಸಿ ಅದನ್ನು ಪರಸ್ಪರ ಗಂಟಿಕ್ಕಿ ಆ ದಿನ ಕಾವೇರಿ ಪೂಜೆ ಮುಗಿಯುವವರೆಗೆ ಜೋಡಿಸಿಕೊಂಡಿರುವ ಧಾರ್ಮಿಕ ಸಂಪ್ರದಾಯ ವಿಶಿಷ್ಟವಾಗಿದೆ. ಹಾಗೆಯೇ ತಮ್ಮ ಮದುವೆಯ ಪುಷ್ಪಾಹಾರಗಳನ್ನು ಕಾವೇರಿ ನದಿಗೆ ಅರ್ಪಿಸಿದರೆ ನದಿಯ ಪ್ರವಾಹದಂತೆ ತಮ್ಮ ದಾಂಪತ್ಯದಲ್ಲೂ ಪ್ರೀತಿ, ವಿಶ್ವಾಸ, ಸಂಪತ್ತಿನ ಪ್ರವಾಹ ಹರಿಯುತ್ತದೆ ಎಂದು ಭಾವಿಸಿದ್ದಾರೆ.

ಭಾಗಮಂಡಲ ಶ್ರೀ ಭಗಂಡೇಶ್ವರ ವಾರ್ಷಿಕ ಉತ್ಸವ : ಈ ಉತ್ಸವವನ್ನು ಶ್ರೀಭೂತ ಬಲಿ ಉತ್ಸವವೆಂದು ದೇವರ ಬಲಿಹೊರಗಾಗುವುದೆಂದೂ ಕರೆಯುತ್ತಾರೆ. ಅಕ್ಟೋಬರ್-ನವೆಂಬರ್ ತಿಂಗಳಿನ ವೃಶ್ಚಿಕ ಮಾಸದಲ್ಲಿ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ತ್ರಿಮೂರ್ತಿಗಳ ಮಂದಿರಗಳಲ್ಲಿ ಬ್ರಹ್ಮಕಲಶ ತೀರ್ಥಪ್ರೋಕ್ಷಣೆಗಳು ನಡೆಯುತ್ತವೆ. ಈ ಉತ್ಸವವು ಮೂರು ದಿನ ನಡೆಯುತ್ತದೆ. ಪ್ರಥಮ ದಿನ ಶ್ರೀ ಭಗಂಡೇಶ್ವರ ಸ್ವಾಮಿ, ಎರಡನೇ ದಿನ ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಮೂರನೆಯ ದಿನ ಶ್ರೀ ಮಹಾವಿಷ್ಣು ಸ್ವಾಮಿ ಉತ್ಸವ ನಡೆಯುತ್ತದೆ. ಈ ಉತ್ಸವದ ಸಂದರ್ಭದಲ್ಲಿ ಶ್ರೀ ಕಾವೇರಿ ನದಿಯ ದಂಡೆಯಲ್ಲಿ ಅಗಸ್ತೆö್ಯÃಶ್ವರ ಕಟ್ಟೆಯಲ್ಲಿ ದೀಪಾರಾಧನೆ ಸೇವೆಗೆ ದೇವಾಲಯದಿಂದ ವಿಗ್ರಹವನ್ನು ಹೊತ್ತು ತೆರಳಿ ದೀಪಾರಾಧನೆಯ ನಂತರ ದೇವಸ್ಥಾನಕ್ಕೆ ವಾಪಾಸಾಗುತ್ತಾರೆ. ಇದರ ಜೊತೆಗೆ ಶ್ರೀ ಸುಬ್ರಹ್ಮಣ್ಯ ಷಷ್ಠಿ ಉತ್ಸವ, ಶ್ರೀ ಶಿವರಾತ್ರಿ ಉತ್ಸವ, ಶ್ರೀ ರಾಮನವಮಿ ಉತ್ಸವವೂ ವಿಶೇಷವಾಗಿ ನಡೆಯುತ್ತದೆ. (ಕ್ಷೇತ್ರ ಕಾರ್ಯದಿಂದ ತಿಳಿದ ಮಾಹಿತಿ)

ಗುಹ್ಯ ಜಾತ್ರೆ : ಪ್ರತಿವರ್ಷ ತುಲಾ ಮಾಸದಲ್ಲಿ ಅಂದರೆ ನವೆಂಬರ್ ತಿಂಗಳಲ್ಲಿ ದೀಪಾವಳಿ ಅಮಾವಾಸ್ಯೆಯ ಹಿಂದಿನ ದಿವಸದಂದು ಈ ಜಾತ್ರೆ ನಡೆಯುತ್ತದೆ. ಶ್ರೀ ಕಾವೇರಿಯು ಹರಿದು ಕೊಡಗಿನ ಸಿದ್ದಾಪುರದ ಬಳಿ ಇರುವ ಕಾವೇರಿ ದಡದಲ್ಲಿ ಎತ್ತರದ ನೆಲೆಯಲ್ಲಿರುವ ಅಗಸ್ತೆö್ಯÃಶ್ವರ ಸ್ವಾಮಿಯ ಸನ್ನಿಧಿಯ ‘ಗುಹ್ಯ’ ಎಂಬಲ್ಲಿ ಈ ಜಾತ್ರೆ ನಡೆಯುತ್ತದೆ. ಕಾವೇರಿ ನದಿ ತಲಕಾವೇರಿ, ಭಾಗಮಂಡಲ, ಶ್ರೀರಂಗಪಟ್ಟಣ, ತಲಕಾಡು, ಭವಾನಿ, ಶ್ರೀರಂಗA, ತಂಜಾವೂರು, ಕುಂಭಕೋಣA, ಸ್ವಾಮಿಮಲೈ, ಗೋವಿಂದಪುರA, ಮಾಯೂರಮ್, ಕಾವೇರಿ ಪೂಂಪುಹಾರ್ ಮುಂತಾದ ಸ್ಥಳದ ಮೂಲಕ ಹರಿಯುತ್ತಿದ್ದಂತೆ ಭಕ್ತಾದಿಗಳು ಅರಿಶಿನ-ಕುಂಕುಮ ಪುಷ್ಪಾದಿಗಳನ್ನು ಹಾಕಿ ಪೂಜಿಸುತ್ತಾರೆ. ಎಷ್ಟೋ ಜನರು ಅವಳನ್ನು ನೆನೆದು, ಪುಣ್ಯಜಲವನ್ನು ಮಿಂದು ಪಾಪ ವಿಮುಕ್ತರಾಗಿದ್ದಾರೆ ಎನ್ನುವರು. ಜನ್ಮ ತಳೆದ ಪ್ರತಿಯೊಬ್ಬ ಮಾನವನು ಜೀವನರಂಗದಲ್ಲಿ ಹಲವು ಹಂತಗಳಲ್ಲಿ ಹೋರಾಡಿ, ಕೊನೆ ಹಂತದಲ್ಲಿ ಮುಕ್ತಿ ಪಡೆಯುತ್ತಾನೆ. ಇಂತಹ ಶ್ರದ್ಧೆ-ಭಕ್ತಿಗಳಿಂದ ಕೂಡಿದವರಿಗೆ ಸಾರ್ಥಕ ಫಲವನ್ನು ನೀಡುವ ಶ್ರೀ ಕಾವೇರಿಯ ಪವಿತ್ರ ಹೆಸರಿನ ಬಗ್ಗೆ ಇರುವ ಶ್ಲೋಕ ಈ ಕೆಳಗಿನಂತಿದೆ.

“ಕಾ ಕಾರೋಕುಲುಷಂ ಹಂತಿ ವೇ ಕಾರೋ ವಾಂಛಿüತ ಪ್ರದಃ

ರಿ ಕಾರೋ ಮೋಕ್ಷ ಮೋಕ್ಷಪ್ರದಃ ಕಾವೇರೀತ್ಯವಧಾರಯ”

‘ಕಾ’ ಎಂಬ ವರ್ಣವು ಕಲುಷಗಳ ನಿವಾರಣೆಯನ್ನುಂಟುಮಾಡುವುದು

‘ವೇ’ ವರ್ಣವು ಇಷ್ಟಾರ್ಥ ಸಿದ್ಧಿಗಳನ್ನು ದೊರಕಿಸುವುದು

‘ರಿ’ ವರ್ಣವು ಮೋಕ್ಷ ನೀಡುವುದು

“ಕಾವೇರಿ ನಾನಾ ತೀರ್ಥಾಧಿ ದೇವತೆ!

ಕಾಮಿತಾರ್ಥ ಫಲಪ್ರದಾತೆ!

ಅವಳು ಅಗಸ್ತö್ಯ ಮುನಿ ನಾಯಕಿ-ಶರಣಾಗತ ರಕ್ಷಕಿ!

ಕಾವೇರಿ ನಿತ್ಯ ಪ್ರವಾಹೆ!

ಅವಳ ಕಥೆ ಮುಗಿಯದ ಪುಣ್ಯ ಕಥೆ!

ಅವಳ ವೈಭವ ಚ್ಯುತಿ ಇಲ್ಲದ ನಿತ್ಯ ವೈಭವ!” (ಕಾವೇರಿ ವೈಭವ-ಎದುರ್ಕಳ ಶಂಕರನಾರಾಯಣ ಭಟ್)

ದಕ್ಷಿಣ ಗಂಗೆಯಾದ ಶ್ರೀ ಕಾವೇರಿ ಮಾತೆ ಅನಂತಗುಣ ಗಂಭೀರಳು, ಅಮೃತ ಸ್ವಾದುಸಲಿಲಳು, ನಿತ್ಯ ಶಕ್ತಳು, ನಿತ್ಯ ಪೂಜನೀಯಳಾಗಿ ಭಕ್ತ ಜನ್ಮೋದ್ಧಾರಿಣಿಯಾಗಿ ಕೋಟಿ ಜನರ ಮನಸ್ಸಿನಲ್ಲಿ ವಿರಾಜಮಾನಳಾಗಿದ್ದಾಳೆ. ಆಧುನಿಕ ಕನ್ನಡದ ಕವಿಗಳಾದ ಪಂಜೆ ಮಂಗೇಶರಾಯರು ಕೊಡಗಿನ ಬಗ್ಗೆ ಬರೆದ ‘ಹುತ್ತರಿ ಹಾಡಿನಲ್ಲಿ’ ಕಾವೇರಿಯನ್ನು ಮುಗಿಲಿನಲ್ಲಿ ಮಿಂಚು ಹೊಳೆಯುವಂತೆ ಹೊಳೆಯುವವಳೆಂದು ಬಣ್ಣಿಸಿದ್ದಾರೆ. (ಕನ್ನಡ ಬಾವುಟ ಕ.ಸ.ಪ. ೧೯೩೮, ಪು. ೧೧೯)

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ

ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ

ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ

ಎಲ್ಲಿ ನೆಲವನು ತಣಿಸಿ, ಜನಮನ ಹೊಲದ ಕಳೆಕಳೆ ಕಳೆವಳೋ

ಅಲ್ಲಿ ಆ ಕಡೆ ನೋಡಲಾ !

ಅಲ್ಲೆ ಕೊಡಗರ ನಾಡಲಾ !

ಅಲ್ಲೆ ಕೊಡವರ ಬೀಡಲಾ !

ಬ್ರಹ್ಮಗಿರಿಯಲ್ಲಿ ಕಿರಿದಾಗಿ ಹುಟ್ಟಿ ಗುಪ್ತಗಾಮಿನಿಯಾಗಿ ಲೋಕ ಕಲ್ಯಾಣಕ್ಕಾಗಿ ಹರಿದು ಜನಕೋಟಿಯ ಪಾಲಿಗೆ ದೇವತೆಯಾಗಿ, ಧರ್ಮ-ಸಂಸ್ಕೃತಿಗಳ ಬಗ್ಗೆ ಸಂಬAಧ ಸಂಸ್ಕಾರವನ್ನೇ ನೀಡುವ ಒಂದು ಪವಿತ್ರ ಶಕ್ತಿಯ ಸಂಕೇತವಾಗಿ ಶ್ರೀ ಕಾವೇರಿ ಬೆಳಗುತ್ತಿದ್ದಾಳೆ.

“ತುಲಾಮಾಸೇತು ಕಾವೇರಿ ಸರ್ವ ತೀರ್ಥಾಶ್ರಿತಾ ನದೀ

ಪಂಚಪಾತಕ ಸಂಹತ್ರೀð ವಾಜಿಮೇಧ ಫಲಪ್ರದಾ

ಭಕ್ತಾನುಕಂಪೇ ಮುನಿಭಾಗ್ಯಲಕ್ಷಿö್ಮÃ ನಿತ್ಯೇ ಜಗನ್ಮಂಗಲ ದಾನಶೀಲೆ

ನಿರಂಜನೇ ದಕ್ಷಿಣದೇಶ ಗಂಗೇ ಕಾವೇರಿ ಕಾವೇರಿ ಮಮ ಪ್ರಸೀದ”

ಹರದಾಸ ಅಪ್ಪಚ್ಚುಕವಿ ಕಾವೇರಿಯನ್ನು ಹೀಗೆ ಸ್ತುತಿಸುತ್ತಾರೆ.

“ಕಾವೇರಮ್ಮೆ ದೇವಿತಾಯಿ ಕಾಪಡೆಂಗಳಾ

ಬಾಳAಡೊAದ್ ದೇಶಕ್ಕೆಲ್ಲ ನಲ್ಲದ್ ಮಾಡೀ |

ಕೇಳಿಪಟ್ಟ ಪಾಕಡಕ್ ಪೋಯಿ ಸೇರಿಯಾ ||

ಈ ಲೋಕಕ್ ಮನುಷ್ಯ ಕೆಜ್ಜ ಕರ್ಮಡೆಲ್ಲ ನೀ |

ಆಳ್‌ಭೇದ ಕಾಣತೆಯೋ ಪಾಪ ತ್Ãಪಿಯಾ ||

ಮಾಯತುಳ್ಳ ದೇವಿ ನೀಡ ಪಾದಕ್ ಬೂವ |

ಚಾಯಿಗೊಂಬ್ ಎಂದು ನೀನ್ ಕಾಪಾಡ್ ದೇವಿ||”

ಎಂದು ದೇಶಕ್ಕೆಲ್ಲ ಒಳ್ಳೆಯದನ್ನು ಮಾಡಿ ಮನುಷ್ಯ ಕುಲ ಸುಖವಾಗಿ ಬಾಳಲೆಂದು ಹರಸಿ ಹಾಲ್ಗಡಲಿಗೆ ಹೋಗಿ ಸೇರಿದ ಕಾವೇರಿ ತಾಯಿಯ ಪಾದಕ್ಕೆ ನಾನು ಅಡ್ಡ ಬೀಳುವೆ, ಮಾಯಾವಿ ದೇವಿ ನಮ್ಮನ್ನು ಕಾಪಾಡು ಎಂದು ಬೇಡಿಕೊಳ್ಳುತ್ತಾರೆ. ಕಾವೇರಿ ಸಂಕ್ರಮಣದ ದಿನ ಕೊಡವರು ‘ತಲಕಾವೇರಿ’ಗೆ ಹೋಗಿ ಅಲ್ಲಿನ ‘ಪುಷ್ಕರಿಣಿ’ (ಕೊಳ)ಯಲ್ಲಿ ಪವಿತ್ರ ಸ್ನಾನ ಮಾಡಿ ಅಗಸ್ತೆö್ಯÃಶ್ವರನಿಗೆ ಪೂಜೆ ಸಲ್ಲಿಸುತ್ತಾರೆ. ಆ ದಿನ ತಲಕಾವೇರಿಯ ಪವಿತ್ರ ‘ತೀರ್ಥ ಕುಂಡಿಕೆ’ಯಲ್ಲಿ ತೀರ್ಥ ಉದ್ಭವಗೊಂಡು ಗುಪ್ತಗಾಮಿನಿಯಾಗಿ ಹರಿದು ಕಾವೇರಿಯನ್ನು ಸೇರುವುದು ಅಂದಿನ ವಿಶೇಷತೆ. ಕಾವೇರಿ ತೀರ್ಥೋದ್ಭವದ ಅಂಗವಾಗಿ ಕೊಡವರು ತಮ್ಮ ಭತ್ತದ ಗದ್ದೆ ಹಾಗೂ ತೋಟಕ್ಕೆ “ಬೊತ್ತ್” (ನಿಶಾನೆ) ಹಾಕಬೇಕು. ಬಿದಿರನ್ನು ಒಡೆದು ಸುಮಾರು ನಾಲ್ಕಡಿ ಉದ್ದದ ದಬ್ಬೆಗಳಾಗಿ ಮಾಡಿ, ಅಂತಹ ಎರಡು ದಬ್ಬೆಗಳ ತುದಿಯನ್ನು ಒಡೆದು ಗದ್ದೆಯ ಮಧ್ಯದಲ್ಲಿ ಅವುಗಳನ್ನು ಕತ್ತರಿ ರೂಪದಲ್ಲಿ ಚುಚ್ಚಬೇಕಾಗುತ್ತದೆ.

ಅದರ ಮೇಲ್ಭಾಗದ ತುದಿಗೆ ‘‘ಕೈಬಳ್ ಬಳ್ಳಿ” (ಒಂದು ಜಾತಿಯ ಬಳ್ಳಿ) ಯನ್ನು ವೃತ್ತಾಕಾರವಾಗಿ ಸುತ್ತಬೇಕು. ಇದನ್ನು ‘ಬೊತ್ತೆಲೆ’ ಎನ್ನುತ್ತಾರೆ. ಈ ನಿಶಾನೆಗಳನ್ನು ಪ್ರತೀ ಕುಟುಂಬದ ಆಸ್ತಿಗಳಾದ ಗದ್ದೆ, ಬಾವಿ, ಕೆರೆ, ದನದ ಕೊಟ್ಟಿಗೆ, ತೋಟ, ಮನೆಗಳ ಮುಂದೆ ನಿಲ್ಲಿಸುತ್ತಾರೆ. ತೋಟಗಳಲ್ಲಿ ‘ಬೊತ್ತು’ ಹಾಕುವಾಗ “ಪಾಂಡವ ಕೌರವ ಬೊತ್ತೋ, ನೆರಳೋ, ಕಾಂಡೋ, ಕದರೋ, ಕ್ಞೊ.....ಕ್ಞೊ.....ಕ್ಞೊ..... ಎಂದು ಉದ್ಗರಿಸುತ್ತಾರೆ. ಪಾಂಡವರ ಭೂಮಿಯಲ್ಲಿ ನಮ್ಮ ಭೂಮಿ ಎಂದು ಮೂರು ಬಾರಿ ಹೇಳಿದ ನಂತರ ಬಾಳೆ ಎಲೆಯಲ್ಲಿ ದೋಸೆ ಮತ್ತು ಅಕ್ಷತೆಯನ್ನು ಹಾಕಿ ಕಾವೇರಿ ಮಾತೆಯನ್ನು ಪ್ರಾರ್ಥಿಸುತ್ತಾರೆ. ತೀರ್ಥೋದ್ಭವದ ಮಾರನೇ ದಿನ ಗದ್ದೆಗಳಲ್ಲಿ ಮನೆ ಮುಂದೆ “ದೋಸೆ, ಸಿಹಿಕುಂಬಳ ಸಾರ”ನ್ನು ಎಡೆ ಇಡುವ ಪದ್ಧತಿ ಈ ಹಬ್ಬದಲ್ಲಿ ಕಂಡು ಬರುತ್ತದೆ. ತೀರ್ಥೋದ್ಭವದ ದಿನ ಅಥವಾ ಮರುದಿನ ಬೆಳಿಗ್ಗೆ ಪ್ರತಿ ಮನೆಯಲ್ಲಿ ‘ಕಣಿ ಪೂಜೊ’ (ಕಣಿ ಪೂಜೆ) ಮಾಡುತ್ತಾರೆ. ಸೌತೆಕಾಯಿ ಅಥವಾ ತೆಂಗಿನಕಾಯಿಯನ್ನು ಬಳಸಿ ಸಂಕ್ರಮಣ ಹೂ ಎಂದೇ ಬಿಂಬಿತವಾದ ‘ಚೌತಿ ಪೂ’ (ಸೇವಂತಿಗೆ ಹೂವಿನ ರೂಪ) ನಿಂದ ಅಲಂಕರಿಸಿ ಶ್ರೀ ಕಾವೇರಿಯ ಪ್ರತಿರೂಪವನ್ನು ಮಾಡುತ್ತಾರೆ. ಕೆಂಪು ರೇಷ್ಮೆ ವಸ್ತçವನ್ನು ತ್ರಿಕೋನಾಕಾರದಲ್ಲಿಟ್ಟು ಆ ಪ್ರತಿಮೆಗೆ ಆಭರಣ ತೊಡಿಸಿ ವೀಳ್ಯೆದೆಲೆ ಇಟ್ಟು ಅಕ್ಕಿ ತುಂಬಿದ ತಟ್ಟೆಯ ಮೇಲಿಟ್ಟು, ‘ನೆಲ್ಲಕ್ಕಿ ನಡುಬಾಡೆ’ಯಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗೆ ಪೂಜೆ ಮಾಡುತ್ತಾರೆ. ‘ತಳಿಯಕ್ಕಿ ಬೊಳ್‌ಕು’ (ಅಕ್ಕಿ ತುಂಬಿದ ದೀಪ) ನಿಂದ ಮುತ್ತೆöÊದೆ ಯರು ದೀಪ ಬೆಳಗುತ್ತಾರೆ. ಈ ಕಣಿಪೂಜೆಗೆ ಮನೆಯವರೆಲ್ಲರೂ ದೀಪ ಬೆಳಗಿ ಅಕ್ಕಿ ಪ್ರೋಕ್ಷಿಸಿ ಮೂರು ದಿನಗಳವರೆಗೆ ಪೂಜಿಸುವರು. ತೌರಿಗೆ ಬಂದ ಹೆಣ್ಣುಮಕ್ಕಳು, ಬಂಧುಗಳು ಈ ಪ್ರತಿಮೆ ದರ್ಶನ ಮಾಡಿ ಹಿರಿಯರ ಕಾಲಿಗೆ ನಮಸ್ಕರಿಸುವುದು ಕೊಡವರಲ್ಲಿ ಕಡ್ಡಾಯವಾಗಿದೆ.

ಪೂಜೆಯ ನಂತರ ಹಾಲು ಬರುವ ಮರ ಅಥವಾ ಹೊಳೆಯಲ್ಲಿ ಪ್ರತಿರೂಪವನ್ನು ವಿಸರ್ಜಿಸುತ್ತಾರೆ. ಕಾವೇರಿ ಸಂಕ್ರಮಣದAದು ಕಾವೇರಿಮಾತೆ ನಾಡನ್ನು ನೋಡಲು ಬಂದಾಗ ‘ಬೊತ್ತ್’ನಲ್ಲಿಟ್ಟಿದ್ದ ನೈವೇದ್ಯ ನೋಡಿ ಸಂತೋಷ ದಿಂದ ತಮ್ಮ ಕೆರೆ, ಬಾವಿ, ಕಟ್ಟೆಗಳಲ್ಲಿ ಉಕ್ಕುತ್ತಾಳೆ ಎಂಬ ನಂಬಿಕೆ ಕೊಡವರಲ್ಲಿದೆ. ಕಾವೇರಿ ಈ ಲೋಕವನ್ನೆಲ್ಲಾ ‘ಬೊತ್ತ್’ನ ವೃತ್ತಾಕಾರದÀಂತೆ ಬಳಸಿ ಸಮೃದ್ಧ ಗೊಳಿಸಲಿ ಎಂಬ ಆಶಯವೂ ಇಲ್ಲಿದೆ. ಇಂತಹ ವಿಶಿಷ್ಟ ಪದ್ಧತಿ ಇಂದಿಗೂ ಕೊಡವರಲ್ಲಿ ಕಂಡು ಬರುತ್ತಿದೆ. (ಮುಗಿಯಿತು)

-ಡಾ|| ಕಾವೇರಿ ಪ್ರಕಾಶ್

ಪ್ರಾಂಶುಪಾಲರು, ನಾಪೋಕ್ಲು.