ಸೋಮವಾರಪೇಟೆ, ಏ.೯: ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು-ಐಗೂರು-ಯಡವಾರೆ ಗ್ರಾಮಗಳು ಇದೀಗ ಕಾಡಾನೆಗಳ ತವರೂರಾಗಿ ಮಾರ್ಪಟ್ಟಿವೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ೧೦ ರಿಂದ ೧೫ ಕಾಡಾನೆಗಳಿರುವ ಗುಂಪು ಅರಣ್ಯದಂಚಿನಲ್ಲಿರುವ ಗ್ರಾಮಕ್ಕೆ ಆಗಮಿಸಿ, ನಂತರ ವಾಪಸ್ ಆಗುತ್ತಿದ್ದು, ಗ್ರಾಮಸ್ಥರು ಮೈಯೆಲ್ಲಾ ಕಣ್ಣಾಗಿಸಿಕೊಂಡು ನಡೆದಾಡಬೇಕಿದೆ.

ಮರಿಯಾನೆಯನ್ನು ಒಳಗೊಂಡAತೆ ೧೩ ಆನೆಗಳಿರುವ ಒಂದು ಗುಂಪು ಕಾಜೂರು ಅರಣ್ಯದಿಂದ ಕೋವರ್‌ಕೊಲ್ಲಿ, ಕಾಜೂರು ಗ್ರಾಮ, ಯಡವಾರೆ, ಸಜ್ಜಳ್ಳಿ, ಐಗೂರು ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮದ ರಸ್ತೆಗಳಲ್ಲಿ ರಾಜಾರೋಷವಾಗಿ ಸಂಚರಿಸುತ್ತಿವೆ.

ಕಾಜೂರು ಅರಣ್ಯವಂತೂ ಒಣಗಿ ಬಟಾ ಬಯಲಿನಂತಾಗಿದ್ದು, ಹಸಿರು ಮಾಯವಾಗಿದೆ. ಕಾಡಾನೆಗಳ ದೊಡ್ಡ ಹೊಟ್ಟೆಗೆ ಹಿಡಿ ಆಹಾರವೂ ಇಲ್ಲವಾಗಿದ್ದು, ಹೊಟ್ಟೆಪಾಡಿಗಾಗಿ ಕಾಫಿ ತೋಟ, ಜನವಸತಿ ಪ್ರದೇಶಕ್ಕೆ ಅನಿವಾರ್ಯವಾಗಿ ಲಗ್ಗೆಯಿಡುತ್ತಿವೆ.

ಕಾಜೂರು ಅರಣ್ಯದಿಂದ ಕಾಫಿ ತೋಟಕ್ಕೆ ಹಾಗೂ ಕಾಫಿ ತೋಟದಿಂದ ಅರಣ್ಯಕ್ಕೆ ಓಡಾಡುತ್ತಿರುವ ಆನೆಗಳು ಇದೀಗ ಕಾಜೂರಿಗೆ ನಿರಂತರ ಅತಿಥಿಗಳಾಗಿವೆ. ಅರಣ್ಯದಿಂದ ತೋಟಕ್ಕೆ ಆಗಮಿಸುವ ಆನೆಗಳು, ಹಲಸಿನ ಕಾಯಿ, ಸೊಪ್ಪು, ಬೈನೆ, ಬಾಳೆಗಳನ್ನು ತಿನ್ನುತ್ತಿವೆ. ತೋಟಕ್ಕೆ ಹಾಕಿದ ಬೇಲಿಗಳನ್ನು ನಾಶಗೊಳಿಸಿ, ಐಗೂರಿನ ಚೋರನ ಹೊಳೆಗೆ ತೆರಳಿ ಬಾಯಾರಿಸಿಕೊಂಡು ನಂತರ ಅರಣ್ಯಕ್ಕೆ ವಾಪಸ್ ಆಗುತ್ತಿವೆ.

ಕೋವರ್‌ಕೊಲ್ಲಿಯ ಟಾಟಾ ಕಾಫಿ ಎಸ್ಟೇಟ್‌ಗೆ ಸೋಲಾರ್ ಬೇಲಿ ಹಾಕಿರುವ ಹಿನ್ನೆಲೆ ಇತರ ಕಾಫಿ ತೋಟಗಳು ಕಾಡಾನೆಗಳ ಕಾರಿಡಾರ್ ಆಗಿ ಮಾರ್ಪಟ್ಟಿವೆ. ಇದರೊಂದಿಗೆ ಅರಣ್ಯದ ಅಂಚಿನಲ್ಲಿ ತೋಡಿರುವ ಆನೆ ಕಂದಕ ನಾಮಕಾವಸ್ತೆಗೆ ಎಂಬAತಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆನೆಗಳಿಗೆ ತಡೆಯೊಡ್ಡುವಲ್ಲಿ ವಿಫಲತೆ ಕಂಡಿದೆ.

ಇದರೊAದಿಗೆ ಅರಣ್ಯದಲ್ಲಿ ಅಕೇಷಿಯಾ ಹಾಗೂ ತೇಗದ ಮರಗಳನ್ನು ಹೊರತುಪಡಿಸಿದರೆ ಇತರ ಮರಗಳು ಇಲ್ಲವಾಗಿವೆ. ಬೇಸಿಗೆಯಾಗಿರುವುದರಿಂದ ತೇಗದ ಮರಗಳು ಒಣಗಿ ಎಲ್ಲಾ ಎಲೆಗಳು ನೆಲದಲ್ಲಿ ಹರಡಿಕೊಂಡಿದ್ದು, ಕನಿಷ್ಟ ನೆರಳೂ ಸಹ ಇಲ್ಲವಾಗಿದೆ. ವನ್ಯಪ್ರಾಣಿಗಳಿಗೆ ನೀರು ಹಾಗೂ ಆಹಾರದ ಮಾರ್ಗವೂ ಇಲ್ಲದ್ದರಿಂದ ಕಾಡಾನೆಗಳು ನಾಡಿಗೆ ಲಗ್ಗೆಯಿಡುತ್ತಿವೆ.

ಕಾಡಾನೆಗಳ ಉಪಟಳದಿಂದ ಮುಕ್ತಿ ನೀಡುವಂತೆ ಹಲವಷ್ಟು ಬಾರಿ ಐಗೂರು, ಕಾಜೂರು, ಯಡವಾರೆ ವ್ಯಾಪ್ತಿಯ ಸಾರ್ವಜನಿಕರು, ಬೆಳೆಗಾರರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನ ಕಾಣದ ಹಿನ್ನೆಲೆ ಕಾಡಾನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕುವ ಮನಸ್ಥಿತಿಗೆ ತಲುಪಿದ್ದಾರೆ. ಕೃಷಿ ಫಸಲು ನಷ್ಟವಾದ ಸಂದರ್ಭ ಅರಣ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಾ, ತಮ್ಮ ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ.

ಕಾಡಾನೆಗಳಷ್ಟೇ ದಪ್ಪ ಚರ್ಮವನ್ನು ಅರಣ್ಯ ಇಲಾಖೆ ಹೊಂದಿದೆ. ಹೀಗಾಗಿ ನಮಗಳ ಮನವಿಗೆ ಸ್ಪಂದನೆ ಇಲ್ಲ. ಅರಣ್ಯದೊಳಗೆ ಆಹಾರದ ಗಿಡಮರಗಳನ್ನು ಬೆಳೆಸಿ, ಕೆರೆಗಳನ್ನು ತೋಡಿ ಬೋರ್‌ವೆಲ್ ಮೂಲಕ ಕೆರೆಗಳಿಗೆ ನೀರು ತುಂಬಿಸಿ, ಆನೆಕಂದಕ, ಸೋಲಾರ್ ಬೇಲಿ ಸಮರ್ಪಕಗೊಳಿಸಿ ಎಂದು ಸಲಹೆಯ ಮಾದರಿಯಲ್ಲಿ ಮನವಿ ಸಲ್ಲಿಸುತ್ತಾ ಬಂದಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಈ ವ್ಯಾಪ್ತಿಯ ಕೃಷಿಕರು ಅವಲತ್ತುಕೊಂಡಿದ್ದಾರೆ.

ಕಾಡಾನೆಗಳ ಓಡಾಟದಿಂದಾಗಿ ಆತಂಕದಲ್ಲಿಯೇ ರಸ್ತೆಯಲ್ಲಿ ಸಂಚರಿಸುವAತಾಗಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಸಾರ್ವಜನಿಕರು ಭಯಾತಂಕದೊAದಿಗೆ ಓಡಾಡಬೇಕಿದೆ. ಪ್ರತಿ ವರ್ಷವೂ ಇದೇ ಪರಿಸ್ಥಿತಿಯಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಕಾಜೂರಿನ ಅವಿಲಾಷ್, ಪ್ರಮೋದ್, ಗಾಯತ್ರಿ, ಕುಸುಮ, ಅನಿತ ಸೇರಿದಂತೆ ಇತರರು ಪರಿಸ್ಥಿತಿಯನ್ನು ವಿವರಿಸಿದ್ದಾರೆ.