ಗೋಣಿಕೊಪ್ಪಲು, ಏ. ೯: ಕೌಟುಂಬಿಕ ವಿಚಾರದಿಂದ ಮನನೊಂದು ನಗರದ ಪೂಜಾರಿ ಆರ್ಕೇಡ್‌ನ ಲಾಡ್ಜ್ನಲ್ಲಿ ಡೆತ್‌ನೋಟ್ ಬರೆದಿಟ್ಟು ಅಮ್ಮ ಹಾಗೂ ಮಗ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತಾಯಿ ಲಾಡ್ಜ್ನಲ್ಲೇ ಮೃತಪಟ್ಟಿದ್ದು, ಮಗ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಾಪೋಕ್ಲು ಸಮೀಪ ಪೇರೂರು ಗ್ರಾಮದ ಪ್ರಭಾವತಿ ಸಿ.ಎಸ್. (೭೦) ವಿಷ ಕುಡಿದು ಮೃತಪಟ್ಟ ದುರ್ಧೈವಿ.

ತಾ.೭ ರಂದು ಮಧ್ಯಾಹ್ನ ವೇಳೆ ತಾಯಿ ಪ್ರಭಾವತಿ ಹಾಗೂ ಮಗ ತೋಲಂಡ ಸುಭಾಶ್ ಚಂಗಪ್ಪ (೫೦) ಲಾಡ್ಜ್ನಲ್ಲಿ ರೂಮ್ ಬುಕ್ ಮಾಡಿ ತಂಗಿದ್ದರು.

(ಮೊದಲ ಪುಟದಿಂದ) ತಾ. ೯ರ ಸಂಜೆಯ ವೇಳೆ ಲಾಡ್ಜ್ನಲ್ಲಿ ಕೀಟನಾಶಕದ ವಿಪರೀತ ವಾಸನೆ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಬಾಗಿಲಿನ ಬಳಿ ತೆರಳಿ ಪರಿಶೀಲನೆ ನಡೆಸಿದ ವೇಳೆ ಬಾಗಿಲು ತೆರೆÀಯಲಿಲ್ಲ. ಕೂಗಿ ಕರೆದರೂ ಯಾರು ಕೂಡ ಕೊಠಡಿಯ ಒಳಗಿನಿಂದ ಶಬ್ದ ಮಾಡಲಿಲ್ಲ. ಕೂಡಲೇ ಲಾಡ್ಜ್ನ ಸಿಬ್ಬಂದಿಗಳು ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ನಂತರ ಪೊಲೀಸರ ಸಮ್ಮುಖದಲ್ಲಿ ಲಾಡ್ಜ್ನ ಕೊಠಡಿ ಸಂಖ್ಯೆ ೧೧೫ ರ ಬಾಗಿಲನ್ನು ಒಡೆದು ಒಳ ಪ್ರವೇಶ ಮಾಡಿದ ವೇಳೆ ಸುಭಾಶ್ ಚಂಗಪ್ಪ ಸಾವು ಬದುಕಿನ ನಡುವೆ ನರಳಾಡುತ್ತಿದದ್ದು ಹಾಗೂ ಮಹಿಳೆ ಮೃತಪಟ್ಟಿರುವುದು ತಿಳಿದು ಬಂದಿದೆ.

ಜೀವನ್ಮರಣ ಸ್ಥಿತಿಯಲ್ಲಿದ್ದ ಚಂಗಪ್ಪನನ್ನು ಸ್ಥಳೀಯರ ಸಹಾಯದಿಂದ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ವೀರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಠಡಿಯಲ್ಲಿ ಕೀಟನಾಶಕದ ಡಬ್ಬಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್ ಹಾಗೂ ಠಾಣಾಧಿಕಾರಿ ಸುಬ್ಬಯ್ಯ ಹಾಗೂ ಸಿಬ್ಬಂದಿಗಳು ಸ್ಥಳ ಮಹಜರು ನಡೆಸಿ ಮೃತದೇಹವನ್ನು ಗೋಣಿಕೊಪ್ಪ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದರು.

ಆತ್ಮಹತ್ಯೆಗೆ ಕುಟುಂಬದ ಸಮಸ್ಯೆ ಎಂದು ಹೇಳಲಾಗಿದ್ದು ಡೆತ್‌ನೋಟ್ ಲಭ್ಯವಾಗಿವೆ ಎಂದು ಪೊಲೀಸರು ಮಾಹಿತಿ ತಿಳಿಸಿದ್ದು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

-ಹೆಚ್.ಕೆ.ಜಗದೀಶ್