ನಾಪೋಕ್ಲು, ಏ. ೮: ನಾಪೋಕ್ಲುವಿನ ರಮ್ಯ ಸ್ಟುಡಿಯೋ ಮಾಲೀಕ, ಪತ್ರಕರ್ತ ದುಗ್ಗಳ ಸದಾನಂದ ಎಂದಿನAತೆ ತಮ್ಮ ಸ್ಟುಡಿಯೋ ಬಾಗಿಲು ತೆರೆಯಲು ಬಂದಾಗ, ಅದಾಗಲೇ ಅಪರೂಪದ ಅತಿಥಿಯೊಬ್ಬರು ಕಾದು ನಿಂತಿದ್ದರು. ಅತ್ಯಂತ ಸಂಕೋಚ ಸ್ವಭಾವದ ಈ ಅತಿಥಿಯನ್ನು ಒಮ್ಮೆ ಮುದ್ದಿಸೋಣ ವೆಂದು ಹೊರಟ ಅವರ ಕೈಗೆ ಅದು ಕಚ್ಚಿ ಗಾಯ ಮಾಡಿತು.

ಕರ್ನಾಟಕದ ಮಲೆನಾಡ ಕಾಡುಗಳು ಸೇರಿದಂತೆ, ಭಾರತ ಹಾಗೂ ಶ್ರೀಲಂಕಾದ ಅಭಯಾರಣ್ಯಗಳಲ್ಲಿ ಕಾಣಬರುವ ಕಾಡುಪಾಪ ಎಂಬ ಅಮಾಯಕ ಜೀವಿಯಿದು. ನಾಪೋಕ್ಲುವಿಗೆ ಇದು ಹೇಗೆ ಬಂತೆAಬದೇ ಅಚ್ಚರಿ. ಕಾರ್ಡ್ ಬೋರ್ಡ್ ಪೆಟ್ಟಿಗೆಯೊಂದರಲ್ಲಿ ಕಾಡುಪಾಪವನ್ನು ಭದ್ರ ಮಾಡಿದ ಸದಾನಂದ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಭಾಗಮಂಡಲದ ವಲಯ ಅರಣ್ಯಾಧಿಕಾರಿ ದೇವರಾಜ್ ಸ್ಥಳಕ್ಕೆ ಆಗಮಿಸಿ, ಕಾಡುಪಾಪವನ್ನು ವಶಕ್ಕೆ ಪಡೆದು, ಸದಾನಂದ ಅವರಿಗೆ ಕೃತಜ್ಞತೆ ಸಲ್ಲಿಸಿ, ಕಾಡಿಗೆ ಬಿಟ್ಟಿದ್ದಾರೆ. ವನಪಾಲಕ ಸುರೇಶ್, ಸೋಮಣ್ಣ, ಪ್ರವೀಣ್ ಮತ್ತಿತರರು ಈ ವೇಳೆ ಹಾಜರಿದ್ದರು.

ಲೋರಿಸ್ ಜಾತಿಯ ಜೀವಿ

ಕಾಡುಪಾಪ ವೈಜ್ಞಾನಿಕವಾಗಿ, ‘ಪ್ರೆöÊಮೇಟ್’ಗಣದ ‘ಲೋರಿಸ್’ ಜಾತಿಯ ಪ್ರಾಣಿ. ವೃಕ್ಷವಾಸಿಯಾದ ಕಾಡುಪಾಪಕ್ಕೆ ಕೊಡವ ಭಾಷೆಯಲ್ಲಿ ‘ಚೀಂಗೆ ಕೂಳಿ’ ಮತ್ತು ತುಳುವಿನಲ್ಲಿ ‘ಉರಿಯೋಳು’ ಎನ್ನುತ್ತಾರೆ. ಅತ್ಯಂತ ಸಂಕೋಚ ಸ್ವಭಾವದ ಈ ಜೀವಿಗಳು, ವೃಕ್ಷವಾಸಿಗಳು. ಹಳದಿ ಮಿಶ್ರಿತ ಬೂದು ಅಥವಾ ಕಡುಕಂದು ಬಣ್ಣದ ಉಣ್ಣೆಯಂತಹ ಮೃದುವಾದ ಕೂದಲಿರುತ್ತದೆ. ದೊಡ್ಡ, ಗುಂಡಗಿನ ಕಣ್ಣು, ತಲೆಯ ಮೇಲೆ ಎದ್ದು ಕಾಣುವ ಕಿವಿಗಳಿರುತ್ತವೆ.

ಕಾಡುಪಾಪಗಳು ಹಗಲು ವೇಳೆ ಮರದ ಮೇಲೆ ನಿದ್ರಿಸುತ್ತ ಕಾಲ ಕಳೆಯುತ್ತವೆ. ಓಡಾಟ ಬಲು ನಿಧಾನ. ಕೀಟ, ಹಲ್ಲಿ, ಮರಗಪ್ಪೆ, ಹಕ್ಕಿಗಳು ಇವುಗಳ ಆಹಾರ.