ಗೋಣಿಕೊಪ್ಪಲು, ಏ. ೮: ದಕ್ಷಿಣ ಕೊಡಗಿನಲ್ಲಿ ವ್ಯಾಘ್ರನ ದಾಳಿ ಮುಂದುವರೆದಿದ್ದು ಇದೀಗ ಬಾಳೆಲೆ ಸಮೀಪದ ದೇವನೂರು ಗ್ರಾಮದ ರೈತ ಮಹಿಳೆ ಸ್ವಾತಿ ಕುಟ್ಟಯ್ಯ ಎಂಬವರಿಗೆ ಸೇರಿದ್ದ ಹಸುವನ್ನು ಹುಲಿಯು ಕೊಂದು ಹಾಕಿದೆ. ಅಲ್ಲದೆ ಕೊಟ್ಟಿಗೆಯಲ್ಲಿದ್ದ ಮೇಕೆಯನ್ನು ಹೊತ್ತೊಯ್ದಿದೆ. ಮುಂಜಾನೆ ಮಾಲೀಕರು ಕೊಟ್ಟಿಗೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.ಮುAಜಾನೆ ವೇಳೆಯಲ್ಲಿ ಕೊಟ್ಟಿಗೆಗೆ ದಾಳಿ ಮಾಡಿ ಹಸುಗಳನ್ನು ಹಾಗೂ ಕರುಗಳನ್ನು ಕೊಂದು ಹಾಕಿ ತೆರಳುತ್ತಿದೆ. ಇದರಿಂದಾಗಿ ರೈತರಿಗೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಅರಣ್ಯ ಇಲಾಖೆಯು ಜಾನುವಾರುಗಳು ಮೃತಪಟ್ಟ ವೇಳೆ ಕೇವಲ ರೂ. ೧೦ ಸಾವಿರ ಪರಿಹಾರ ನೀಡಿ ತೆರಳುತ್ತಿದ್ದಾರೆ.ಇದರಿಂದಾಗಿ ರೈತರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ರೈತ ಸಂಘ ಸೇರಿದಂತೆ ಇತರ ಸಂಘ-ಸAಸ್ಥೆಗಳು ಅನೇಕ ಬಾರಿ ಹೋರಾಟ ನಡೆಸಿದರೂ ಹುಲಿಯ ಹಾವಳಿಯ ಬಗ್ಗೆ ಇಲಾಖೆ ಎಚ್ಚೆತ್ತುಕೊಳ್ಳುತ್ತಿಲ್ಲ. ಕೇವಲ ಕಾನೂನಿನ ನೆಪಗಳನ್ನು ಮುಂದಿಟ್ಟು ಸಮಯ ದೂಡುತ್ತಿದ್ದಾರೆ. ಹುಲಿ ಸಂಚಾರದ ಸ್ಥಳಗಳಲ್ಲಿ ಬೋನ್‌ಗಳನ್ನು ಅಳವಡಿಸದೆ ಮೇಲಾಧಿಕಾರಿಗಳ ಆದೇಶಕ್ಕಾಗಿ ಎದುರು ನೋಡುತ್ತಿದ್ದಾರೆ. ಸಮೀಪದ ಅರಣ್ಯ ಪ್ರದೇಶದಿಂದ ಆಗಮಿಸಿರುವ ಹುಲಿಗಳು ಬೆಳೆಗಾರರ ಕಾಫಿ ತೋಟ, ಕುರುಚಲು ಗಿಡ, ದೇವರಕಾಡುಗಳಲ್ಲಿ ಆಶ್ರಯ ಪಡೆಯುತ್ತಾ ರೈತರ ಜಾನುವಾರುಗಳ ಮೇಲೆ ದಾಳಿ ನಡೆಸಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದೆ.
ತೋಟದ ಮಾಲೀಕರು, ತಮ್ಮ ಕಾರ್ಮಿಕರ ಸಹಾಯದಿಂದ ರಾತ್ರಿಯ ವೇಳೆಯಲ್ಲಿ ತಮ್ಮ ಕೊಟ್ಟಿಗೆಯಲ್ಲಿರುವ ಹಸುಗಳ ಮೇಲೆ ಹುಲಿ ದಾಳಿ ಇಡಬಹುದೆಂಬ ಭಯದಿಂದ ನಿದ್ರೆ ಮಾಡದೆ
(ಮೊದಲ ಪುಟದಿಂದ) ಕಾವಲು ಕಾಯುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಹುಲಿ ದಾಳಿಯ ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಸಾಂತ್ವನ ಹೇಳುತ್ತಿರುವುದು ಮಾಮೂಲಿಯಾಗಿದೆ. ಸ್ವಾತಿ ಕುಟ್ಟಯ್ಯ ಅವರ ಕೊಟ್ಟಿಗೆಯಿಂದ ಕಳೆದ ೧೬ ತಿಂಗಳಲ್ಲಿ ಆರು ಬಾರಿ ಹುಲಿ ದಾಳಿ ನಡೆಸಿ ೫ ಹಸುವನ್ನು ಕೊಂದು ಇದೀಗ ಒಂದು ಮೇಕೆಯನ್ನು ಹುಲಿಯು ಹೊತ್ತೊಯ್ದಿದೆ. ಕಳೆದ ಎರಡು ದಿನದ ಹಿಂದೆ ಇದೇ ಗ್ರಾಮದ ಅರಮಣಮಾಡ ಕೃಷ್ಣ ಎಂಬವರಿಗೆ ಸೇರಿದ ಹಸುವನ್ನು ಹುಲಿಯು ಕೊಂದು ಹಾಕಿತ್ತು. ಇದೀಗ ಈ ಭಾಗದ ನಾಗರಿಕರಲ್ಲಿ ಸಹಜವಾಗಿಯೇ ಆತಂಕ ಎದುರಾಗಿದೆ. - ಹೆಚ್.ಕೆ. ಜಗದೀಶ್