ಸೋಮವಾರಪೇಟೆ, ಏ. ೮: ಸೋಮವಾರಪೇಟೆ ಒಕ್ಕಲಿಗರ ಸಂಘವು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಮೇ ೨೭ ರಂದು ಸುವರ್ಣ ಸಂಭ್ರಮ ಸಮಾರಂಭ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೬೮ರಲ್ಲಿ ಸಿ.ಕೆ. ಕಾಳಪ್ಪ ಅವರ ನೇತೃತ್ವದಲ್ಲಿ ಪ್ರಾರಂಭವಾದ ಒಕ್ಕಲಿಗರ ಸಂಘದ ಮೂಲಕ ಹತ್ತಾರು ಕೋಟಿಗಳ ಆಸ್ತಿಯೊಂದಿಗೆ ಸಮುದಾಯ ಭವನ, ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಸೋಮವಾರಪೇಟೆಯಲ್ಲಿದ್ದ ಬಿಟಿಸಿಜಿ ಪದವಿಪೂರ್ವ ಮುಚ್ಚುವ ಹಂತಕ್ಕೆ ಬಂದ ಸಂದರ್ಭ ಸಂಘದ ವತಿಯಿಂದಲೇ ಕಾಲೇಜನ್ನು ಮರುಸ್ಥಾಪಿಸಿ ಎಲ್ಲಾ ಸಮುದಾಯ ದವರಿಗೆ ಶಿಕ್ಷಣ ನೀಡಲಾಗುತ್ತಿದೆ. ಇದರೊಂದಿಗೆ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಮೂಲಕ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಯನ್ನು ಆರಂಭಿಸಿದ್ದು, ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೃಹತ್ ಸಮುದಾಯ ಭವನ ನಿರ್ಮಾಣ ಮಾಡುವ ಮೂಲಕ ಸಭೆ ಸಮಾರಂಭಗಳಿಗೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಯೋಜನೆಗಳಿಗೆ ಈವರೆಗಿನ ಎಲ್ಲ ಸರ್ಕಾರಗಳ ಸಚಿವರು, ಶಾಸಕರು ಹಾಗೂ ಸಂಸದರು ಅನುದಾನ ನೀಡಿದ್ದು, ದಾನಿಗಳ ಧನ ಸಹಾಯದಿಂದ ಇಂದು ಸಂಘ ಹೆಮ್ಮರವಾಗಿ ಬೆಳೆದಿದೆ ಎಂದು ಸ್ಮರಿಸಿದರು.
ಮೇ ೨೭ ರಂದು ಸಂಘದ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆದಿಚುಂಚನಗಿರಿ ಮಠಾಧೀಶರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ವಹಿಸಲಿದ್ದಾರೆ.
ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸಮುದಾಯ ಭವನದ ಎದುರು ನಿರ್ಮಿಸಿರುವ ರೂ. ೪೫ ಲಕ್ಷದ ಪ್ರವೇಶ ದ್ವಾರವನ್ನು ದಾನಿಗಳಾದ ರಾಮಚಂದ್ರ ಹಾಗೂ ಸಂಸದ ಪ್ರತಾಪ ಸಿಂಹ ಅವರು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುವರ್ಣ ಮಹೋತ್ಸವದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರತರಲು ಉದ್ದೇಶಿಸಲಾಗಿದ್ದು, ಜನಾಂಗ ಬಾಂಧವರು ಕಥೆ, ಕವನಗಳನ್ನು, ಲೇಖನಗಳನ್ನು ಕಳಿಸಬಹುದಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಕೆ.ಟಿ. ಪರಮೇಶ್, ಹಣಕಾಸು ಸಮಿತಿ ಸಹ ಕಾರ್ಯದರ್ಶಿ ಜಿ.ಪಿ. ಲಿಂಗರಾಜು, ಮೆರವಣಿಗೆ ಸಮಿತಿ ಸಹಕಾರ್ಯದರ್ಶಿ ನಂದಕುಮಾರ್, ನಿರ್ದೇಶಕ ಎಸ್.ಜಿ. ಮೇದಪ್ಪ ಉಪಸ್ಥಿತರಿದ್ದರು.
ಒಮ್ಮತದ ಅಭ್ಯರ್ಥಿಗೆ ಶ್ರಮ: ಕೆಲವೇ ದಿನಗಳಲ್ಲಿ ಒಕ್ಕಲಿಗರ ಸಂಘಕ್ಕೆ ಚುನಾವಣೆ ನಡೆಯಲಿದ್ದು, ಹರಪಳ್ಳಿ ರವೀಂದ್ರ ಅವರು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈ ಬಾರಿ ಕೊಡಗಿನವರೇ ನಿರ್ದೇಶಕರಾಗಿ ಆಯ್ಕೆಯಾಗಬೇಕೆಂಬುದು ಎಲ್ಲರ ಅಭಿಲಾಷೆಯಾಗಿದೆ. ಇನ್ನೂ ಚುನಾವಣಾ ವೇಳಾಪಟ್ಟಿ ನಿಗದಿ ಯಾಗಿಲ್ಲ. ಹೆಚ್ಚಿನ ಆಕಾಂಕ್ಷಿಗಳಿದ್ದರೆ ಸಭೆ ನಡೆಸಿ ಒಮ್ಮತದ ಅಭ್ಯರ್ಥಿಯ ಆಯ್ಕೆಗೆ ಶ್ರಮವಹಿಸಲಾಗುವುದು. ಇದು ಫಲಕಾರಿಯಾಗದಿದ್ದರೆ ಚುನಾವಣೆ ನಡೆಯಲಿದೆ ಎಂದು ಸಂಘದ ನಿರ್ದೇಶಕ ಎಸ್.ಜಿ. ಮೇದಪ್ಪ ಸೇರಿದಂತೆ ಇತರರು ಅಭಿಪ್ರಾಯಿಸಿದರು.
ಒಕ್ಕಲಿಗರ ಸಂಘವು ಕಳೆದ ೪೦ ವರ್ಷಗಳಿಂದ ಬೆಳೆದು ಬಂದ ಹಾದಿಯ ಬಗ್ಗೆ ಅರಿವಿಲ್ಲದ ಕೆಲವರು ಸೋಮವಾರಪೇಟೆಯ ಒಕ್ಕಲಿಗರ ಸಂಘ ಏನು ಮಾಡಿದೆ? ಎಂದು ಪ್ರಶ್ನಿಸುತ್ತಿದ್ದಾರೆ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಸಂದರ್ಭದಲ್ಲೂ ಒಕ್ಕಲಿಗರ ಸಂಘವನ್ನು ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಕೋಟ್ಯಾಂತರ ವೆಚ್ಚದ ಸಮುದಾಯ ಭವನ, ಶಾಲಾ-ಕಾಲೇಜು ಸ್ಥಾಪಿಸಲಾಗಿದೆ.
ಜನಾಂಗ ಬಾಂಧವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡುತ್ತಿದ್ದೇವೆ. ಆದರೂ ಕೆಲವರು ಸಂಘದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ವಿರುದ್ಧ ಅಜ್ಞಾನದಿಂದ ಆರೋಪ ಮಾಡುತ್ತಿದ್ದಾರೆ. ಸಮಾಜಕ್ಕಾಗಿ ನಾವು ಮಾಡಿದ ಕೆಲಸಗಳು ಕಣ್ಣಮುಂದೆಯೇ ಇದೆ ಎಂದು ಎ.ಆರ್. ಮುತ್ತಣ್ಣ ಸ್ಪಷ್ಟನೆ ನೀಡಿದರು.