ಮಡಿಕೇರಿ, ಏ. ೭: ತಾಲೂಕಿನಾದ್ಯಂತ ವಿದ್ಯುತ್ ಸಮಪರ್ಕಗಳಿಲ್ಲದಿರುವ ಮನೆಗಳಿಗೆ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಸೂಚನೆ ನೀಡಿದರು.

ತಾ.ಪಂ.ಸಭಾAಗಣದಲ್ಲಿ ನಡೆದ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೆಸ್ಕ್ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಅಧ್ಯಕ್ಷೆ ಶೋಭಾ ಅವರು, ಚೆಂಬು, ಹೊದವಾಡ, ಮುಂತಾದೆಡೆ ಇನ್ನೂ ಕೂಡ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ದನಿಗೂಡಿಸಿದ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ದಬ್ಬಡ್ಕ ಶ್ರೀಧರ್ ಅವರು, ಸೌಭಾಗ್ಯ ಯೋಜನೆ ಮುಕ್ತಾಯವಾಯಿತಾ? ಈ ಹಿಂದೆ ದೀನ ದಯಾಳ್ ಯೋಜನೆ ಈಗಿನ ಸೌಭಾಗ್ಯ ಯೋಜನೆ ಮುಗಿದರೂ ಭಾಗಮಂಡಲ ವ್ಯಾಪ್ತಿಯಲ್ಲಿರುವ ಪರಿಶಿಷ್ಟರ ಕಾಲೋನಿಗೆ ಇನ್ನೂ ವಿದ್ಯುತ್ ಒದಗಿಸಿಲ್ಲ, ವಿದ್ಯುತ್ ಮಾರ್ಗ ಹಾದು ಹೋಗಿದ್ದರೂ ಮನೆಗಳು ಬೆಳಕಿನ ಭಾಗ್ಯ ಕಂಡಿಲ್ಲ. ಭಾಗಮಂಡಲ ವಿಭಾಗದ ಅಭಿಯಂತರರಿಗೆ ಯಾವದೇ ಆಸಕ್ತಿ ಇದ್ದಂತಿಲ್ಲ; ಕಳೆದ ೫ವರ್ಷಗಳಿಂದ ಬೇಡಿಕೆಯ ಮನವಿ ಸಲ್ಲಿಸುತ್ತಿದ್ದರೂ ಇನ್ನೂ ಕೂಡ ಈಡೇರಿಲ್ಲ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವಂತೆ ಕೋರಿದರು.

ಪ್ರತಿಕ್ರಿಯಿಸಿದ ಅಧಿಕಾರಿ ಧನಂಜಯ ಅವರು, ಸೌಭಾಗ್ಯ ಯೋಜನೆಯಡಿ ಒಟ್ಟು ೧೬೫೪ ಅರ್ಜಿಗಳು ಬಂದಿದ್ದವು ಈ ಪೈಕಿ ೧೫೦೦ ಸಂಪರ್ಕ ಕಲ್ಪಿಸಲಾಗಿದೆ, ಕೆಲವಡೆಗಳಲ್ಲಿ ಅರಣ್ಯ ಇಲಾಖೆಯ ತಕರಾರುಗಳಿರುವದರಿಂದ ವಿಳಂಬವಾಗಿದೆ, ಕುಡಿಯುವ ನೀರಿನ ಯೋಜನೆಗೆ ಇಲಾಖೆ ಹಾಗೂ ಪಂಚಾಯ್ತಿಯಿAದ ವಿದ್ಯುತ್ ಬಿಲ್ ಪಾವತಿಸಿದ ಕೂಡಲೇ ಸಂಪರ್ಕ ಒದಗಿಸಲಾಗುವದೆಂದರು. ಜನತೆ ಸೌಭಾಗ್ಯ, ಇನ್ನಿತರ ಯೋಜನೆಗಳಿಗೆ ಕಾಯದೆ ನೇರವಾಗಿ ಇಲಾಖೆಯನ್ನು ಸಂಪರ್ಕಿಸಿದರೆ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಿಕೊಡಲಾಗುವದೆಂದು ಹೇಳಿದರು.

ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ಶೋಭಾ ಅವರು, ಸೌಭಾಗ್ಯ ಯೋಜನೆಯ ಹಣ ಖಾಲಿಯಾಗಿದೆ, ಕಂಬ, ತಂತಿಗಳಿವೆ. ಆದರೆ ಫಲಾನುಭವಿಗಳು

(ಮೊದಲ ಪುಟದಿಂದ) ಮೀಟರ್‌ಗೆ ರೂ.೬೫೦ ಪಾವತಿ ಮಾಡಿದರೆ ಸಂಪರ್ಕ ಒದಗಿಸಬಹುದಾಗಿದೆ, ಆದಷ್ಟು ಬೇಗ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸೂಚಿಸಿದರು. ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಈಗಿನಿಂದಲೇ ವಿದ್ಯುತ್ ಮಾರ್ಗಗಳು ಹಾದುಹೋಗಿರುವ ಭಾಗಗಳಲ್ಲಿ ಮರದ ರೆಂಬೆಗಳನ್ನು ತೆರವುಗೊಳಿಸಿ ಅಡಚಣೆಯಾಗದಂತೆ ಮಾಡಬೇಕು ಎಂದು ಹೇಳಿದರು.

ಆರ್ಯುವೇದ ಕ್ಷೇಮ ಕೇಂದ್ರ

ಆಯುಷ್ ಅಧಿಕಾರಿ ಡಾ. ಶುಭಾ ರಾಜೇಶ್ ಅವರು, ಆಯುಷ್ ಇಲಾಖೆ ಮೂಲಕ ಬಲ್ಲಮಾವಟಿಯಲ್ಲಿ ಆಯುಷ್ ಕ್ಷೇಮ ಕೇಂದ್ರ ತೆರೆಯಲಾಗಿದ್ದು, ಯೋಗಾಭ್ಯಾಸ ಮಾಡಿಸಲಾಗುತ್ತಿದೆ. ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ಉದ್ಯಾನ ಮಾಡಲಾಗುವದು ಎಂದು ಮಾಹಿತಿ ನೀಡಿದರು.

ತಾಲೂಕಿನ ಅಂಗನವಾಡಿಗಳಿಗೆ ಕಾಲಮಿತಿಯೊಳಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಐಟಿಡಿಪಿ ಇಲಾಖೆ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಬಡವರಿಗೆ ತಲುಪಿಸಬೇಕು. ಕೋವಿಡ್-೧೯ ಹಿನ್ನೆಲೆ ವಿದ್ಯಾರ್ಥಿ ನಿಲಯಗಳ ನಿರ್ವಹಣೆ ವ್ಯವಸ್ಥಿತವಾಗಿರಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಕೃಷಿ ಭೂಮಿಗೆ ಪೈಪ್‌ಲೈನ್ ವ್ಯವಸ್ಥೆ ಮಾಡಬೇಕಿದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್ ಹೇಳಿದರು. ಕೃಷಿ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ ಬಗ್ಗೆ ತಾ.ಪಂ. ಅಧ್ಯಕ್ಷರು ಮಾಹಿತಿ ಪಡೆದರು. ಶಿಕ್ಷಣ ಇಲಾಖೆಯ ಕುರಿತು ಮಾತನಾಡಿ, ಹತ್ತನೇ ತರಗತಿಯವರಿಗೆ ಮಾತ್ರ ತರಗತಿ ನಡೆಯುತ್ತಿದೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಉತ್ತಮ ಪಡಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಆರೋಗ್ಯ ಇಲಾಖೆಯ ಕುರಿತು ಮಾಹಿತಿ ಪಡೆದ ಅಧ್ಯಕ್ಷರು ೪೫ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಬೇಕು, ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಾಲಿಸಬೇಕು ಎಂದರು. ತಾಲೂಕು ವೈದ್ಯಾಧಿಕಾರಿ ಡಾ.ಚೇತನ್, ಸಿಡಿಪಿಒ ಅರುಂಧತಿ ಅವರು ತಮ್ಮ ಇಲಾಖೆಯ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು

ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ತಾ.ಪಂ. ಇಒ ಪಿ.ಪಿ. ಕವಿತ ಇದ್ದರು.