ಕುಶಾಲನಗರ, ಏ. ೮: ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನ ಕೊಠಡಿಗಳನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು.

೨೦೧೮-೧೯ನೇ ಸಾಲಿನ ನಬಾರ್ಡ್ ಅನುದಾನದಲ್ಲಿ ನಿರ್ಮಾಣಗೊಳಿಸಿದ ತರಗತಿಯ ಕೊಠಡಿಗಳು, ಪ್ರಯೋಗಾಲಯ ಮತ್ತು ಮೂಲ ಸೌಕರ್ಯಗಳ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿದ ರಂಜನ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕುಶಾಲನಗರ ಮತ್ತು ನೆರೆಯ ತಾಲೂಕಿನ ಬಡ, ಮಧ್ಯಮ ವರ್ಗದ ಮಕ್ಕಳು ವ್ಯಾಸಂಗಕ್ಕೆ ಬರುತ್ತಿದ್ದು, ಸರಕಾರದ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ವಿ.ಎನ್. ವಸಂತಕುಮಾರ್ ಶಾಲೆಯ ಅಭಿವೃದ್ಧಿ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ, ಪ್ರಾಂಶುಪಾಲ ಸತೀಶ್ ಬಾಬು, ನಿವೃತ್ತ ಅಧಿಕಾರಿ ಕೆಂಚಪ್ಪ, ಜಿ.ಪಂ. ಸದಸ್ಯರಾದ ಕೆ.ಪಿ. ಚಂದ್ರಕಲಾ, ಮಂಜುಳಾ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಕಟ್ಟಡ ಗುತ್ತಿಗೆದಾರ ಮಣಿ ಅವರನ್ನು ಸನ್ಮಾನಿಸಿ, ಗೌರವಿಸಿದರು.