ಕಣಿವೆ, ಏ. ೭: ಕಳೆದ ಕೆಲವು ದಿನಗಳ ಹಿಂದೆ ಮಾಟಗಾತಿಯ ಮಾರುವೇಷದಲ್ಲಿ ಬಂದು ಅಮಾಯಕ ಮಹಿಳೆಯ ಬಳಿಯಿಂದ ಲಕ್ಷಾಂತರ ರೂ ಬೆಲೆಯ ಚಿನ್ನಾಭರಣ ಹಾಗೂ ಒಂದಷ್ಟು ನಗದು ದೋಚಿ ಪರಾರಿಯಾಗಿದ್ದ ವಂಚಕಿಯ ಜಾಡು ಹಿಡಿದ ಕುಶಾಲನಗರ ಪೊಲೀಸರು ಕೊನೆಗೂ ಧಾಳ ಹಾಕಿದ್ದಾರೆ. ನಾಳೆ ಕುಶಾಲನಗರಕ್ಕೆ ವಂಚಕಿಯನ್ನು ಕರೆ ತರುವ ಸಾಧ್ಯತೆ ಇದೆ ಎಂದು ಬಲ್ಲ ಮೂಲಗಳಿಂದ ‘ಶಕ್ತಿ’ಗೆ ಮಾಹಿತಿ ಲಭಿಸಿದೆ. ಕೆಂಪು ಪಟ್ಟಿಯ ರವಿಕೆಯೊಂದಿಗೆ ಹಳದಿ ಬಣ್ಣದ ಸೀರೆ ತೊಟ್ಟು ಜಡೆಗೊಂದಿಷ್ಟು ಮಲ್ಲಿಗೆ ಹೂ ಮುಡಿದು ಬೈಚನಹಳ್ಳಿಯ ಲಕ್ಷ್ಮಿ ಎಂಬ ಮಹಿಳೆಯ ಮನೆಗೆ ಲಗ್ಗೆಯಿಟ್ಟಿದ್ದ ಈ ವಂಚಕಿ, ಅಮಾಯಕ ಮಹಿಳೆಯರನ್ನು ಮಾತಿಂದಲೇ ಮೋಡಿ ಮಾಡುತ್ತಿದ್ದಳು ಎನ್ನಲಾಗುತ್ತಿದೆ.

ಅಂದು ಆ ಅಮಾಯಕಿ ಲಕ್ಷ್ಮಿ ೧೫ ಲಕ್ಷ ರೂ ಬೆಲೆ ಬಾಳುವ ಬರೋಬ್ಬರಿ ೩೦೦ ಗ್ರಾಂ ಚಿನ್ನಾಭರಣ, ೩೧,೫೦೦. ರೂಗಳನ್ನು ಕ್ಷಣಾರ್ಧದಲ್ಲಿ ಕಳೆದುಕೊಂಡು ಕಣ್ಣಿಗೆ ನಿದ್ರೆ ಹಾಗೂ ಹೊಟ್ಟೆಗೆ ಊಟ ಸೇರದೆ ಕಂಡ ಕಂಡ ದೇವರಿಗೆಲ್ಲಾ ಬೇಡುತ್ತಾ ದಿನಕÀಳೆಯುತ್ತಿದ್ದರು.

ಅಪಾರ ಪ್ರಮಾಣದ ಆಭರಣ, ೩೧ ಸಾವಿರ ನಗದು ದೋಚಿದ ವಂಚಕಿ, ಕೃತ್ಯ ನಡೆಸಿದ ಮರು ಕ್ಷಣವೇ, ಹೇಗಾದರೂ ಮಾಡಿ ಇಲ್ಲಿಂದ ಬೇಗ ಪರಾರಿಯಾಗಬೇಕೆಂಬ ಕಾತರದಿಂದ ತನಗೆ ಎದುರಾದ ಆಟೋ ಒಂದನ್ನು ಏರಿ ಬೈಚನಹಳ್ಳಿಯಿಂದ ಕುಶಾಲನಗರದ ರಥ ಬೀದಿಯ ಆಂಜನೇಯ ದೇವಾಲಯದ ಬಳಿಯ ಅಂಗಡಿ ಒಂದರ ಬಳಿ ತೆರಳಿ ತಾನು ದೋಚಿ ತಂದಿದ್ದ ೫೦೦ ರೂ.ಗಳ ೩೧ ಸಾವಿರದ ಕಟ್ಟಿನಲ್ಲಿ

(ಮೊದಲ ಪುಟದಿಂದ) ೫೦೦ ರ ಒಂದು ನೋಟಿಗೆ ಚಿಲ್ಲರೆ ಪಡೆದಿರುವ ಚಿತ್ರಣ ಸಿಸಿ ಕ್ಯಾಮೆರಾದಲ್ಲಿ ಅಂದೇ ಸೆರೆಯಾಗಿತ್ತು.

ಇನ್ನೊಂದೆಡೆ ನತದೃಷ್ಟೆ ಲಕ್ಷಿö್ಮ ಮನೆಗೆ ಧಾವಿಸುತ್ತಿದ್ದ ನೆರೆಹೊರೆಯ ಮಹಿಳೆಯರು ಹಾಗೂ ಬಂಧುಗಳು ಅದು ಹೇಗೆ ಕಳೆದುಕೊಂಡು ಬಿಟ್ಟೆ. ಅವಳು ಹೇಗಿದ್ದಳು. ಹೇಗೆ ಬಂದಳು. ಯಾರನ್ನೂ ನಂಬದ ಯಾರಿಗೂ ಒಂದು ರೂ ಹಣ ಕೊಡದ ನೀನು ‘ಅದು ಹೇಗೆ ಅವಳಿಗೆ ಇದ್ದುದೆಲ್ಲವಾ ಕೊಟ್ಟೆ...’ ಹೀಗೆ ಹತ್ತು ಹಲವು ಪ್ರಶ್ನೆಗಳ ಸುರಿಮಳೆಗೈಯ್ಯುತ್ತಿದ್ದುದರಿಂದ ಆ ಮಹಿಳೆಗೆ ಮತ್ತಷ್ಟು ನೆಮ್ಮದಿ ಭಂಗವಾಗಿತ್ತು.

ಈಗ ಕುಶಾಲನಗರದ ಅಪರಾಧ ಪತ್ತೆ ದಳ ವಿಭಾಗದ ಪೊಲೀಸರ ತಂಡ ವಂಚಕಿಯ ಜಾಡು ಹಿಡಿದು ಹಗಲು - ರಾತ್ರಿ ಪರಿಶ್ರಮ ಪಟ್ಟ ಫಲವಾಗಿ ಒಂದು ರೀತಿಯಲ್ಲಿ ಕುಶಾಲನಗರದಲ್ಲಿ ನಡೆದ ಹಗಲು ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. -ಮೂರ್ತಿ