ಮಡಿಕೇರಿ, ಏ. ೬: ನವನವೀನ ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಾ ಬರುತ್ತಿರುವ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದೀಗ ಸಂಸ್ಕೃತಿ ಪ್ರಕೃತಿ ಹೆಸರಿನಡಿ ಕಾರ್ಯಕ್ರಮ ರೂಪಿಸಿದೆ.
ರಾಜ್ಯದ ಹಲವೆಡೆಗಳಿಂದ ಕಲಾವಿದರನ್ನು ಕೊಡಗಿಗೆ ಆಹ್ವಾನಿಸಿದ್ದು, ಮನೆಗಳಲ್ಲಿ ಇರಿಸಿ ಅರೆಭಾಷೆ ಮಾತನಾಡುವ ಸಮುದಾಯದ ವಿಶಿಷ್ಟ ಸಂಸ್ಕೃತಿ, ಆಚಾರಗಳನ್ನು ಚಿತ್ರಕಲಾ ರೂಪದಲ್ಲಿ ದಾಖಲಿಸುವ ಪ್ರಯತ್ನವನ್ನು ಅಕಾಡೆಮಿಯು ಸಂಸ್ಕೃತಿ-ಪ್ರಕೃತಿ ಯೋಜನೆ ಮೂಲಕ ಕೈಗೊಂಡಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧೆಡೆಯ ಗ್ರಾಮಗಳಲ್ಲಿ ರಾಜ್ಯದ ಚಿತ್ರಕಲಾವಿದರು ತಂಗಿದ್ದು, ಅರೆಭಾಷೆಗೆ ಸಂಬAಧಿಸಿದ ಸಂಸ್ಕೃತಿ, ಕೃಷಿ, ಜನಜೀವನ ಕ್ರಮದ ಬಗ್ಗೆ ಅಪೂರ್ವ ಚಿತ್ರಕಲಾ ರಚನೆಯಲ್ಲಿ ತೊಡಗಿಕೊಂಡಿದ್ದಾರೆ.
ಕಲಾವಿದರು ಕೊಡಗಿನ ಮನೆಗಳಿಗೆ ತೆರಳಿ ಅಲ್ಲಿಯೇ ವಾರದ ಕಾಲ ತಂಗಿದ್ದು ಕೊಡಗಿನ ಅರೆಭಾಷೆ ಜನಾಂಗದ ವಿವಿಧ ಆಯಾಮಗಳ ಬಗ್ಗೆ ಕಲಾಕೃತಿ ರಚಿಸುವ ಮೂಲಕ ಹೊರ ಜಿಲ್ಲೆಯ ಕಲಾವಿದರಿಗೆ ಕೊಡಗಿನ ಅರೆಭಾಷಿಕ ಜನಾಂಗದ ಮಾಹಿತಿ ಪರಿಚಯಿಸುವ ಪ್ರಯತ್ನ ಒಂದೆಡೆಯಾದರೆ, ಮನೆಯವರಿಗೆ ಹೊರಜಿಲ್ಲೆಯ ಕಲಾವಿದರನ್ನು ಸತ್ಕರಿಸಿ, ತಮ್ಮ ಆಚಾರ, ವಿಚಾರ ತಿಳಿಸುವ ಮೂಲಕ ಸಾಂಸ್ಕೃತಿಕ ವಿನಿಮಯದ ಬೆಸುಗೆಗೆ ಈ ವಿಶಿಷ್ಟ ಯೋಜನೆ ನೆರವಾಗಿದೆ.
ಚೆಂಬು ಗ್ರಾಮದಲ್ಲಿ ಲೇಖಕಿ ಸ್ಮಿತಾ ಅಮೃತರಾಜ್ ಅವರ ಮನೆ ಮಂದಿಯ ಸತ್ಕಾರವನ್ನು ಸ್ವೀಕರಿಸುತ್ತಲೇ ಕಂದನನ್ನು ಜಳಕ ಮಾಡಿಸುತ್ತಿರುವ ಅಜ್ಜಿಯ ಅಪೂರ್ವ ಚಿತ್ರವನ್ನು ಮೈಸೂರಿನ ಗಂಗಾಧರ ಮೂರ್ತಿ ಕಣ್ಣಿಗೆ ಕಟ್ಟುವಂತೆ ರಚಿಸಿದ್ದಾರೆ.
ರಾಜ್ಯದ ಹಿರಿಯ ಚಿತ್ರಕಲಾವಿದ ಕೆ.ವಿ.ಕಾಳೆ ಅವಂದೂರು ಗ್ರಾಮದ ಹಿರಿಯ ಲೇಖಕ ಪಟ್ಟಡ ಪ್ರಭಾಕರ್ ಅವರ ಮನೆಯಲ್ಲಿ ಚಿತ್ರಕಲೆ ರಚಿಸುತ್ತಿದ್ದಾರೆ. ಆವಂದೂರಿನ ಮಕ್ಕಳು ಇವರ ಮನೆಗೆ ಬಂದು ಕಲಾವಿದ ರಚಿಸುತ್ತಿರುವ ಚಿತ್ರ ನೋಡಿ ತಾವೂ ಚಿತ್ರರಚನೆಗೆ ಮುಂದಾಗಿರುವ ಬೆಳವಣಿಗೆ ನಡೆದಿದೆ.
ಮರಗೋಡಿನ ಕಟ್ಟೆಮಾಡು ಗ್ರಾಮದಲ್ಲಿರುವ ತೋಟಂಬೈಲು ಪಾರ್ವತಿ ಮನೆಯಲ್ಲಿ ನೆಲೆಸಿರುವ ವಿಜಯಪುರದ ಕಲಾವಿದೆ ಮೀನಾಕ್ಷಿ ಪಾರ್ವತಿ ಅವರ ಕರಿಮೆಣಸು ಕೃಷಿ ಪದ್ಧತಿಯ ಚಿತ್ರವನ್ನು ಕುಂಚದಲ್ಲಿ ಸೆರೆಹಿಡಿದಿದ್ದಾರೆ. ಅರೆಭಾಷಿಕರ ಸಾಂಪ್ರದಾಯಿಕ ವಿವಾಹದ ಎಣ್ಣೆ, ಅರಿಶಿಣ ಶಾಸ್ತçದ ಕಲಾಚಿತ್ರವನ್ನು ಕೂಡ ಮೀನಾಕ್ಷಿ ರಚಿಸುತ್ತಿದ್ದಾರೆ.
ಮಂಗಳೂರಿನ ಅಜೇಶ್, ಮೇಕೇರಿಯ ಸುಮನ್ ಪೂಜಾರೀರ ಮನೆಯಲ್ಲಿ ಕೋಳಿ ಅಂಕದ ಅಪರೂಪದ ಚಿತ್ರರಚಿಸುತ್ತಿದ್ದು ಇದಕ್ಕಾಗಿ ಕಲಾವಿದರನ್ನು ಮನೆಮಂದಿ ಚೇರಂಗಾಲ ದೇವಾಲಯಕ್ಕೆ ಕರೆದೊಯ್ದು ಕೋಳಿ ಅಂಕದ ಸಮಗ್ರ ಮಾಹಿತಿ ನೀಡಿದ್ದಾರೆ.
ಕಾಲೂರು ಗ್ರಾಮದ ಕುಕ್ಕೇರ ಲಕ್ಷ್ಮಣ್ ಮನೆಯಲ್ಲಿ ಕೊಡಗಿನ ಅರೆಭಾಷಿಕ ಸಮುದಾಯದ ಕಾಫಿ ಕೃಷಿ ಪದ್ಧತಿಯ ಕುರಿತ ಚಿತ್ರವನ್ನು ಮಂಗಳೂರಿನ ಪ್ರಥ್ವಿರಾಜ್ ರಚಿಸಿದ್ದಾರೆ. ಹಾಸನದ ಕಲಾವಿದ ಕೆ.ಎನ್. ಶಂಕರಪ್ಪ ಅವರು ವೈದ್ಯ ಹಾಗೂ ಲೇಖಕ ಡಾ.ಕುಶ್ವಂತ್ ಕೋಳಿಬೈಲು ಅವರ ಮನೆಯಲ್ಲಿ ಉಳಿದುಕೊಂಡು ಚಿತ್ರ ರಚಿಸುತ್ತಿದ್ದಾರೆ.
ಮಂಗಳೂರಿನ ಸೈಯದ್ ಅಸೀಫ್ ಆಲಿ, ವೀರಾಜಪೇಟೆಯ ಬಿ.ಆರ್. ಸತೀಶ್, ಮಡಿಕೇರಿಯ ಕೆ.ಆರ್.ಮಂಜುನಾಥ್, ಮರಗೋಡಿನ ರೂಪೇಶ್ ನಾಣಯ್ಯ ಕೂಡ ಕೊಡಗಿನಲ್ಲಿ ಅರೆಭಾಷೆ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಕ್ಕೆ ಜೀವ ತುಂಬಿದ್ದಾರೆ.
ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ, ನಮ್ಮ ಪ್ರದೇಶದ ಸಾಂಸ್ಕೃತಿಕ ಚಿತ್ರಗಳು ದಾಖಲೀಕರಣಗೊಳ್ಳಬೇಕು ಎಂಬ ಮೂಲ ಉದ್ದೇಶದೊಂದಿಗೆ ಯೋಜನೆ ಪ್ರಾರಂಭಿಸಿದ್ದೇವೆ. ಕಲಾವಿದರು ಕೊಡಗಿಗೆ ಬಂದು ಇಲ್ಲಿನ ಸಮುದಾಯದೊಂದಿಗೆ ಬೆರೆತು ಅವರ ಸಂಸ್ಕೃತಿ, ಪ್ರಕೃತಿಯನ್ನು ಅರಿತುಕೊಳ್ಳುವ ಪ್ರಯತ್ನ ಇದಾಗಿದೆ. ಸಾಂಸ್ಕೃತಿಕ ವಿನಿಮಯಕ್ಕೆ ಕಾರ್ಯಕ್ರಮ ಕಾರಣವಾಗಿದೆ ಎಂದರು.
ಚಿತ್ರಕಲಾವಿದರು ಇರುವ ಮನೆಯ ಅಕ್ಕಪಕ್ಕದವರೂ ಕೂಡ ಬಂದು ಆಸಕ್ತಿಯಿಂದ ಚಿತ್ರಕಲೆ ವೀಕ್ಷಿಸುತ್ತಿರುವುದು ಕೂಡ ಮುಂದಿನ ದಿನಗಳಲ್ಲಿ ಆ ಗ್ರಾಮಗಳಲ್ಲಿ ಚಿತ್ರಕಲಾವಿದರು ಹೆಚ್ಚುವ ಭರವಸೆ ಮೂಡಿಸಿದೆ. ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದೂ ಅಕಾಡೆಮಿ ಅಧ್ಯಕ್ಷರು ಅನಿಸಿಕೆ ವ್ಯಕ್ತಪಡಿಸಿದರು.
ಇನ್ನೂ ಈ ಬಗ್ಗೆ ಕಲಾವಿದರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಿಜಕ್ಕೂ ಈ ರೀತಿಯಲ್ಲಿ ಚಿತ್ರ ರಚಿಸುವುದು ವಿನೂತನ ಅನುಭವ ನೀಡಿದೆ. ಪರಸ್ಪರ ಸಂಸ್ಕೃತಿ ವಿನಿಮಯವಾಗಿದೆ. ಕೊಡಗು ಜಿಲ್ಲೆಯಲ್ಲಿ ಉಳಿದು ಇಲ್ಲಿನ ಆಚಾರ, ವಿಚಾರ ತಿಳಿದುಕೊಳ್ಳುವಂತಾಗಿದೆ ಎಂದು ಕಲಾವಿದರು ತಿಳಿಸಿದ್ದಾರೆ.
ಇಂದು ಸಮಾರೋಪ: ಒಂದು ವಾರಗಳ ಕಾಲ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ನಡೆದ ಅರೆಭಾಷೆ ಸಂಸ್ಕೃತಿ-ಪ್ರಕೃತಿ ಚಿತ್ರಕಲಾ ಶಿಬಿರದ ಸಮಾರೋಪ ಸಮಾರಂಭವು ತಾ ೦೭ ರಂದು (ಇಂದು) ಮಧ್ಯಾಹ್ನ ೩ ಗಂಟೆಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ. ತಾ ೭ ರಿಂದ ೯ ರವರೆಗೆ ಭಾರತೀಯ ವಿದ್ಯಾಭವನದ ಡ್ರಾಯಿಂಗ್ ಹಾಲ್‌ನಲ್ಲಿ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಕೋವಿಡ್-೧೯ ಸಂಬAಧ ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ಕೋರಿದ್ದಾರೆ.