ಸಿದ್ದಾಪುರ, ಏ. ೬: ಜಿಲ್ಲಾ ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘದ ಆಶ್ರಯದಲ್ಲಿ ಮಾಲ್ದಾರೆ ಜನಪರ ಸಂಘದ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಮಾಲ್ದಾರೆ ಶಾಲಾ ಮುಂಭಾಗದ ಮೈದಾನದಲ್ಲಿ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಮಾತನಾಡಿ ಗ್ರಾಮೀಣ ಪ್ರತಿಭೆಗಳು ಹೆಚ್ಚಾಗಿರುವ ಈ ಭಾಗದಲ್ಲಿ ಸಾರ್ವಜನಿಕ ಆಟದ ಮೈದಾನ ಇಲ್ಲದೆ ರಸ್ತೆ ಬದಿಗಳಲ್ಲಿ ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಕ್ರೀಡಾಪಟುಗಳ ಮೈದಾನದ ಬೇಡಿಕೆಗೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ಸಹಕಾರದಿಂದ ಪೈಸಾರಿ ಜಾಗ ಗುರುತಿಸುವ ಕೆಲಸವಾಗುತ್ತಿದ್ದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಶ್ವತವಾದ ಮೈದಾನ ಸಿಗುವ ನಿರೀಕ್ಷೆಯಿದೆ ಕ್ರೀಡಾಪಟುಗಳು ಸಹಕಾರ ನೀಡಬೇಕೆಂದರು.
ಕೆ.ಸಿ.ಎಲ್. ಸಮಿತಿಯ ಪ್ರಮುಖ ಎಂ.ಎ ಅಜೀಜ್ ಮಾತನಾಡಿ ಗ್ರಾಮದಲ್ಲಿ ಸಂಘವನ್ನು ಕಟ್ಟಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜನಪರ ಸಂಘ ಜಿಲ್ಲೆಗೆ ಮಾದರಿಯಾಗಿದೆ. ಯುವಕರು ದುಶ್ಚಟಗಳಿಂದ ದೂರವಿದ್ದು, ಸಂಘಟನೆಯೊAದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಲ್ಲಿ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ಗ್ರಾಮದ ಸಮಾಜ ಸೇವಕರಾದ ಬಾಲ ಪೂಜಾರಿ ವಾಲಿಬಾಲ್ ಪಂದ್ಯಾಟದ ಮೈದಾನ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭ ಜನಪರ ಸಂಘದ ಅಧ್ಯಕ್ಷ ಆಂಟೋನಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಹನೀಫ, ಇಸ್ಮಾಯಿಲ್, ಸಮಾಜ ಸೇವಕರಾದ ಮಣಿ, ವರ್ಗೀಸ್, ಆರ್ಮುಗಂ, ಸುನಿಲ್, ಕಲಾವಿದ ಬಾವ ಮಾಲ್ದಾರೆ, ಶಾಜಿ ಸೇರಿದಂತೆ ಮತ್ತಿತರರು ಹಾಜರಿದ್ದರು.