.jpg)
ಮಡಿಕೇರಿ,ಏ.೪: ಮಡಿಕೇರಿ ನಗರ ಹಾಗೂ ಸುತ್ತಮುತ್ತಲಿನ ಕಸ, ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುತಿಸಲಾಗಿರುವ ಎರಡನೇ ಮೊಣ್ಣಂಗೇರಿಯಲ್ಲಿನ ಜಾಗದ ಸುತ್ತ ಮುತ್ತ ನಿಗದಿತ ಪ್ರದೇಶಗಳಲ್ಲಿ ಯಾವದೇ ಜನವಸತಿ, ಜಲಮೂಲ, ನದಿ, ತೊರೆ, ವಿಮಾನ ನಿಲ್ದಾಣ ಗಳಿಲ್ಲದಿರುವದರಿಂದ ಕಸ ವಿಲೇವಾರಿಗೆ ಸೂಕ್ತವಾದ ಪ್ರದೇಶ ವಾಗಿದೆ ಎಂದು ಸರಕಾರದ ನಗರಾಭಿವೃದ್ಧಿ ಇಲಾಖೆ, ಪರಿಸರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಮಡಿಕೇರಿ ನಗರಸಭೆ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ಕಳೆದ ೧೫ ವರ್ಷಗಳಿಂದ ಮಡಿಕೇರಿ ನಗರಕ್ಕೆ ಕಗ್ಗಂಟಾಗಿರುವ ವೈಜ್ಞಾನಿಕ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ದೊರಕುವ ಹಂತಕ್ಕೆ ಬಂದು ತಲುಪಿದೆ. ಪ್ರಸ್ತುತ ಕಸ ಸುರಿಯಲಾಗುತ್ತಿರುವ ಸ್ಟೋನ್ ಹಿಲ್ ಬಳಿಯ ಜಾಗದಲ್ಲಿ ಕಸದ ರಾಶಿ ತುಂಬಿ ಹೋಗಿರುವದರಿಂದ ಸಮಸ್ಯೆ ತಲೆದೋರಿದೆ. ತೀರಾ ಸಮಸ್ಯೆ ಎದುರಿಸುತ್ತಿರುವ ಕಸವಿಲೇವಾರಿ ಸ್ಥಳದಿಂದ ಅನತಿ ದೂರದಲ್ಲಿರುವ ಸುಬ್ರಮಣ್ಯನಗರ, ರೈಫಲ್ ರೇಂಜ್, ವಿದ್ಯಾನಗರ ಹಾಗೂ ಕನ್ನಿಕಾ ಬಡಾವಣೆಯ ನಿವಾಸಿಗಳು ಸಮಸ್ಯೆಗೆ ಪರಿಹಾರ ಒದಗಿಸುವಂತೆ ಸಾಕಷ್ಟು ಹೋರಾಟ, ಪ್ರತಿಭಟನೆಗಳನ್ನು ಮಾಡಿದರೂ ಯಾವದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಪರಿಹಾರ ಕೋರಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿ
(ಮೊದಲ ಪುಟದಿಂದ) ಪರ್ಯಾಯ ಜಾಗ ಗುರುತಿಸಿಕೊಡುವಂತೆ ಸರಕಾರ, ನಗರಸಭೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗೆ ಆದೇಶಿಸಿತ್ತು. ಅದರಂತೆ ನಗರಸಭೆ, ಕಂದಾಯ ಇಲಾಖೆ ಜಂಟಿಯಾಗಿ ಮಡಿಕೇರಿ ಹೊರವಲಯದ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಸ.ನಂ.೨೦/೧ರಲ್ಲಿ ಸರಕಾರೀ ಜಾಗವನ್ನು ಗುರುತಿಸಿ ಮಂಜೂರಾತಿಗಾಗಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ನಂತರದಲ್ಲಿ ಜಿಲ್ಲಾಡಳಿತದಿಂದ ಜಾಗ ಪರಿಶೀಲನೆ ಮಾಡಿ ಕಸವಿಲೇವಾರಿ ಘಟಕ ಸ್ಥಾಪನೆಗೆ ೧೦ಎಕರೆ ಜಾಗವನ್ನು ಗುರುತಿಸಿ ಕಳೆದ ತಾ. ೨೮.೧೨.೨೦೨೦ರಂದು ನಗರಸಭೆಗೆ ಹಸ್ತಾಂತರ ಮಾಡಿತ್ತು.
ಕೆಲಸ ಆರಂಭಿಸಲು ಸೂಚನೆ
ಜಾಗ ಗುರುತಿಸಿರುವ ಬಗ್ಗೆ ನಗರಸಭೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ ನಂತರ ನ್ಯಾಯಾಲಯವು ಜಾಗದ ಗಡಿ ಗುರುತು ಮಾಡಿ ಯಾವ ರೀತಿಯಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಬಹುದೆಂಬ ಬಗ್ಗೆ ನಗರಸಭೆಗೆ ನಿರ್ದೇಶನ ನೀಡುವದರೊಂದಿಗೆ ಕೂಡಲೇ ಕಾರ್ಯೋನ್ಮುಖವಾಗುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ನಗರಸಭೆಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆ, ಕಂದಾಯ ಇಲಾಖೆ ವತಿಯಿಂದ ಜಾಗದ ಗಡಿ ಗುರುತು ಮಾಡಿ ಕಲ್ಲುಗಳನ್ನು ನೆಟ್ಟು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.
ಪ್ರಮಾಣ ಪತ್ರಕ್ಕೆ ಸೂಚನೆ
ಈ ನಡುವೆ ಗಾಳಿಬೀಡು ಕೆಲವು ಗ್ರಾಮಸ್ಥರು ಕಸ ವಿಲೇವಾರಿ ಘಟಕ ಸ್ಥಾಪನೆಯಾದಲ್ಲಿ ತೊಂದರೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ವ್ಯಾಜ್ಯದಲ್ಲಿ ಮಧ್ಯ ಪ್ರವೇಶ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಗವನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಗುರುತಿಸಲಾಗಿರುವ ಜಾಗದ ೨೦೦ ಮೀ ಸುತ್ತಳತೆಯಲ್ಲಿ ಜನವಸತಿ ಪ್ರದೇಶ, ಜಲಮೂಲ, ನದಿ, ತೊರೆಗಳಿವೆಯೇ ಎಂಬ ಬಗ್ಗೆ ಸಮಗ್ರ ವರದಿಯನ್ನೊಳಗೊಂಡ ಅಧಿಕೃತ ಪ್ರಮಾಣಪತ್ರ ಸಲ್ಲಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆಗೆ ನ್ಯಾಯಾಲಯವು ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳೆದ ತಾ. ೧೫.೩.೨೦೨೧ರಂದು ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ ಅಧಿಕಾರಿಗಳು, ಅರ್ಜಿದಾರರಾದ ಎಸ್ಆರ್ವಿಕೆ ಸಂಘದ ಅಧ್ಯಕ್ಷರು, ಸದಸ್ಯರುಗಳು, ಆಕ್ಷೇಪ ವ್ಯಕ್ತಪಡಿಸಿ ಮಧ್ಯ ಪ್ರವೇಶಿಸಿರುವ ಒಂದನೇ ಮೊಣ್ಣಂಗೇರಿಯ ಜಾಂಬವತಿ, ಕೆ.ನಿಡುಗಣೆ ಗ್ರಾಮದ ವೈ.ಎಂ. ಯಾದವ್, ಒಂದನೇ ಮೊಣ್ಣಂಗೇರಿಯ ಎಂ.ಕೆ.ಲಿAಗರಾಜು, ಎಂ.ಕೆ.ಕುಶಾಲಪ್ಪ, ಕೆ.ನಿಡುಗಣೆಯ ವೈ.ಎಂ.ರಮೇಶ್, ಒಂದನೇ ಮೊಣ್ಣಂಗೇರಿಯ ಎಂ.ಕೆ.ಶಿವಪ್ಪ, ಡಿ.ಎಸ್.ಮುಕುಂದ ಹಾಗೂ ಗಾಳಿಬೀಡು ಗ್ರಾ.ಪಂ. ಸದಸ್ಯ ವೈ.ಎಸ್. ರಾಜಶೇಖರ್ ಅವರುಗಳ ಸಮ್ಮುಖದಲ್ಲಿ ಜಂಟಿಯಾಗಿ ಪರಿಶೀಲನೆ ಮಾಡಿ ನ್ಯಾಯಾಲಯಕ್ಕೆ ಸಂಪೂರ್ಣ ಮಾಹಿತಿಯನ್ನೊಳಗೊಂಡ ವರದಿ ಸಲ್ಲಿಸಲಾಗಿದೆ.
ವರದಿಯಲ್ಲಿ ಏನೇನಿದೆ..?
೨೦೧೬ರ ತ್ಯಾಜ್ಯ ನಿರ್ವಹಣೆ ನಿಯಮದಡಿ ಜಾಗ ಗುರುತಿಸಿ ಮುಂದಿನ ೨೦ರಿಂದ೨೫ವರ್ಷಗಳ ಅವಧಿವರೆಗೆ ಮುಂದಾಲೋಚನೆಯ ಯೋಜನೆ ರೂಪಿಸಲಾಗುತ್ತದೆ. ೨೦೧೬ರ ನಿಯಮದಂತೆ ತ್ಯಾಜ್ಯ ವಿಲೇವಾರಿ ಘಟಕವು ನದಿಗಳಿಂದ ೧೦೦ ಮೀ., ಹೊಂಡಗಳಿAದ ೨೦೦ಮೀ., ಜನವಸತಿ, ಹೆದ್ದಾರಿ, ಸಾರ್ವಜನಿಕ ಉದ್ಯಾನ, ನೀರು ಸರಬರಾಜು ಘಟಕಗಳಿಂದ ೨೦೦ಮೀ., ವಿಮಾನ ನಿಲ್ದಾಣಗಳಿಂದ ೨೦ಕಿ.ಮೀ., ದೂರದಲ್ಲಿರಬೇಕೆಂದಿದೆ.
ಸರಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಲತಾ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಡಾ.ಎಂ.ಕೆ. ಸುಧಾ, ಮಡಿಕೇರಿ ನಗರಸಭೆ ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತರೆ ಕೆ.ಸೌಮ್ಯ, ನಗರಸಭೆಯ ಆರೋಗ್ಯ ನಿರೀಕ್ಷಕಿ ಹರಿಣಿ ಅವರುಗಳು ಪರಿಶೀಲಿಸಿ ಸಲ್ಲಿಸಿರುವ ವರದಿಯಲ್ಲಿ ಕೆಲವೊಂದು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ. ಪ್ರಸ್ತುತ ಗುರುತಿಸಲಾಗಿರುವ ಜಾಗದ ೧೦೦ಮೀ.ಅಂತರದಲ್ಲಿ ಯಾವದೇ ನದಿಗಳಿಲ್ಲ, ೧೦೮ ಮೀ ಕೆ.ನಿಡುಗಣೆ ಗ್ರಾಮದ ಅಂತರದಲ್ಲಿ ಮೂರು ಸಣ್ಣ ಹೊಂಡಗಳಿವೆ, ೨೦೦ಮೀ. ಅಂತರದಲ್ಲಿ ಯಾವದೇ ಹೆದ್ದಾರಿಗಳಿಲ್ಲವೆಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, ೨೪೧ಮೀ. ದೂರದಲ್ಲಿ ಮನೆಯೊಂದಿದ್ದು, ಪರಿಶೀಲನೆ ವೇಳೆ ಯಾರೂ ಕೂಡ ಹಾಜರಿರಲಿಲ್ಲ. ಮಾಲೀಕರು ಉಡುಪಿಯಲ್ಲಿ ನೆಲೆಸಿದ್ದು, ಮನೆಯನ್ನು ಹೋಮ್ಸ್ಟೇಗೆ ಬಿಟ್ಟುಕೊಡಲಾಗಿದೆ. ಮತ್ತೊಂದು ಮನೆ ೩೬೧ಮೀ. ದೂರದಲ್ಲಿದ್ದು, ಕುಶಾಲಪ್ಪ ಎಂಬವರು ಕುಟುಂಬ ಸಹಿತ ವಾಸವಿದ್ದಾರೆ. ಇನ್ನೊಂದು ಮನೆ ೧೮೧ಮೀ.ದೂರದಲ್ಲಿದ್ದು, ಜಾಂಬವತಿ ಎಂಬವರಿಗೆ ಸೇರಿದ್ದಾಗಿದೆ. ಮನೆ ಹಳೆಯದಾಗಿದ್ದು, ಯಾರೂ ಕೂಡ ವಾಸವಿರುವದಿಲ್ಲ, ಪರಿಶೀಲನೆ ಸಂದರ್ಭ ಹಾಜರಿದ್ದ ಜಾಂಬವತಿ ಅವರ ಪುತ್ರ ನಾವುಗಳು ಪ್ರಸ್ತುತ ಮಡಿಕೇರಿಯಲ್ಲಿ ನೆಲೆಸಿರುವದಾಗಿ ತಿಳಿಸಿದ್ದಾರೆ. ಇವುಗಳನ್ನು ಹೊರತುಪಡಿಸಿದರೆ ೨೫೦ಮೀ. ದೂರದಲ್ಲಿ ಅಲ್ಲಲ್ಲಿ ಕೆಲವು ಮನೆಗಳು ಮಾತ್ರ ಇರುವದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಇನ್ನುಳಿದಂತೆ ಯಾವದೇ ಸಾರ್ವಜನಿಕ ಉದ್ಯಾನಗಳಿಲ್ಲ, ನದಿಗಳಿಲ್ಲದಿರುವದರಿಂದ ಪ್ರವಾಹದ ಪರಿಸ್ಥಿತಿ ತಲೆದೋರಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಭಿವೃದ್ಧಿಗೆ ಅಡ್ಡಗಾಲು
ಕಳೆದ ಹಲವು ವರ್ಷಗಳ ಹೋರಾಟಕ್ಕೆ ಫಲ ದೊರಕುವ ಸಮಯದಲ್ಲಿ ಕೆಲವರು ವಿನಾ ಕಾರಣ ಅಡ್ಡಗಾಲು ಹಾಕುತ್ತಿರುವದರಿಂದ ಪರಿಹಾರ ಕಾಣಬೇಕಾದ ಸಮಸ್ಯೆ ಮತ್ತೆ ಸಮಸ್ಯೆಯಾಗಿಯೇ ಉಳಿದುಕೊಳ್ಳುತ್ತದೆ. ಪ್ರಸ್ತುತ ಗುರುತಿಸಲಾಗಿರುವ ಜಾಗದಲ್ಲಿ ಸುತ್ತ ಮುತ್ತ ಯಾವದೇ ಜನವಸತಿ, ಜಲಮೂಲಗಳಿಲ್ಲದಿದ್ದರೂ ಗ್ರಾಮದಿಂದ ಹೊರಪ್ರದೇಶ, ನಗರ ಪ್ರದೇಶಗಳಲ್ಲಿ ವಾಸ ಮಾಡಿಕೊಂಡಿರುವವರು ವಿರೋಧ ವ್ಯಕ್ತಪಡಿಸುತ್ತಿರುವದು ಸರಿಯಾದ ಕ್ರಮವಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಸಮಸ್ಯೆ ಬಗೆಹರಿಸಲು ಎಲ್ಲರೂ ಕೈಜೋಡಿಸುವಂತಾಗಬೇಕೆAದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವಿಚಾರದಲ್ಲಿ ಸ್ವಾರ್ಥಕ್ಕಾಗಿ ಕೆಲವರು ಮುಗ್ಧ ಗ್ರಾಮಸ್ಥರನ್ನು ಮುಂದಿಟ್ಟುಕೊAಡು ವಿರೋಧಿಸುತ್ತಿರುವದಾಗಿಯೂ ಮಾತುಗಳು ಕೇಳಿ ಬರುತ್ತಿವೆ.
-ಕುಡೆಕಲ್ ಸಂತೋಷ್