ರಾಜಕೀಯಕ್ಕೆ ಅಡ್ಡಿಯಾಗುವುದಾದರೆ ಸಿನಿಮಾವನ್ನು ಬಿಡುತ್ತೇನೆ : ಕಮಲ ಹಾಸನ್
ಕೊಯಂಬತ್ತೂರು, ಏ. ೪: ರಾಜಕೀಯ ಜೀವನಕ್ಕೆ ಅಡ್ಡಿಯಾಗುವುದಾದರೆ ಸಿನಿಮಾವನ್ನು ತೊರೆಯುವುದಕ್ಕೆ ಸಿದ್ಧ ಎಂದು ನಟ-ರಾಜಕಾರಣಿ, ಮಕ್ಕಳ ನೀತಿ ಮೈಯ್ಯಂನ ಸ್ಥಾಪಕ ಕಮಲ ಹಾಸನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಜನಸೇವೆಯ ಉದ್ದೇಶಕ್ಕಾಗಿ ಆಯ್ಕೆ ಮಾಡಿಕೊಂಡಿರುವ ರಾಜಕೀಯಕ್ಕೆ ಸಿನಿಮಾಗಳು ಅಡ್ಡಿಯಾಗುವುದಾದರೆ, ಈಗ ಒಪ್ಪಿಕೊಂಡಿರುವ ಎಲ್ಲಾ ಸಿನಿಮಾಗಳ ಯೋಜನೆಗಳನ್ನೂ ಪೂರ್ಣಗೊಳಿಸಿ ಸಿನಿಮಾ ಕ್ಷೇತ್ರವನ್ನು ತೊರೆಯುತ್ತೇನೆ ಎಂದು ಹೇಳಿದ್ದಾರೆ. ತಾವು ಈವರೆಗೂ ರಾಜಕಾರಣದಿಂದ ಅಂತರ ಕಾಯ್ದುಕೊಂಡಿದ್ದ ಶೇ.೩೦ ರಷ್ಟು ಮಂದಿಯ ಪೈಕಿ ಇದ್ದ ಕಾರಣ ತಮ್ಮ ರಾಜಕೀಯ ಪ್ರವೇಶ ಐತಿಹಾಸಿಕವಾದದ್ದು ಎಂದು ಕಮಲಹಾಸನ್ ಹೇಳಿದ್ದು, ಮಾಜಿ ಸಿಎಂ ಎಂಜಿಆರ್ ತಮ್ಮ ಆದರ್ಶಗಳನ್ನು, ಜನಸೇವೆಯ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ಶಾಸಕರಾದ ನಂತರವೂ ನಟನೆ ಮುಂದುವರೆಸಿದ್ದರು.
ಜೋರ್ಡಾನ್ ಮಾಜಿ ದೊರೆ ಗೃಹಬಂಧನ
ಅಮ್ಮಾನ್, ಏ. ೪: ಸರ್ಕಾರದ ನೀತಿ ಕುರಿತ ಟೀಕೆಯ ಕಾರಣ ಜೋರ್ಡಾನ್ ಮಾಜಿ ದೊರೆ ಹಮ್ಜಾ ಬಿನ್ ಹುಸೇನ್‌ನನ್ನು ಗೃಹಬಂಧನದಲ್ಲಿರಿಸಲಾಗಿದೆ. ರಾಜಕುಮಾರನ ವೀಡಿಯೋವನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ರಾಜಕುಮಾರರ ವಕೀಲ ಹಾಗೂ ಹಮ್ಜಾಬಿನ್ ಹುಸೇನ್, ರಾಜ ಅಬ್ದುಲ್ಲಾ, ದೇಶದ ನಾಯಕರು ಭ್ರಷ್ಟಾಚಾರ, ಅಸಮರ್ಥತೆ ಮತ್ತು ಕಿರುಕುಳದ ಭಾಗ ಎಂದು ಗಂಭೀರ ಆರೋಪ ಮಾಡಿದ್ದಾರೆ. ಜೋರ್ಡಾನ್‌ನಲ್ಲಿ ಅಪರೂಪದ ವಿದ್ಯಮಾನವಾಗಿ ಹಲವು ಉನ್ನತ ಮಟ್ಟದ ಜನರನ್ನು ಬಂಧಿಸಿದ ನಂತರ ಮಾಜಿ ದೊರೆಯ ಬಂಧನವಾಗಿದೆ. ಆದರೆ, ಮಾಜಿ ದೊರೆ ಹಮ್ಜಾ ಅವರನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂಬುದನ್ನು ಸೇನೆ ನಿರಾಕರಿಸಿದೆ. ಆದರೆ ಅದೇ ಸಮಯದಲ್ಲಿ ದೇಶದ ಭದ್ರತೆ ಮತ್ತು ಸ್ಥಿರತೆ ಕುರಿತು ಯಾವುದೆ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸುವಂತೆ ಆದೇಶಿಸಲಾಗಿದೆ ಎಂದು ಸೇನೆ ಹೇಳಿದೆ. ರಾಜಕುಮಾರ ಬುಡಕಟ್ಟು ಮುಖಂಡರನ್ನು ಭೇಟಿ ಮಾಡಿ ಜನ ಬೆಂಬಲಗಳಿಸದ ನಂತರ ಈ ಕ್ರಮಕೈಗೊಳ್ಳಲಾಗಿದೆ ಆದರೆ ಈ ಆರೋಪವನ್ನು ವೀಡಿಯೋದ ಮೂಲಕ ಪ್ರಿನ್ಸ್ ಹಮ್ಜಾ ನಿರಾಕರಿಸಿ, ಯಾವುದೇ ತಪ್ಪು ಮಾಡಿಲ್ಲ ಪಿತೂರಿ ಮಾಡಿಲ್ಲ ಎಂದು ಹೇಳಿದರು. ಈಜಿಪ್ಟ್, ಅಮೇರಿಕಾ, ಸೌದಿ ಅರೇಬಿಯಾದಂತಹ ದೇಶಗಳು ದೊರೆ ಅಬ್ದುಲ್ಲಾ ಬೆಂಬಲ ವ್ಯಕ್ತಪಡಿಸಿವೆ.
ಸರಕಾರಿ ಕೆಲಸದಲ್ಲಿದ್ದ ವ್ಯಕ್ತಿ ವಿರುದ್ಧ ಚಾರ್ಜ್ಶೀಟ್
ಜಮ್ಮು, ಏ. ೪: ತನ್ನ ಮೃತ ಸಹೋದರನ ಅರ್ಹತಾ ಪ್ರಮಾಣಪತ್ರಗಳನ್ನು ಬಳಸಿ ಸುಮಾರು ೩೦ ವರ್ಷಗಳ ಹಿಂದೆ ಸರಕಾರಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದ ವ್ಯಕ್ತಿಯೋರ್ವನ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಅಪರಾಧ ವಿಭಾಗವು ಚಾರ್ಜ್ಶೀಟ್ ಮಾಡಿದೆ. ವಿಚಾರಣೆಯಲ್ಲಿ ಆರೋಪಿ ೯ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವುದಾಗಿ ತಿಳಿಸಿದ್ದಾನೆ. ಮೂಲತಃ ಪುಲ್ವಾಮಾದ ಅಚಾನ್ ಗ್ರಾಮದವನಾಗಿರುವ ಪ್ರಸ್ತುತ ಜಮ್ಮುವಿನ ಪೋನಿ ಚಾಕ್‌ನಲ್ಲಿ ವಾಸಿಸುತ್ತಿರುವ ಶಕ್ತಿ ಬಂಧು ವಿರುದ್ಧದ ಚಾರ್ಜ್ಶೀಟ್ ಅನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ ಎಂದು ಅಪರಾಧ ಶಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಆರೋಪಿ ಕಳೆದ ೩೦ ವರ್ಷಗಳಿಂದ ಅಶೋಕ್ ಕುಮಾರ್ ಹೆಸರಿನಲ್ಲಿ ಐಎಂಪಿಎದಲ್ಲಿ ಕೆಲಸ ಮಾಡುತ್ತಿದ್ದು, ಒಂಬತ್ತನೇ ತರಗತಿ ಕೂಡ ಪಾಸಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ೧೯೭೭ರಲ್ಲಿ ದಕ್ಷಿಣ ಕಾಶ್ಮೀರದ ಸಹ-ಶಿಕ್ಷಣ ಕಾಲೇಜು ಅನಂತ್‌ನಾಗ್‌ನಲ್ಲಿ ಬಿಎ ೨ನೇ ವರ್ಷ ಓದುತ್ತಿದ್ದಾಗ ಆರೋಪಿಯ ಸಹೋದರ ಕುಮಾರ್ ಮೃತಪಟ್ಟಿದ್ದ. ಅವನ ಮರಣದ ಹಲವಾರು ವರ್ಷಗಳ ನಂತರ, ಆರೋಪಿಗಳು ತಮ್ಮ ಸತ್ತ ಸಹೋದರನ ಪ್ರಮಾಣಪತ್ರಗಳನ್ನು ನೀಡುವ ಮೂಲಕ ಕೆಲವು ಅಧಿಕಾರಿಗಳಿಗೆ ಅನುಗುಣವಾಗಿ ಐಎಂಪಿಎದಲ್ಲಿ ಕೆಲಸ ಪಡೆದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗೋದಾಮಿನಲ್ಲಿ ಸ್ಫೋಟ:ಓರ್ವ ಸಾವು
ಹಾಸನ, ಏ. ೪: ಸ್ಫೋಟಕಗಳನ್ನು ಸಂಗ್ರಹಿಸಿದ್ದ ಗೋದಾಮಿನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಓರ್ವ ಸಾವನ್ನಪ್ಪಿ ಇನ್ನಿಬ್ಬರಿಗೆ ಗಾಯ ಗಳಾಗಿರುವ ಘಟನೆ ಹಾಸನ ಜಿಲ್ಲೆ ಹಾಸನ ತಾಲೂಕು ಚಾಕೇನಹಳ್ಳಿಯಲ್ಲಿ ನಡೆದಿದೆ. ಮೃತನನ್ನು ಸಂಪತ್ (೨೭) ಎಂದು ಗುರುತಿಸಲಾಗಿದೆ. ಗಾಯಾಳುಗಳ ಪೈಕಿ ಓರ್ವನಿಗೆ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಿದ್ದರೆ ಇನ್ನೊಬ್ಬನಿಗೆ ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟಕಗಳನ್ನು ಸಾಗಿಸುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದ್ದು ಶಾಂತಿನಗರ ಠಾಣಾ ವ್ಯಾಪ್ತಿಯಲ್ಲಿ ದುರಂತ ನಡೆದಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ವಿಚಾರಣೆ ನೆಪದಲ್ಲಿ ಕಿರುಕುಳ:ಆಯುಕ್ತರಿಗೆ ಸಂತ್ರಸ್ತೆ ಪತ್ರ
ಬೆಂಗಳೂರು, ಏ. ೪: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ, ಪ್ರತಿ ದಿನ ವಿಚಾರಣೆ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಸಂತ್ರಸ್ತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಬರೆದಿರುವ ಪತ್ರ ಸಾಕಷ್ಟು ಸಂಚಲನ ಉಂಟುಮಾಡಿದೆ. ನಿರಂತರವಾಗಿ ನನ್ನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆದರೆ, ಆರೋಪಿ ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆ ಮಾಡುತ್ತಿಲ್ಲ. ಎಸ್‌ಐಟಿ ಅಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿದಿದ್ದು, ನನ್ನನ್ನು ಆರೋಪಿ ಸ್ಥಾನದಲ್ಲಿ ಇರಿಸಲು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ. ನನ್ನ ಚಾರಿತ್ರ‍್ಯವಧೆ ಮಾಡುವಂತಹ ಪ್ರಯತ್ನವನ್ನು ರಮೇಶ್ ಜಾರಕಿಹೊಳಿ ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಮಹಜರು ವೇಳೆಯಲ್ಲಿ ಆರ್ ಟಿ ನಗರದಲ್ಲಿನ ಪಿಜಿಯಲ್ಲಿ ಸಾಕ್ಷö್ಯ ನಾಶಪಡಿಸಲಾಗಿದೆ. ನನ್ನ ಒಪ್ಪಿಗೆ ಇಲ್ಲದಿದ್ದರೂ ಸರ್ಕಾರಿ ವಿಶೇಷ ಅಭಿಯೋಜಕರನ್ನು ನೇಮಕ ಮಾಡಲಾಗಿದೆ. ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಬರಲಿದ್ದಾರೆ ಎಂಬ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆ ಕೂಡಾ ನನಗೆ ಆಘಾತವನ್ನುಂಟು ಮಾಡಿದೆ. ಪ್ರಕರಣದಲ್ಲಿ ಬೇರೆ ಬೇರೆ ರೀತಿಯ ಹೆಸರನ್ನು ತಳುಕು ಹಾಕುವ ಮೂಲಕ ತನಿಖೆ ಹಾದಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಈಜಲು ಹೋಗಿದ್ದ ಮೂವರು ಬಾಲಕರ ಸಾವು
ಹಾವೇರಿ, ಏ. ೪: ಈಜಲು ಹೋಗಿದ್ದ ಮೂವರು ಬಾಲಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದೆ. ಹಾವೇರಿಯ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಕಟ್ಟಿಕೆರೆಯಲ್ಲಿ ಈ ದುರ್ಘಟನೆ ನಡೆದಿದ್ದು, ಮೃತರನ್ನು ಅಖ್ತರ್ ರಜಾ ಯಳವಟ್ಟಿ (೧೬), ಅಹ್ಮದ್ ರಜಾ ಅಂಚಿ (೧೬) ಮತ್ತು ಸಾಹಿಲ್ ಡೊಂಗ್ರಿ (೧೭) ಮೃತ ಬಾಲಕರು. ಈ ಮೂವರು ಸೇರಿಕೊಂಡು ಗ್ರಾಮದ ಬಳಿ ಇರುವ ಕೆರೆಗೆ ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳೀಯರು ಮೂವರು ಬಾಲಕರ ಮೃತದೇಹವನ್ನು ಕೆರೆಯಿಂದ ಹೊರಗಡೆ ತೆಗೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಾನಗಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.