ಕೂಡಿಗೆ, ಏ. ೧: ಸಮಾಜದಲ್ಲಿ ಮೌಢ್ಯ, ಕಂದಾಚಾರದ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಮೋಸ, ವಂಚನೆಗಳನ್ನು ಬಯಲು ಮಾಡುವ ಮೂಲಕ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ಪರಿಷತ್ತಿನ ಪುಸ್ತಕ ಪ್ರಕಟಣಾ ಉಪ ಸಮಿತಿ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಕರೆ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವತಿಯಿಂದ ಕೂಡಿಗೆ ಡಯಟ್ ಹಾಗೂ ಕ.ರಾ.ವಿ.ಪ. ಕೊಡಗು ಜಿಲ್ಲಾ ಸಂಘಟನಾ ಸಮಿತಿಯ ಸಹಯೋಗದಲ್ಲಿ ಕೂಡಿಗೆಯ ಕಾಬ್ಸೆಟಿ ಕೇಂದ್ರದಲ್ಲಿ ಜೆ.ಆರ್. ಲಕ್ಷö್ಮಣರಾವ್ ಸಭಾಂಗಣದಲ್ಲಿ ರಾಜ್ಯಮಟ್ಟದ ಜನ ವಿಜ್ಞಾನ ಚಳವಳಿ ಕುರಿತ ಕಾರ್ಯಾಗಾರದ ಅಂಗವಾಗಿ ‘ವೈಜ್ಞಾನಿಕ ಮನೋಭಾವ ಬೆಳವಣಿಗೆ ಮತ್ತು ಪವಾಡ ರಹಸ್ಯ ಬಯಲು’ ಎಂಬ ವಿಷಯದ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿದ ಅವರು, ಹಲವಾರು ಪವಾಡಗಳ ಹಿಂದಿರುವ ವೈಜ್ಞಾನಿಕ ಸತ್ಯವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು.

ದೇವರು ಎಂದಿಗೂ ಮೋಸ ಮಾಡುವುದಿಲ್ಲ. ಮೈಮೇಲೆ ದೇವರು, ದೆವ್ವ ಬರುವುದು ಕೇವಲ ಮನಸ್ಸಿನ ಭ್ರಾಂತಿ. ಆದರೆ ಮೈಮೇಲೆ ಬರುವ ದೇವರ ಹೆಸರಿನಲ್ಲಿ ಪುನರ್ಜನ್ಮ, ಭಾನಾಮತಿ ಮೊದಲಾದ ಮೌಢ್ಯಗಳನ್ನು ಸಮಾಜದಲ್ಲಿ ಭಿತ್ತಿ ನಿರಂತರವಾಗಿ ಜನರನ್ನು ವಂಚಿಸುವ ಮೂಲಕ ತಮ್ಮ ಬದುಕನ್ನು ಸಾಗಿಸುತ್ತಿರುವವರ ವಿರುದ್ಧ ಹೋರಾಟ ನಡೆಸಬೇಕು ಎಂದರು.

ಸಮಾಜದಲ್ಲಿ ದೇವಮಾನವರೆಂದು ಕರೆಸಿಕೊಳ್ಳುವ ಕೆಲವರು ದೇವರ ಹೆಸರಿನಲ್ಲಿ ಬಾನಾಮತಿ, ಮಾಠ-ಮಂತ್ರ, ದೆವ್ವ - ಭೂತಗಳ ಹೆಸರಿನಲ್ಲಿ ಮುಗ್ಧ ಜನರ ಮನಸ್ಸನ್ನು ಸಮ್ಮೋಹಿನಿ ವಿದ್ಯೆ ಮತ್ತಿತರ ತಂತ್ರಗಳನ್ನು ಅನುಸರಿಸಿ ಮಹಿಳೆಯರು ಮತ್ತು ಮಕ್ಕಳನ್ನು ವಿಕೃತ ಕೃತ್ಯಗಳಿಗೆ ಬಳಸಿಕೊಳ್ಳುವ ರಹಸ್ಯಗಳನ್ನು ಡಾ. ಹುಲಿಕಲ್ ಅನಾವರಣಗೊಳಿಸಿದರು.

ಸಮಾಜದಲ್ಲಿ ಮೌಢ್ಯ, ಕಂದಾಚಾರವನ್ನು ನಿರ್ಮೂಲನೆಗೊಳಿಸುವ ಮೂಲಕ ಜನರಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವ ದಿಸೆಯಲ್ಲಿ ತೊಡಗಿರುವ ವಿಜ್ಞಾನ ಪರಿಷತ್ತಿನ ಚಟುವಟಿಕೆಗಳಿಗೆ ಸಂಘಟನೆಗಳು ಹೆಚ್ಚಿನ ಸಹಕಾರ ನೀಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಬಿಇಓ ಎಚ್.ಕೆ. ಪಾಂಡು ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಜನ ಸಮುದಾಯದಲ್ಲಿ ಮೌಢ್ಯಾಚರಣೆ ವಿರುದ್ಧ ಜನಜಾಗೃತಿ ಮೂಡಿಸುವ ಮೂಲಕ ಅವರಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು ಎಂದರು.

ಕೊಡಗು ಜನಪರ ಆಂದೋಲನದ ಜಿಲ್ಲಾ ಸಂಚಾಲಕ ವಿ.ಪಿ. ಶಶಿಧರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಎಸ್. ಪಲ್ಲೇದ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಕರಾವಿಪ ಕಾರ್ಯಕಾರಿ ಸಮಿತಿಯ ಕೋಶಾಧಿಕಾರಿ ಇ. ಬಸವರಾಜ್, ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರ್ರೀಸ್ವಾಮಿ, ಡಯಟ್ ಉಪನ್ಯಾಸಕ ಯು. ಸಿದ್ದೇಶಿ, ವಿಜ್ಞಾನ ಪರಿಷತ್ತಿನ ಸದಸ್ಯರಾದ ಎಂ.ಇ. ಮೊಹಿದ್ದೀನ್, ಇ. ಸುಲೇಮಾನ್, ಎಂ.ಎನ್. ವೆಂಕಟನಾಯಕ್, ಎಸ್. ನಾಗರಾಜ್, ಜಿ. ಶ್ರೀಹರ್ಷ, ಎಂ. ರಂಗಸ್ವಾಮಿ, ದಯಾನಂದ ಪ್ರಕಾಶ್, ಎಂ.ಎಸ್. ಗಣೇಶ್, ಬಿ.ಬಿ. ದಿನೇಶ್, ಸಿ.ಆರ್.ಪಿ.ಗಳಾದ ಮುಬೀನಾ ಕೌಸರ್, ಇತರರು ಇದ್ದರು. ವಿಜ್ಞಾನ ಕಾರ್ಯಕರ್ತ ಶಿಕ್ಷಕ ಎಂ.ಎನ್. ವೆಂಕಟನಾಯಕ್ ನಿರ್ವಹಿಸಿದರು