ಕೂಡಿಗೆ, ಮಾ. ೩೧: ಗ್ರಾಮಾಂತರ ಪ್ರದೇಶಗಳಲ್ಲಿ ಅನೇಕ ಯುವಕರುಗಳಲ್ಲಿ ತಮ್ಮದೇ ಆದ ಪ್ರತಿಭೆಗಳುಳ್ಳ ವ್ಯಕ್ತಿತ್ವ ಇರುವುದರಿಂದ ಅವುಗಳನ್ನು ಹೊರತರಲು ವೇದಿಕೆ ಮುಖ್ಯವಾಗಿರುತ್ತದೆ. ಅಂತಹ ಅವಕಾಶಗಳನ್ನು ಕಲ್ಪಿಸಿದಾಗ ಅವರಲ್ಲಿ ಅಡಗಿರುವ ವಿವಿಧ ಪ್ರತಿಭೆಗಳನ್ನು ಗುರುತಿಸಿ ಅವರುಗಳನ್ನು ಬೆಳೆಸಲು ಅನುಕೂಲವಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಂ. ವಿಜಯ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕೂಡುಮಂಗಳೂರು ಗ್ರಾಮದ ಆ್ಯಂಟಿ ಗ್ರಾವಿಟಿ ಡಾನ್ಸ್ ಅಂಡ್ ಫಿಟ್ನೆಸ್ ವರ್ಲ್ಡ್ನ ವತಿಯಿಂದ ರಾಮೇಗೌಡ ಬಡಾವಣೆಯ ಮೈದಾನದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸಿದ್ದಲಿಂಗಪುರ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರದ ಪ್ರಧಾನ ಗುರುಗಳಾದ ರಾಜೇಶ್ ನಾಥ್ ಜೀ ಮಾತನಾಡಿ, ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗ್ರಾಮೀಣ ಕಲೆ ಮತ್ತು ಸಂಸ್ಕೃತಿ ಉಳಿಯುವಂತೆ ಮಾಡಲಾಗುವುದು ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಂ. ಚಂದ್ರಶೇಖರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್ ವಹಿಸಿದ್ದರು

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಯುವಕ-ಯುವತಿಯರ ೩೦ ತಂಡಗಳು ಭಾಗವಹಿಸಿದ್ದವು.