ಶನಿವಾರಸಂತೆ, ಮಾ. ೩೦: ಪಟ್ಟಣದ ತ್ಯಾಗರಾಜ ಕಾಲೋನಿಗೆ ಹೊಂದಿಕೊAಡAತಿರುವ ಪರಿವಾರ ದೇವರುಗಳಲ್ಲಿ ಒಂದೆನಿಸಿರುವ ಐತಿಹಾಸಿಕ ಶ್ರೀ ಚಾಮುಂಡೇಶ್ವರಿ ಬನದ ಜೀರ್ಣೋದ್ಧಾರ ಕಾರ್ಯಾರಂಭದ ಹಿನ್ನೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಾಶೇಖರ್, ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎಸ್.ಸಿ. ಶರತ್‌ಶೇಖರ್, ಎಸ್.ಎನ್. ರಘು, ಗೀತಾಹರೀಶ್, ಫರ್ಜಾನಾ ಶಾಹಿದ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ. ಮೇದಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮ ಪಂಚಾಯಿತಿ ಹಿಂದಿನ ಆಡಳಿತ ಮಂಡಳಿ ಬನಕ್ಕೆ ಹೋಗಲು ರಸ್ತೆ, ಚರಂಡಿ ವ್ಯವಸ್ಥೆ, ಒಳಭಾಗಕ್ಕೆ ಕಾಂಕ್ರಿಟ್ ಹಾಕಿಸಿತ್ತು. ಪಕ್ಕದಲ್ಲೇ ಇರುವ ಸಿನಿಮಾ ಥಿಯೇಟರ್, ಕಲ್ಯಾಣ ಮಂಟಪದ ಗಲೀಜು ನೀರು ಹಾಗೂ ಕಾಲೋನಿಯ ಅರ್ಧ ಭಾಗದ ಕಸಕಡ್ಡಿ ತ್ಯಾಜ್ಯವಸ್ತು ಸಹಿತ ಕೊಳಚೆ ನೀರು ಹರಿದು ಬಂದು ಬನದ ಚರಂಡಿಯಲ್ಲಿ ಹರಿಯುತ್ತಿದ್ದು, ಪರಿಸರ ಮಾಲಿನ್ಯಗೊಂಡಿದೆ.

ಈ ಬಗ್ಗೆ ಸ್ಥಳದ ಮಾಲೀಕರು, ಕೋಟಿಪೂಜಾರಿ ಕುಟುಂಬ ಸದಸ್ಯರು ಹಾಗೂ ಸುತ್ತಮುತ್ತಲಿನ ಭಕ್ತರು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರು. ದೂರಿನ ಹಿನ್ನೆಲೆ ಪಂಚಾಯಿತಿ ಆಡಳಿತ ಮಂಡಳಿಯ ೬ ಮಂದಿ ಪದಾಧಿಕಾರಿಗಳು ಹಾಗೂ ಪಿ.ಡಿ.ಓ. ಬನದ ಚರಂಡಿಗೆ ಹರಿದು ಬರುವ ಕೊಳಚೆ ನೀರು ಮತ್ತಿತರ ಅವ್ಯವಸ್ಥೆಯನ್ನು ಸರಿಪಡಿಸುವ ಹಾಗೂ ಅಭಿವೃದ್ಧಿ ಕಾರ್ಯಕ್ಕೆ ಸಹಕಾರ ನೀಡಿ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.