ಕೂಡಿಗೆ, ಮಾ. ೩೦: ಮೌಢ್ಯ ಮುಕ್ತ ಸಮಾಜ ನಿರ್ಮಾಣ ಮಾಡುವ ಸಲುವಾಗಿ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು. ಮೌಢ್ಯದ ವಿರುದ್ಧ ಜನಜಾಗೃತಿ ರೂಪಿಸಬೇಕಾಗಿದೆ ಎಂದು ಖ್ಯಾತ ಪಶು ವೈದ್ಯ ಹಾಗೂ ಕೊಡಗು ಜಿಲ್ಲಾ ವಿಚಾರವಾದಿಗಳ ವೇದಿಕೆಯ ಅಧ್ಯಕ್ಷ, ಡಾ. ಎ.ಸಿ. ಗಣಪತಿ ಕರೆ ನೀಡಿದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವತಿಯಿಂದ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಂಘಟನಾ ಸಮಿತಿಯ ಸಹಯೋಗದಲ್ಲಿ ಕೂಡಿಗೆಯ ಕಾರ್ಪೋರೇಷನ್ ಬ್ಯಾಂಕ್ನ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಎರಡು ದಿನಗಳ ಕಾಲದ ರಾಜ್ಯಮಟ್ಟದ ಜನ ವಿಜ್ಞಾನ ಚಳವಳಿ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನದಿಂದ ಜನ ಸಮುದಾಯದಲ್ಲಿ ಸಮಗ್ರ ಪ್ರಗತಿ ಸಾಧ್ಯವೆಂಬ ದೃಢ ವಿಶ್ವಾಸ ಹೊಂದಿರುವ ರಾಜ್ಯ ವಿಜ್ಞಾನ ಪರಿಷತ್ತು ಸಮಾಜದಲ್ಲಿ ಬೇರೂರಿರುವ ಮೌಢ್ಯದ ವಿರುದ್ಧ ವಿಜ್ಞಾನ ಚಳುವಳಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು. ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವ ಶಾಲಾ ಪಠ್ಯಕ್ರಮದಲ್ಲಿ ವೈಜ್ಞಾನಿಕ ಮನೋಭಾವ ಬೆಳವಣಿಗೆ ಕುರಿತು ವಿಷಯವನ್ನು ಸೇರ್ಪಡೆ ಮಾಡಬೇಕು ವೈಜ್ಞಾನಿಕ ಮನೋಭಾವದ ಕೊರತೆಯಿಂದ ಇಂದು ಸುಶಿಕ್ಷಿತರೇ ಮೌಢ್ಯಕ್ಕೆ ಒಳಗಾಗುತ್ತಿರುವುದರ ಬಗ್ಗೆ ಡಾ. ಗಣಪತಿ ವಿಷಾದ ವ್ಯಕ್ತಪಡಿಸಿದರು.
ವಿಜ್ಞಾನ ಪರಿಷತ್ ಕೇಂದ್ರ ಸಮಿತಿಯ ಗೌರವ ಕಾರ್ಯದರ್ಶಿ ಸಿ. ಕೃಷ್ಣೇಗೌಡ ಮಾತನಾಡಿ, ಜನರಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಹೆಚ್ಚಿಸಿ ಅವರಲ್ಲಿ ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ ಉತ್ತೇಜನ ನೀಡುವುದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಮುಖ ಉದ್ದೇಶವಾಗಿದೆ ಎಂದರು.
ರಾಜ್ಯ ವಿಜ್ಞಾನ ಪರಿಷತ್ತು ಕಾರ್ಯಕಾರಿ ಸಮಿತಿ ಸದಸ್ಯ ಎ.ಎನ್. ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರಲ್ಲಿ ಸಾಕ್ಷರತೆ ಜೊತೆಗೆ ವೈಜ್ಞಾನಿಕ ಸಾಕ್ಷರತೆ ಬೆಳೆಸಿದರೆ ಮಾತ್ರ ಮೌಢ್ಯಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಸಮಾಜದಲ್ಲಿ ಮೌಢ್ಯ ಬೇರೂರಿದ್ದು, ಗ್ರಾಮಮಟ್ಟದಿಂದಲೇ ವಿಜ್ಞಾನ ಚಳವಳಿ ಆರಂಭಗೊಳ್ಳಬೇಕಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಆರ್. ಮಂಜುಳಾ, ಜಿಲ್ಲಾ ವಿಜ್ಞಾನ ಪರಿಷತ್ತು ಮಾಜಿ ಗೌರವಾಧ್ಯಕ್ಷ ಕೆ.ಕೆ. ಮಂಜುನಾಥ್ಕುಮಾರ್ ಮಾತನಾಡಿದರು. ಜಿಲ್ಲಾ ವಿಜ್ಞಾನ ಕಾರ್ಯಕ್ರಮಗಳ ಸಂಘಟಕ ಟಿ.ಜಿ. ಪ್ರೇಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೂಡಿಗೆ ಡಯಟ್ ಪ್ರಾಂಶುಪಾಲ ಎ.ಶ್ರೀಧರನ್, ಕೂಡಿಗೆ ಕಾರ್ಪೊರೇಶನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ಡಾ. ಜಿ. ಸುರೇಶ್, ಸಮಿತಿ ಸದಸ್ಯರಾದ ಮಂಡ್ಯದ ರಾಮಚಂದ್ರ, ಕಲ್ಬುರ್ಗಿಯ ಶ್ರೀಶೈಲ ಘೂಳಿ, ಕೂಡಿಗೆ ಸ.ಪ.ಪೂ. ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಶಿಕ್ಷಣಾಧಿಕಾರಿ ಎಂ. ಕಾಂತರಾಜ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ. ವೆಂಕಟೇಶ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಮಾಜಿ ಅಧ್ಯಕ್ಷ ಫಿಲಿಪ್ ವಾಸ್, ಎಂ.ಎನ್. ವೆಂಕಟನಾಯಕ್, ಪ್ರಮುಖರಾದ ಜಿ. ಶ್ರೀಹರ್ಷ, ಎಸ್. ನಾಗರಾಜ್, ಎಂ. ರಂಗಸ್ವಾಮಿ, ಮಾಲಾದೇವಿ, ಕೂಡಿಗೆ ಡಯಟ್ ಉಪನ್ಯಾಸಕ ಕೆ.ಜಿ. ನೀಲಕಂಠಪ್ಪ ಇದ್ದರು.
ಲೀಲಾಕುಮಾರಿ ತೊಡಿಕಾನ ನಿರೂಪಿಸಿ, ಸಮಿತಿ ಸದಸ್ಯ ಟಿ.ಜಿ. ಕೃಷ್ಣಮೂರ್ತಿರಾಜೇ ಅರಸ್ ಸ್ವಾಗತಿಸಿದರು. ಎಂ.ಇ. ಮೊಹಿದ್ದೀನ್ ವಂದಿಸಿದರು.