ಮಡಿಕೇರಿ, ಮಾ. ೨೯ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು (ಕ.ರಾ.ವಿ.ಪ.), ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವತಿಯಿಂದ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಹಾಗೂ ಕ.ರಾ.ವಿ.ಪ. ಕೊಡಗು ಜಿಲ್ಲಾ ಸಂಘಟನಾ ಸಮಿತಿಯ ಸಹಯೋಗದಲ್ಲಿ ತಾ. ೩೦ ಹಾಗೂ ೩೧ ರಂದು ಕೂಡಿಗೆಯ ಕಾರ್ಪೊರೇಶನ್ ಬ್ಯಾಂಕ್‌ನ ಸ್ವಉದ್ಯೋಗ ತರಬೇತಿ ಸಂಸ್ಥೆ (ಕಾಬ್ಸೆಟಿ)ಯಲ್ಲಿ ಎರಡು ದಿನಗಳ ಕಾಲ ರಾಜ್ಯಮಟ್ಟದ ಜನ ವಿಜ್ಞಾನ ಚಳವಳಿ ಕುರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಕಾರ್ಯಾಗಾರಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ೫೦ ಮಂದಿ ವಿಜ್ಞಾನಾಸಕ್ತ ಕಾರ್ಯಕರ್ತರು/ಶಿಕ್ಷಕರು ಭಾಗವಹಿಸಲಿ ದ್ದಾರೆ. ಸಮಾಜದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಿ ಮೌಢ್ಯದ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಉದ್ದೇಶಿತ ಜನ ವಿಜ್ಞಾನ ಚಳವಳಿ ಕಾರ್ಯಾಗಾರವನ್ನು ಸಂಘಟಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಜಿ ಜಂಟಿ ಕಾರ್ಯದರ್ಶಿಯೂ ಆದ ಜಿಲ್ಲಾ ವಿಜ್ಞಾನ ಕಾರ್ಯಕ್ರಮಗಳ ಸಂಘಟಕ ಶಿಕ್ಷಕ ಟಿ. ಜಿ. ಪ್ರೇಮಕುಮಾರ್ ತಿಳಿಸಿದ್ದಾರೆ.

ವಿಜ್ಞಾನ ಗೋಷ್ಠಿ : ಎರಡು ದಿನಗಳ ಕಾಲ ಒಟ್ಟು ಐದು ವಿಜ್ಣಾನ ಗೋಷ್ಠಿಗಳು ನಡೆಯಲಿವೆ. ತಾ. ೩೦ ರಂದು ೧೨.೦೦ಕ್ಕೆ ‘ಜನ ವಿಜ್ಞಾನ ಚಳವಳಿಯ ಪರಿಚಯ’ ಕುರಿತು ಕರಾವಿಪದ ಖಜಾಂಚಿಯೂ ಆದ ಚಳವಳಿಯ ಪ್ರಮುಖ ಇ.ಬಸವರಾಜ್, ಮಧ್ಯಾಹ್ನ ೨.೩೦ ಕ್ಕೆ ‘‘ಭಾನಾಮತಿ, ಮಾಟ-ಮಂತ್ರ, ಉತ್ತರ ಕರ್ನಾಟಕದ ಹೋರಾಟಗಳು’’ ಕುರಿತು ಜನ ವಿಜ್ಞಾನ ಚಳವಳಿಯ ಗುಲಬರ್ಗಾದ ಹಿರಿಯ ಹೋರಾಟಗಾರ ಶ್ರೀಶೈಲಾ ವೀರಭದ್ರಪ್ಪ, ಸಂಜೆ ೪.೩೦ ಕ್ಕೆ ‘‘ಪವಾಡ ರಹಸ್ಯ ಬಯಲು’’ ಕುರಿತ ಪ್ರಾತ್ಯಕ್ಷಿಕೆ ಯೊಂದಿಗೆ ತರಬೇತಿ ಕುರಿತು ವಿಜ್ಞಾನ ಪರಿಷತ್ತಿನ ಪುಸ್ತಕ ಪ್ರಕಟನಾ ಸಮಿತಿ ಅಧ್ಯಕ್ಷರೂ ಆದ ಡಾ ಹುಲಿಕಲ್ ನಟರಾಜ್ ವಿಷಯ ಮಂಡಿಸಲಿದ್ದಾರೆ. ತಾ. ೩೧ ರಂದು ಬೆಳಿಗ್ಗೆ ೧೦ಕ್ಕೆ ‘ವಾಸ್ತು, ಜ್ಯೋತಿಷ್ಯ ಮತ್ತು ಖಗೋಳ ವಿಜ್ಞಾನ' ಕುರಿತು ಹಾಸನದ ವಿಜ್ಞಾನ ಸಂವಹನಕಾರ ಅಹಮದ್ ಹಗರೆ, ೧೧.೩೦ ಕ್ಕೆ ‘ವಿಜ್ಞಾನ ಚಳವಳಿಯಲ್ಲಿ ಮಹಿಳೆಯರ ಪಾತ್ರ' ಕುರಿತು ವಿಜ್ಞಾನ ಚಳವಳಿಯ ಮಹಿಳಾ ಸಂಘಟಕಿ, ಬೇಲೂರಿನ ಸೌಭಾಗ್ಯಮ್ಮ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಲಾಗಿದೆ. ತಾ. ೩೦ ರಂದು ಬೆಳಿಗ್ಗೆ ೧೦.೩೦ಕ್ಕೆ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಜನ ವಿಜ್ಞಾನ ಚಳವಳಿ ಆಂದೋಲನಕ್ಕೆ ಚಾಲನೆ ನೀಡಲಿ ದ್ದಾರೆ. ರಾಜ್ಯ ವಿಜ್ಞಾನ ಪರಿಷತ್ತಿನ ಕೇಂದ್ರ ಸಮಿತಿಯ ಗೌರವ ಕಾರ್ಯದರ್ಶಿ ಸಿ.ಕೃಷ್ಣೇಗೌಡ ಅವರ ಅಧ್ಯಕ್ಷತೆಯಲ್ಲಿ ಆರಂಭವಾಗಲಿರುವ ರಾಜ್ಯಮಟ್ಟದ ಜನ ವಿಜ್ಞಾನ ಚಳವಳಿ ಕಾರ್ಯಾಗಾರವನ್ನು ಕೊಡಗು ಜಿಲ್ಲಾ ವಿಚಾರವಾದಿಗಳ ವೇದಿಕೆಯ ಅಧ್ಯಕ್ಷರೂ ಆದ ಖ್ಯಾತ ಪಶುವೈದ್ಯ ಡಾ. ಎ. ಸಿ. ಗಣಪತಿ ಉದ್ಘಾಟಿಸಲಿದ್ದಾರೆ.

ಸಮಾರೋಪ : ತಾ. ೩೧ ರಂದು ಅಪರಾಹ್ನ ೨.೩೦ ಕ್ಕೆ ಕ.ರಾ.ವಿ.ಪ.ದ ಖಜಾಂಚಿಯೂ ಆದ ವಿಜ್ಣಾನ ಚಳವಳಿಯ ಪ್ರಮುಖ ಇ.ಬಸವರಾಜ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜ್ಞಾನ ಚಳವಳಿಯ ಪ್ರಮುಖರೂ ಆದ ಕರಾವಿಪದ ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರ್ರೀಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದಾರೆ.